ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾರ್ವಜನಿಕ ಹಾಗೂ ಖಾಸಗಿ ಸೊತ್ತುಗಳಿಗೆ ಹಾನಿ ಸಂಭವಿಸಿದ್ದು, ಶಾಸಕರ ಸೂಚನೆಯಂತೆ ಕಾಂಗ್ರೆಸ್ ಪ್ರಮುಖರು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಹಾನಿಯ ಬಗ್ಗೆ ಸರಕಾರದ ಗಮನಕ್ಕೆ ತಂದು ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯ ಮೂಲಕ ಹೆಚ್ಚಿನ ಅನುದಾನಕ್ಕೆ ಶಾಸಕರು ಬೇಡಿಕೆ ಸಲ್ಲಿಸಿದ್ದಾರೆ. ತೊಂದರೆಗೊಳಗಾದ ಪ್ರದೇಶ ಮತ್ತು ಕುಟುಂಬಗಳ ನೋವಿಗೆ ಸ್ಪಂದಿಸುವ ಸಲುವಾಗಿ ತಮ್ಮ ಅನುಪಸ್ಥಿತಿಯಲ್ಲಿ ಪುತ್ತೂರು ಕಾಂಗ್ರೆಸ್ ಪ್ರಮುಖರು ಇಂಥಹ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಶಾಸಕರು ಸೂಚಿಸಿದ್ದು, ಅದರಂತೆ ವಲಯ ಮತ್ತು ಬೂತ್ ಗಳಲ್ಲಿ ನಡೆದಿರುವಂತ ಮಳೆ ಹಾನಿಯ ಬಗ್ಗೆಯೂ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ. ಕೃಷ್ಣಪ್ರಸಾದ್ ಆಳ್ವ ನೇತೃತ್ವದ ತಂಡ ಬಪ್ಪಳಿಗೆ ಬೈಪಾಸ್ ಗುಡ್ಡ ಕುಸಿತ ಸ್ಥಳ ಸಹಿತ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪ್ರಮಾಣದ ಕುರಿತು ಶಾಸಕರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.