ಪಶ್ಚಿಮಘಟ್ಟದ 56,800 ಚ.ಕಿ.ಮೀ. ‘ಪರಿಸರ ಸೂಕ್ಷ್ಮ ಪ್ರದೇಶ’-ಕೇಂದ್ರ ಸರ್ಕಾರದಿಂದ 5ನೇ ಕರಡು ಅಧಿಸೂಚನೆ ಪ್ರಕಟ

0

ವರದಿ:ವಿಜಯ ಕುಮಾರ್ ಕಡಬ


ಕಡಬ:ಕಡಬ ತಾಲೂಕಿನ 12 ಗ್ರಾಮಗಳ ಸಹಿತ ದ.ಕ.ಜಿಲ್ಲೆಯ 42 ಗ್ರಾಮಗಳನ್ನೂ ಒಳಗೊಂಡು ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶದ 56,800 ಚದರ ಕಿ.ಮೀ. ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಕೇಂದ್ರ ಸರಕಾರ ಐದನೇ ಕರಡು ಅಧಿಸೂಚನೆಯನ್ನು ಜುಲೈ 31ರಂದು ಹೊರಡಿಸಿದೆ.ಈ ಅಧಿಸೂಚನೆಯಿಂದ ಮತ್ತೆ ಈ ಭಾಗದ ಜನರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ.


ಅಧಿಸೂಚನೆ ಪ್ರಸ್ತಾವಿಸಿದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗುಜರಾತ್‌ನ 449 ಚದರ ಕಿ.ಮೀ., ಮಹಾರಾಷ್ಟ್ರದ 17,340 ಚದರ ಕಿ.ಮೀ., ಗೋವಾದ 1,461 ಚದರ ಕಿ.ಮೀ., ಕರ್ನಾಟಕದ 20,668 ಚದರ ಕಿ.ಮೀ.,ತಮಿಳುನಾಡಿನ 6,914 ಚದರ ಕಿ.ಮೀ., ಕೇರಳದ 9,993.7 ಚದರ ಕಿ.ಮೀ. ಪ್ರದೇಶ ಒಳಗೊಂಡಿದೆ.
ಪಶ್ಚಿಮ ಘಟ್ಟಗಳಲ್ಲಿನ ಅಪರೂಪದ ಜೀವ ವೈವಿಧ್ಯ, ನದಿಗಳು, ನೈಸರ್ಗಿಕ ಸಂಪತ್ತು, ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುವ ಉದ್ದೇಶದಿಂದ 59,940 ಚ.ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಂರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 2013ರಲ್ಲಿ ವರದಿ ಸಲ್ಲಿಸಿತ್ತು.ಈ ಸಮಿತಿಯ ಶಿಫಾರಸಿಗಿಂತ 3,114 ಚ.ಕಿ.ಮೀನಷ್ಟು ಕಡಿಮೆ ಭೂ ಪ್ರದೇಶವನ್ನು ಹೊಸ ಕರಡು ಅಽಸೂಚನೆಯಲ್ಲಿ ಗುರುತಿಸಲಾಗಿದೆ.ಆದರೆ, ಅದರ ಅಂತಿಮಗೊಳಿಸುವಿಕೆಯು ಪಶ್ಟಿಮ ಘಟ್ಟವನ್ನು ಹೊಂದಿರುವ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ.ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಎರಡು ತಾಲ್ಲೂಕುಗಳ 13 ಗ್ರಾಮಗಳನ್ನು ಒಳಗೊಂಡಂತೆ ಕೇರಳದ 9,993.7 ಚದರ ಕಿ.ಮೀ ವಿಸ್ತೀರ್ಣದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಹರಡಿದ್ದು, ಅದರಲ್ಲಿ 9,107 ಚ.ಕಿ.ಮೀ ಅರಣ್ಯ ಪ್ರದೇಶ ಮತ್ತು 886.7 ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ.


ಏನಿದು ಪರಿಸರ ಸೂಕ್ಷ್ಮ ಪ್ರದೇಶ:
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು.ಈ ಸಮಿತಿಯು 2011 ಆಗಸ್ಟ್ 31ರಂದು ತನ್ನ ವರದಿ ನೀಡಿತ್ತು.ಈ ವರದಿಯು ಮಾಧವ ಗಾಡ್ಗೀಳ್ ವರದಿ ಎಂದೇ ಜನಪ್ರಿಯವಾಗಿದೆ.ಏಕೆಂದರೆ, ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ನೇತೃತ್ವದ ಸಮಿತಿ ನೀಡಿದ ವರದಿ ಇದಾಗಿತ್ತು.ಈ ವರದಿಯ ಪ್ರಕಾರ ಪಶ್ಚಿಮ ಘಟ್ಟದ ಶೇ. 94ರಿಂದ 97ರಷ್ಟು ಭೂ ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿತ್ತು.ಈ ಪ್ರದೇಶದಲ್ಲಿ ಜನವಸತಿಗೆ ನಿರ್ಬಂಧ ಹೇರಬೇಕೆಂದು ಶಿಫಾರಸ್ಸು ಮಾಡಲಾಗಿತ್ತು.ಈ ವರದಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ, ವಿಜ್ಞಾನಿ ಕಸ್ತೂರಿ ರಂಗನ್ ಅವರ ಸಾರಥ್ಯದಲ್ಲಿ ಮತ್ತೊಂದು ಸಮಿತಿ ರಚಿಸಿತ್ತು.ಈ ಸಮಿತಿಯು ಗಾಡ್ಗೀಳ್ ವರದಿಯಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು, ಕುಂದುಕೊರತೆಗಳನ್ನು ನಿವಾರಿಸಿ ಒಂದು ವರದಿ ಸಿದ್ದಪಡಿಸಿ 2013 ಏಪ್ರಿಲ್ 15ರಂದು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.ಕೇಂದ್ರವು ವರದಿಯನ್ನು ಸ್ವೀಕರಿಸಿತು.ಆದ್ರೆ ಇದೀಗ ಈ ವರದಿಯೂ ಜನರ ವಿರೋಧಕ್ಕೆ ಗುರಿಯಾಗಿದೆ.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಅಽಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಲಿದೆ.


ವರದಿ ಜಾರಿಯಾದರೆ…..:
ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚ,ಕಿ.ಮೀ.ವ್ಯಾಪ್ತಿಯ ಪ್ರದೇಶ(36.49%) ಇಕೋಸೆನ್ಸಿಟಿವ್ ಏರಿಯಾ(ಇಎಸ್‌ಎ)ಕ್ಕೆ ಒಳಪಟ್ಟು ನಿರ್ಬಂಧಿತವಾಗಿರುತ್ತದೆ.ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು.20,000 ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.ಇಎಸ್‌ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗೆ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು.ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.


ಪರಿಣಾಮಗಳು:
ಡಾ|ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುತ್ತದೆ.ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಇಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ.ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ.ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳು ಇರುವುದರಿಂದ ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.ಅಲ್ಲದೆ ದಶಕಗಳಿಂದಲೂ ಅರಣ್ಯ ಪ್ರದೇಶದಲ್ಲಿರುವ ಆದಿವಾಸಿಗಳನ್ನು, ಯಾವುದೇ ಗ್ರಾಮವನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು.


ಐದನೇ ಅಧಿಸೂಚನೆ:
ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿಯ ಮೊದಲ ಕರಡು ಅಧಿಸೂಚನೆ ಹೊರಡಿಸಿದ್ದು 2014ರ ಮಾ.10ರಂದು.ನಂತರ ಎರಡನೇ ಕರಡು ಅಧಿಸೂಚನೆಯನ್ನು 2015ರ ಸೆ.4ರಂದು ಹೊರಡಿಸಿತ್ತು.ಮೂರನೇ ಕರಡು ಅಧಿಸೂಚನೆಯನ್ನು 2017ರ ಫೆ.27ರಂದು ಹೊರಡಿಸಿತ್ತು.ನಾಲ್ಕನೆ ಅಧಿಸೂಚನೆ ಹೊರಡಿಸಲಾಗಿ ಇದೀಗ 5ನೇ ಅಧಿಸೂಚನೆ ಹೊರಬಿದ್ದಿದೆ.ಇಷ್ಟಾದರೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ.ಜನವಿರೋಧ ಕಟ್ಟಿಕೊಳ್ಳುವ ಬದಲು 545 ದಿನಗಳ ಗಡುವು ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಆದರೆ ವರದಿ ಜಾರಿಗೆ ವಿಪಕ್ಷಗಳ ಅಧಿಕಾರವಿರುವ ರಾಜ್ಯ ಸರಕಾರಗಳು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸುತ್ತಲೇ ಬಂದಿವೆ.ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಸಮಿತಿ ರಚಿಸಿ,ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಬಾರದು, ಮಾಡಿದರೂ ಜನಪರವಾದ ಹಲವು ಮಾರ್ಪಾಟುಗಳನ್ನು ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ತಿಳಿಸಿತ್ತು.ಕಸ್ತೂರಿರಂಗನ್ ವರದಿಗೂ ದ.ಕ.ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಬಿ.ರಮಾನಾಥ ರೈಯವರು ಅರಣ್ಯ ಸಚಿವರಾಗಿದ್ದಾಗ, ಜನ ವಸತಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಿ, ಆ ವರದಿಯ ಕೆಲವೊಂದು ಅಂಶಗಳನ್ನು ಕೈಬಿಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.ಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಪ್ರಸ್ತುತ ರಾಜ್ಯ ಸರಕಾರ ಸಿದ್ದತೆ ನಡೆಸಿತ್ತು.ಈ ನಡುವೆ,ಕೇರಳದ ವಯನಾಡಿನಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ದುರಂತದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ಕಸ್ತೂರಿರಂಗನ್ ವರದಿ ಜಾರಿ ಕುರಿತು ಐದನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ.


ತಜ್ಞರ ಸಮಿತಿ ಕಳುಹಿಸಿದ್ದ ಕೇಂದ್ರ:
ಕಸ್ತೂರಿರಂಗನ್ ವರದಿ ಕುರಿತು ರಾಜ್ಯ ಸರ್ಕಾರ, ಜನಪ್ರತಿನಿಽಗಳು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಜನರ ಜತೆ ಚರ್ಚಿಸಲು ಕೇಂದ್ರ ಸರ್ಕಾರ ಸಂಜಯ್‌ಕುಮಾರ್ ನೇತೃತ್ವದ ತಜ್ಞರ ಸಮಿತಿಯನ್ನು ಕಳುಹಿಸಿತ್ತು.ಸರ್ಕಾರದ ಪ್ರತಿನಿಽಗಳ ಜತೆ ಸಮಿತಿ ಒಂದು ಸುತ್ತಿನ ಚರ್ಚೆ ನಡೆಸಿದೆ.ವರದಿ ಜಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಜನಪ್ರತಿನಿಽಗಳು ಹಾಗೂ ಜನರ ಜತೆ ಎರಡನೇ ಹಂತದಲ್ಲಿ ಸಮಿತಿ ಮಾತುಕತೆ ನಡೆಸಿ,ಅವರ ಅಹವಾಲು ಆಲಿಸಲು ನಿರ್ಧರಿಸಿತ್ತು

ವರದಿಯನ್ನು ತಿರಸ್ಕರಿಸುವುದೇ ನಮ್ಮ ತೀರ್ಮಾನ-ಸಿಎಂ
ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ 5ನೇ ಕರಡು ಅಧಿಸೂಚನೆ ಪ್ರಕಟಿಸಿದೆ.ಇದರಲ್ಲಿ ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಚದರ ಕಿಮೀ ಇದೆ.ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಶಿಫಾರಸು ಮಾಡಿರುವ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ತೀರ್ಮಾನವಾಗಿದೆ.ಈ ಬಗ್ಗೆ ಅರಣ್ಯ ಸಚಿವರ ಜೊತೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ
ಪಶ್ಚಿಮಘಟ್ಟ ಹಲವು ನದಿಮೂಲಗಳನ್ನು ಒಳಗೊಂಡ ಜೀವ ವೈವಿಧ್ಯದ ಅಮೂಲ್ಯ ತಾಣ.ಪಾರಂಪರಿಕವಾದ ಅಲ್ಲಿನ ಜನಜೀವನವೂ ಅಷ್ಟೇ ಮುಖ್ಯ.ವರದಿಯಲ್ಲಿನ ವ್ಯಾಪ್ತಿ ಪರಿಶೀಲಿಸಿ, ಜನಜೀವನಕ್ಕೆ ಧಕ್ಕೆಯಾಗದಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಸಲ್ಲಿಸುವುದು ರಾಜ್ಯದ ಕರ್ತವ್ಯ. ಈಗಾಗಲೇ ನೆರೆಯ ಕೇರಳ ಅಂತಹ ಕೆಲಸ ಮಾಡಿದೆ.ಒಂದು ವೇಳೆ ಕೇಂದ್ರ ಸರ್ಕಾರ ಅಂತಿಮ ಅಽಸೂಚನೆ ಹೊರಡಿಸಿದರೆ, ವರದಿಯಲ್ಲಿನ ಎಲ್ಲ ಪ್ರದೇಶಗಳೂ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಸೇರುತ್ತವೆ.ಆಗ ರಾಜ್ಯ ಸಂಕಷ್ಟಕ್ಕೆ ಸಿಲುಕಲಿದೆ.ಹಾಗಾಗಿ, ಅಂತಿಮ ನಿರ್ಧಾರ ತೆಗೆದು ಕೊಳ್ಳಬೇಕಿದೆ ಎಂದು ರಾಜ್ಯ ಅರಣ್ಯ,ಪರಿಸರ ಮತ್ತು ಜೀವಿಶಾಸ ಸಚಿಚ ಈಶ್ವರ ಬಿ.ಖಂಡ್ರೆ ಅವರು ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕಸ್ತೂರಿರಂಗನ್ ವರದಿ ಜಾರಿ ಕೇಂದ್ರ ನಿರ್ಧಾರ ಕೈಗೊಳ್ಳಲಿ
ಮಂಗಳೂರು:ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಹಾಗೂ ಜೀವ ವೈವಿಧ್ಯದ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗಾಗಿ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯದ ಮಾಜಿ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಪರಿಸರ ತಜ್ಞ ಪ್ರೊ|ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸಂರಕ್ಷಣೆ ಕುರಿತು ಸಲ್ಲಿಸಿದ್ದ ವರದಿಗೆ ಜನರಿಂದ ವಿರೋಧ ವ್ಯಕ್ತವಾಗಿದ್ದರಿಂದ, ಅದನ್ನು ಪುನರ್‌ಪರಿಶೀಲಿಸಲು ಕೇಂದ್ರ ಸರ್ಕಾರ ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.ಆ ವರದಿಗೂ ನಮ್ಮ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು.ನಾನು ಅರಣ್ಯ ಸಚಿವನಾಗಿದ್ದಾಗ, ಜನ ವಸತಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಿ, ಆ ವರದಿಯ ಕೆಲವೊಂದು ಅಂಶಗಳನ್ನು ಕೈಬಿಡುವಂತೆ ಸರ್ಕಾರ ಶಿಫಾರಸು ಮಾಡಿತ್ತು.ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರವನ್ನು ಉಳಿಸುವುದು ಕೇಂದ್ರ ಸರ್ಕಾರದ ಹೊಣೆ. ಈ ಬಗ್ಗೆ ಕೇಂದ್ರವು ಐದಾರು ಸಲ ಕರಡು ಅಧಿಸೂಚನೆ ಹೊರಡಿಸಿದ್ದರೂ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ.ಇದೀಗ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಬಳಿಕ ಕೇಂದ್ರವು ಮತ್ತೊಮ್ಮೆ ಕರಡು ಅಽಸೂಚನೆ ಪ್ರಕಟಿಸಿದೆ.ಈ ವಿಚಾರದಲ್ಲಿ ರಾಜ್ಯಗಳಿಗೆ ಅಭಿಪ್ರಾಯ ಹೇಳುವುದಕ್ಕೆ ಮಾತ್ರ ಅಧಿಕಾರವಿದೆ.ವರದಿ ಜಾರಿ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕಿರುವುದು ಕೇಂದ್ರ ಸರಕಾರ.ಸುಮ್ಮನೆ ಈ ವಿಚಾರದಲ್ಲಿ ಕಾಲಹರಣ ಮಾಡುವ ಬದಲು ಪಶ್ಚಿಮ ಘಟ್ಟ ರಕ್ಷಣೆ ದೃಷ್ಟಿಯಿಂದ ಕೇಂದ್ರವು ಸ್ಪಷ್ಟ ನಿರ್ಧಾರವನ್ನು ತಳೆಯಬೇಕು ಎಂದು ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವರದಿ ವಿರುದ್ದ ಉಗ್ರ ಹೋರಾಟ
ಮಲೆನಾಡು ಜನಹಿತ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿಯವರು ಈ ಕುರಿತು ಪ್ರತಿಕ್ರಿಯೆ ನೀಡಿ, ಕಸ್ತೂರಿರಂಗನ್ ವರದಿಯ ಬಗ್ಗೆ ಈಗಾಗಲೇ 5ನೇ ಅಧಿಸೂಚನೆ ಹೊರಬಿದ್ದಿರುವ ಮಾಹಿತಿ ಇದೆ.ನಾವು ಈ ವರದಿಯ ವಿರುದ್ದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಅವೈಜ್ಞಾನಿಕವಾದ ಈ ವರದಿಯಿಂದ ಜನರು ಬೀದಿಗೆ ಬೀಳುವಂತಾಗುತ್ತದೆ.ಈ ಯೋಜನೆಯಿಂದ ಅಭಿವೃದ್ದಿ ಕುಂಠಿತವಾಗುತ್ತದೆ, ಉದಾಃ ಅಣೆಕಟ್ಟುಗಳನ್ನು ಕಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ರಸ್ತೆ ಅಭಿವೃದಿ, ಸಂಪರ್ಕಗಳಿಗೂ ಇದರಿಂದ ತೊಂದರೆಯಾಗುತ್ತದೆ.ಒಟ್ಟಿನಲ್ಲಿ ಈ ಸೂಕ್ಷ್ಮ ವಲಯಕ್ಕೆ ಸೇರಲಿರುವ ಗ್ರಾಮಗಳು ಅಲ್ಲದೆ ಇತರ ಗ್ರಾಮಗಳಿಗೂ ತೊಂದರೆ ಆಗುತ್ತದೆ.ಈ ಬಗ್ಗೆ ಮತ್ತೆ ಈ ವಿಚಾರವನ್ನು ಅಧ್ಯಯನ ಮಾಡಿಕೊಂಡು ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

ದ.ಕ ಜಿಲ್ಲೆಯ ಪ್ರಸ್ತಾವಿತ ಗ್ರಾಮಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಕೊಂಬಾರು, ಇಚ್ಲಂಪಾಡಿ, ಬಲ್ಯ, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ಐನೆಕಿದು, ದೇವಚಳ್ಳ, ಹರಿಹರಪಲ್ಲತಡ್ಕ, ಮಿತ್ತೂರು, ಬಾಳುಗೋಡು, ಮಡಪ್ಪಾಡಿ, ಉಬರಡ್ಕ, ಕಲ್ಮಕಾರು, ಅರಂತೋಡು, ಆಲೆಟ್ಟಿ, ಸಂಪಾಜೆ,ತೊಡಿಕಾನ,ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯಾ ಗ್ರಾಮಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಲಾಗಿದೆ.ಒಂದು ವೇಳೆ ವರದಿ ಜಾರಿಯಾದರೆ ಈ ಗ್ರಾಮಗಳ ವ್ಯಾಪ್ತಿಯಿಂದ ಕೆಲವು ಕಿ.ಮೀ.ಗಳ ದೂರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ.ಇದರಿಂದ ಬಹುತೇಕ ಕಡಬ ತಾಲೂಕಿನ ಜನವಸತಿಗೂ ತೊಂದರೆಯಾಗಲಿದೆ ಎನ್ನುವ ಆತಂಕವನ್ನು ಈಗಾಗಲೇ ಹೋರಾಟಗಾರರು ತಿಳಿಸುತ್ತಲೇ ಬಂದಿದ್ದಾರೆ.

LEAVE A REPLY

Please enter your comment!
Please enter your name here