ರಾಮಕುಂಜ ಪ.ಪೂ.ಕಾಲೇಜಿನಲ್ಲಿ ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಮಾಹಿತಿ ಕಾರ್ಯಾಗಾರ

0

ರಾಮಕುಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಮತ್ತು ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯಿದೆಯ ಕುರಿತಾಗಿ ಮಾಹಿತಿ ಕಾರ್ಯಾಗಾರ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.


ಜನಜಾಗೃತಿ ವೇದಿಕೆ ಗೋಳಿತೊಟ್ಟು ವಲಯದ ಅಧ್ಯಕ್ಷ ನೋಣಯ್ಯ ಪೂಜಾರಿ ಅವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಡಬ ಪೊಲೀಸ್ ಠಾಣೆಯ ಎಸ್.ಐ ಅಕ್ಷಯ್‌ರವರು ಮಾತನಾಡಿ, 18 ವರ್ಷದ ಕೆಳಗಿನ ಮಕ್ಕಳ ಮೇಲೆ ಮಾಡುವ ಲೈಂಗಿಕ ದೌರ್ಜನ್ಯಗಳು ಪೋಕ್ಸೋ ಕಾಯ್ದೆ ಅಡಿ ಅಪರಾಧವಾಗಿರುತ್ತದೆ. ಲಿಂಗ ತಾರತಮ್ಯವಿಲ್ಲದೆ ಈ ಕಾಯ್ದೆಯು ಮಕ್ಕಳಿಗೆ ನ್ಯಾಯವನ್ನು ಒದಗಿಸುತ್ತದೆ. ಮಕ್ಕಳು ಸಮಾಜದಲ್ಲಿ ಜಾಗರೂಕರಾಗಿರಬೇಕು. ವ್ಯಕ್ತಿಗಳನ್ನ ಗಮನಿಸಬೇಕು. ಒಳ್ಳೆಯ ಉದ್ದೇಶದಿಂದ ತಮ್ಮ ಬಳಿ ಬರುವವರು ಮತ್ತು ಕೆಟ್ಟ ಉದ್ದೇಶದಿಂದ ತಮ್ಮ ಬಳಿ ಬರುವವರನ್ನು ಪ್ರಾರಂಭದಲ್ಲಿಯೇ ಸೂಕ್ಷ್ಮವಾಗಿ ಗಮನಿಸಿ ಎಚ್ಚರದ ನಡೆಯನ್ನು ಇಡಬೇಕು. ಏನೇ ಸಮಸ್ಯೆ ಆದರೂ ಪೊಲೀಸರಿಗೆ, ಪೋಷಕರಿಗೆ ಅಥವಾ ಉಪನ್ಯಾಸಕರಿಗೆ ಮಾಹಿತಿ ನೀಡಿ ಎಂದು ಹೇಳಿದರು.


ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹರೀಶ್ ಅವರು ಮಾತನಾಡಿ, ವಿದ್ಯಾರ್ಥಿಗಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡಬಾರದು. ಇತ್ತೀಚಿನ ದಿವಸಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ಅಧಿಕವಾಗಿ ಸಮಯವನ್ನು ಕಳೆಯುತ್ತಾ, ತಮ್ಮ ಭಾವಚಿತ್ರವನ್ನು ಅಥವಾ ಇತ್ಯಾದಿ ಗುರುತುಗಳನ್ನು ಹರಿಯಬಿಡುತ್ತಾ ಇದ್ದಾರೆ. ಇಂತಹ ಗುರುತುಗಳ ದುರ್ಬಳಕೆ ಮಾಡುವ ದೊಡ್ಡ ಜಾಲವೇ ಇರುತ್ತದೆ. ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕುತ್ತು ಬರುತ್ತದೆ. ಸ್ವಯಂ ವಿದ್ಯಾರ್ಥಿಗಳು ಕೂಡ ಕಾಲಹರಣ ಮಾಡುವಂತಹ ಸಂದರ್ಭಗಳು ಮೊಬೈಲ್‌ನಿಂದ ಬರುತ್ತದೆ. ಮಾದಕ ವಸ್ತುಗಳಾದ ಡ್ರಗ್ಸ್, ಗಾಂಜಾ ಇವು ಕೂಡ ವಿದ್ಯಾರ್ಥಿಗಳನ್ನು ಲಕ್ಷ್ಯದಿಂದ ದೂರ ಮಾಡಿ, ಆರೋಗ್ಯ ಮತ್ತು ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು ಅಪರಾಧವಾಗಿದೆ. ಬಾಲ್ಯ ವಿವಾಹವೂ ಕೂಡ ಮಕ್ಕಳ ಹಿತ ದೃಷ್ಟಿಯಿಂದ ಅಪರಾಧವಾಗಿದೆ. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಕೂಡ ಸ್ವಯಂ ಶಿಸ್ತು, ಜಾಗೃತಿಯಿಂದ ಇದ್ದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂರಕ್ಷಣಾ ಸಮಿತಿಯ ಸದಾನಂದ ಆಚಾರ್ಯ, ಗ್ರಾಮಾಭಿವೃದ್ಧಿ ಯೋಜನೆಯ ಜಯಶ್ರೀ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕ ಗುಡ್ಡಪ್ಪ ಬಲ್ಯ ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಚೈತ್ರ ಕಾರ್ಯಕ್ರಮ ನಿರೂಪಿಸಿದ್ದರು.

LEAVE A REPLY

Please enter your comment!
Please enter your name here