ಪುತ್ತೂರು:ಭಾರೀ ಮಳೆಗೆ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ಮತ್ತು ಕೋರಿಯದಲ್ಲಿ ಆ.2ರ ನಸುಕಿನ ಜಾವ ಎರಡು ಕಡೆ ಗುಡ್ಡ ಕುಸಿದು ಭಾರೀ ದೊಡ್ಡ ದುರಂತ ಸಂಭವಿಸಿದೆ.ಗುಡ್ಡದ ಮಣ್ಣು ಕುಸಿದು ಹಟ್ಟಿಯ ಮೇಲೆ ಬಿದ್ದ ಪರಿಣಾಮ ಹಟ್ಟಿಯಲ್ಲಿದ್ದ 5 ದನ ಮತ್ತು 1 ಕರು ಸಾವನ್ನಪ್ಪಿದ್ದು, ಮನೆಗಳಿಗೆ ಹಾನಿಯಾಗಿದೆ.
ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿಯಲ್ಲಿ ಗಂಗಾಧರ ಗೌಡ ಮತ್ತು ಮಹಾಬಲ ಗೌಡ ಸಹೋದರರ ಮನೆಯ ಹಿಂಬದಿಯ ಗುಡ್ಡೆ ಜರಿದಿದ್ದು, ಕೋರಿಯದಲ್ಲಿ ವಿಶ್ವನಾಥ ಪೂಜಾರಿ ಎಂಬವರ ಮನೆಯ ಹಿಂಬದಿ ಗುಡ್ಡ ಜರಿದಿದೆ.ಗಂಗಾಧರ ಗೌಡ ಅವರ ಹಟ್ಟಿಯಲ್ಲಿದ್ದ ನಾಲ್ಕು ದನಗಳು ಮತ್ತು ವಿಶ್ವನಾಥ ಪೂಜಾರಿ ಅವರ ಹಟ್ಟಿಯಲ್ಲಿದ್ದ ದನ ಮತ್ತು ಕರು ಘಟನೆಯಲ್ಲಿ ಮೃತಪಟ್ಟಿವೆ.
ಅಂದ್ರಿಗೇರಿಯಲ್ಲಿ ಗಂಗಾಧರ ಗೌಡ ಅವರ ಮನೆಯ ಹಿಂಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ.ಅಡಿಕೆ ಸೋಲಾರ್ ಮೇಲೆ ಮತ್ತು ದನದ ಹಟ್ಟಿಯ ಮೇಲೆ ಗುಡ್ಡದ ಮಣ್ಣು ಕುಸಿದು ಸಂಪೂರ್ಣ ಧರಾಶಾಹಿಯಾಗಿದೆ.ಅವರ ಹಟ್ಟಿಯಲ್ಲಿ ನಾಲ್ಕು ದನಗಳು ಮೃತಪಟ್ಟಿವೆ.ಮಣ್ಣಿನಡಿಯಲ್ಲಿ ಸಿಲುಕಿಕೊಂಡ ಒಂದು ದನವನ್ನು ಹೊರ ತೆಗೆದು ರಕ್ಷಿಸಲಾಗಿದೆ.ಗಂಗಾಧರ ಗೌಡರ ಮನೆ ಪಕ್ಕದಲ್ಲಿರುವ ಸಹೋದರ ಮಹಾಬಲ ಗೌಡರವರ ಮನೆಯ ಹಿಂಭಾಗದ ಗುಡ್ಡೆ ಕುಸಿದು ಅವರ ಮನೆಗೆ ಹಾನಿಯಾಗಿದೆ.ಇದರ ಜೊತೆಗೆ ಮನೆಯ ಪಕ್ಕದಲ್ಲಿ ಹೊಸ ಮನೆ ನಿರ್ಮಾಣದ ತಳಪಾಯದ ಮೇಲೆ ಮಣ್ಣು ಕುಸಿತವಾಗಿದೆ.
ಆ.1ರಂದು ಸಂಜೆ ಸ್ವಲ್ಪ ಮಣ್ಣು ಕುಸಿತಗೊಂಡಿತ್ತು.ಆ.2ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಮತ್ತಷ್ಟು ಪ್ರಮಾಣದ ಮಣ್ಣು ಕುಸಿತಗೊಂಡಿದೆ. ಮಣ್ಣು ಕುಸಿಯುವ ಭೀತಿಯಿಂದ ಅವರು ತಮ್ಮ ದನಕರುಗಳನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.ಹಾಗಾಗಿ ಅವರ ಮನೆ ಪರಿಸರದಲ್ಲಿ ಪ್ರಾಣ ಹಾನಿ ತಪ್ಪಿದೆ.
ಕೋರಿಯರ್‌ನಲ್ಲಿ ಇನ್ನೊಂದು ಘಟನೆ:
ಬೆಳ್ಳಿಪ್ಪಾಡಿ ಗ್ರಾಮದ ಕೋರಿಯರ್ ವಿಶ್ವನಾಥ ಪೂಜಾರಿ ಎಂಬವರ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿದು ಮಣ್ಣು ಜಾರಿ ದನದ ಹಟ್ಟಿಯ ಮೇಲೆ ಎರಗಿದ್ದು, ಹಟ್ಟಿಯಲ್ಲಿರುವ ದನ ಮತ್ತು ಕರು ಸಾವನ್ನಪ್ಪಿದೆ.ಗುಡ್ಡದ ಮಣ್ಣು ಮನೆಯೊಳಗೆ ಹೋಗಿದ್ದು, ಮನೆಗೂ ಹಾನಿಯಾಗಿದೆ.ಸ್ಥಳಕ್ಕೆ ತಹಶೀಲ್ದಾರ್ ಪುರಂದರ, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಕುಮಾರ್ ಭಂಡಾರಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್, ಸದಸ್ಯೆ ಉಷಾ, ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ,ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ, ಬನ್ನೂರು ಸೊಸೈಟಿ ನಿರ್ದೇಶಕ ಮೋಹನ್ ಪಕ್ಕಳ ಸಹಿತ ಹಲವಾರು ಮಂದಿ ಭೇಟಿ ನೀಡಿದರು.
ಭಯಭೀತಿಯಲ್ಲಿ ಮಲಗಿದ್ದೆವು
ಆ.1ರಂದು ಗುಡ್ಡೆಯಿಂದ ಮಣ್ಣು ಕುಸಿದಿತ್ತು.ಹಾಗಾಗಿ ಮತ್ತಷ್ಟು ಮಣ್ಣು ಕುಸಿಯುವ ಭೀತಿ ಕಂಡು ನಾವು ಮನೆಯ ಹಿಂಬದಿ ಹಟ್ಟಿಯಲ್ಲಿದ್ದ ದನಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೆವು. ಆದರೂ ರಾತ್ರಿ ನಮಗೆ ನಿದ್ದೆ ಬರಲಿಲ್ಲ.ಬೆಳಗ್ಗೆ 4 ಗಂಟೆ ಸುಮಾರಿಗೆ ಗುಡ್ಡೆ ಮತ್ತಷ್ಟು ಜರಿದು ಬಿದ್ದಿದೆ.ನಾವು ಇದೀಗ ಸಂಬಂಽಕರ ಮನೆಗೆ ಹೋಗಿ ಆಶ್ರಯ ಪಡೆಯಲಿದ್ದೇವೆ- ಮಹಾಬಲ ಗೌಡ ಅಂದ್ರಿಗೇರಿ
ಹಟ್ಟಿಯಲ್ಲಿ ಒಟ್ಟು 6 ದನಗಳು ಇದ್ದವು.ಅದರಲ್ಲಿ ಐದು ಮಣ್ಣಿನಲ್ಲಿ ಸಿಲುಕಿತ್ತು.ಈ ಪೈಕಿ ಒಂದು ಹೇಗಾದರೂ ಹೊರ ಬಂದಿದೆ.ಉಳಿದ ನಾಲ್ಕು ದನಗಳು ಸಾವನ್ನಪ್ಪಿವೆ.ಸುಮಾರು ೮ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ದನದ ಹಟ್ಟಿ ನಿರ್ಮಾಣ ಮಾಡಲಾಗಿತ್ತು.ಇದೀಗ ಹಟ್ಟಿ ಸಂಪೂರ್ಣ ಹಾನಿಗೊಂಡಿದೆ-
ಕಿರಣ್ ಅಂದ್ರಿಗೇರಿ
(ಗಂಗಾಧರ ಗೌಡರ ಪುತ್ರ)
ಬೆಳಿಗ್ಗೆ ಗಂಟೆ 4.30ರೊಳಗೆ ನಾನು ಒಮ್ಮೆ ಎದ್ದು ಹಟ್ಟಿಯ ಕಡೆ ಹೋಗಿ ದನ, ಕರುವನ್ನು ನೋಡಿ ಬಂದಿದ್ದೆ.ಆಗ ಅವರೆಡೂ ಮಲಗಿದ್ದವು.ಬಳಿಕ ನಾನು ಮನೆಯೊಳಗೆ ಹೋದ ವೇಳೆ ಒಮ್ಮೆಲೇ ಗುಡ್ಡೆ ಕುಸಿದಿದೆ.ತಕ್ಷಣ ಬಂದು ನೋಡಿದಾಗ ದನ,ಕರು ಮಣ್ಣಿನಡಿಯಲ್ಲಿರುವುದು ಗೊತ್ತಾದರೂ ಹೊರ ತೆಗೆಯಲು ಸಾಧ್ಯವಾಗಲಿಲ್ಲ.ದನ ಕರು ಹಾಕಿ ಎರಡು ತಿಂಗಳಾಯಿತಷ್ಟೆ, ಒಳ್ಳೆಯ ಹಾಲು ಕೊಡುತ್ತಿತ್ತು.ಹಿಂದೆ ರೂ.40 ಸಾವಿರಕ್ಕೆ ಅದೇ ದನವನ್ನು ಕೇಳಿದ್ದರೂ ನಾನು ಕೊಡಲಿಲ್ಲ-
ವಿಶ್ವನಾಥ ಪೂಜಾರಿ ಕೋರಿಯರ್