ಆ.17: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ 50ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಪುತ್ತೂರು: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕಲ್ಲಾರೆ ಮತ್ತು ವಿಶ್ವಹಿಂದೂ ಪರಿಷದ್ ಮಾತೃ ಮಂಡಳಿಯಿಂದ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ 50ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷೆ ವೀಣಾ ಕೊಳತ್ತಾಯ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ನಮ್ಮ ಸಂಸ್ಥೆ ವತಿಯಿಂದ ಪೂಜಾ ಕಾರ್ಯಕ್ರಮವೂ 1974ರಲ್ಲಿ ಪ್ರಾರಂಭಗೊಂಡಿದ್ದು, ಆರಂಭದ ದಿನಗಳಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿದ್ದು, ಆ ಬಳಿಕ 3 ವರ್ಷ ಮಹಾಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ಆಚರಿಸಲಾಗುತ್ತಿತ್ತು. ತದನಂತರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಕಲಾವತಿ ಪೂವಪ್ಪ ಅವರ ನೇತೃತ್ವದಲ್ಲಿ ಆರಂಭಗೊಂಡಿದ್ದು, 50ನೇ ವರ್ಷದ ಸಂಭ್ರಮದಲ್ಲಿದ್ದೇವೆ. ವಿಶ್ವಹಿಂದು ಪರಿಷತ್, ರಾಷ್ಟ್ರ ಸೇವಿಕಾ ಸಮಿತಿಯಿಂದ ಈ ವರಮಹಾಲಕ್ಷ್ಮೀ ಪೂಜೆಯನ್ನು ನಡೆಸುತ್ತಾ ಬರುತ್ತಿದ್ದ ಸಂದರ್ಭ ಕಲಾವತಿ ಪೂವಪ್ಪ, ಸವಿತಾ ರಾಮ್ ಭಟ್, ಪ್ರೇಮ ಕುಡ್ವ, ಲಲಿತಾ ಕೆ.ಟಿ,ಭಟ್, ವತ್ಸಲಾ ಶೆಣೈ, ವೀಣಾ ಕೊಳತ್ತಾಯ ಅವರು ನೇತೃತ್ವ ವಹಿಸಿಕೊಂಡಿದ್ದರು. ಬಳಿಕ ವರಮಹಾಲಕ್ಷ್ಮೀ ಪೂಜಾ ಸಮಿತಿ ಕಲ್ಲಾರೆ ಎಂದು ಸಮಿತಿ ಮಾಡಿಕೊಂಡು ಅದರ ಮೂಲಕ ಪೂಜಾ ಕಾರ್ಯಕ್ರಮ ನೆರವೇರಿಸುತ್ತಿದ್ದೇವೆ. ಕಳೆದ 5 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿಯವರು‌ ನಮ್ಮ ಜೊತೆಯಲ್ಲಿದ್ದಾರೆ ಎಂದ ಅವರು ಆ.17ರಂದು ಪೂಜಾ ಕಾರ್ಯಕ್ರಮದ ಜೊತೆ 50ನೇ ವರ್ಷದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಯಾಗಿ ವಿಶ್ವಹಿಂದು ಪರಿಷತ್ ನ ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ಸುರೇಖಾ ರಾಜ್ ಭಾಗವಹಿಸಲಿದ್ದಾರೆ. ವರಮಹಾಲಕ್ಷ್ಮೀ ಪೂಜೆ ಮಾಡಿಸಿದವರಿಗೆ ವರ್ಷಂಪ್ರತಿ ಪ್ರಸಾದ ನೀಡುವ ಕ್ರಮವಿದ್ದು ಈ ಭಾರಿ 50ನೇ ವರ್ಷದ ಪೂಜೆಯ ಅಂಗವಾಗಿ ಪೂಜಾ ಸೇವಾ ರಶೀದಿ ಮಾಡಿದವರಿಗೆ ಪ್ರಸಾದ ರೂಪದಲ್ಲಿ ಶ್ರೀ ಲಕ್ಷ್ಮೀಯ ಮೂರ್ತಿಯನ್ನು ನೀಡಲಾಗುವುದು ಎಂದು ವೀಣಾ ಕೊಳತ್ತಾಯ ತಿಳಿಸಿದ್ದಾರೆ.


ಆ.16ರಂದು ಏಕಾದಶಿ ಆಗಿರುವುದರಿಂದ ದೇವರಿಗೆ ನೈವೇದ್ಯ ಸಮರ್ಪಣೆ ಮಾಡಲಾಗುವುದಿಲ್ಲ. ದೇವರಿಗೆ ಒಂದು ಹೂವನ್ನು ಇಡುವ ಕ್ರಮ ಇಲ್ಲ. ಈ ನಿಟ್ಟಿನಲ್ಲಿ ಆ.16ರ ಸಂಜೆ ಕಲಶ ಪ್ರತಿಷ್ಠೆ, ಸಂಕಲ್ಪ ಮಾಡಿಕೊಂಡು ಆ.17ಕ್ಕೆ ಬೆಳಿಗ್ಗೆ ಪೂಜೆ ಆರಂಭಗೊಳ್ಳಲಿದೆ. ಲಲಿತ ಸಹಸ್ರನಾಮ ನಡೆಯಲಿದೆ. ಬಳಿಕ ತಿರುಪತಿ ತಿರುಮಲ ಟ್ರಸ್ಟ್ ಬೊಳುವಾರು ಇವರಿಂದ ಭಜನೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕಲ್ಲಾರೆ ಇದರ ಕಾರ್ಯದರ್ಶಿ ಪ್ರೇಮಲತಾ ರಾವ್ ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಕಾರ್ಯದರ್ಶಿ ಪ್ರೇಮಲತಾ ರಾವ್, ಕೋಶಾಧಿಕಾರಿ ಉಮಾ ಡಿ ಪ್ರಸನ್ನ, ವಿಶ್ವಹಿಂದು ಪರಿಷತ್ ಸತ್ಸಂಗ್ ಪ್ರಮುಖ್ ಜಯಲಕ್ಷ್ಮೀ, ಸದಸ್ಯೆ ವತ್ಸಲಾ ರಾಜ್ಞಿ ಉಪಸ್ಥಿತರಿದ್ದರು.




LEAVE A REPLY

Please enter your comment!
Please enter your name here