ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ 

0

ಗ್ರಾಮ ವಿಪತ್ತು ನಿರ್ವಹಣಾ ಸಮಿತಿಗೆ ಹೆಚ್ಚು ಅನುದಾನ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಧಾ‍ರ

  ನಿಡ್ಪಳ್ಳಿ : ಈ ಬಾರಿಯ ಮಳೆಗಾಲದಲ್ಲಿ ಇರ್ದೆ ಮತ್ತು ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ವಿವಿಧ ರೀತಿಯಲ್ಲಿ ಹಾನಿಯಾಗಿದ್ದು ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷೆ ವಿದ್ಯಾಶ್ರೀಯವರ ಅಧ್ಯಕ್ಷತೆಯಲ್ಲಿ ಆ.7 ರಂದು ನಡೆಯಿತು.

 ಚೆಲ್ಯಡ್ಕ ಸೇತುವೆಯ ಮೇಲೆ ಪಿಡಬ್ಲ್ಯೂಡಿ ಇಲಾಖೆಯಿಂದ ಜಲ್ಲಿಯನ್ನು ಮಾತ್ರ ಹಾಕಿ ಹೊಂಡವನ್ನು ಮುಚ್ಚಿದ್ದರು. ಆದರೆ ನೀರಿನ ಪ್ರವಾಹಕ್ಕೆ ಅದು ಕೊಚ್ಚಿಕೊಂಡು ಹೋಯಿತು. ಪುನ: ಸ್ಥಳೀಯ ಯುವಕರು ಸೇರಿ  ಇದನ್ನು ಸರಿಪಡಿಸಿದ್ದರು. ಕೀಲಂಪಾಡಿ ಎಂಬಲ್ಲಿ ಮೋರಿಯ ತಡೆಗೋಡೆ ಕುಸಿದಿದೆ.ಅಲ್ಲದೇ ಎರಡು ಗ್ರಾಮದಲ್ಲಿ  ಮಳೆಗೆ ತುಂಬಾ ಹಾನಿಯಾಗಿದೆ.ಅದಕ್ಕೆ ಪರಿಹಾರ ನೀಡುವಂತೆ ಸದಸ್ಯ ಪ್ರಕಾಶ್ ರೈ,ಮಹೇಶ್,ನವೀನ್ ರೈ ಒತ್ತಾಯಿಸಿದರು. 

ಕೀಲಂಪಾಡಿ ತಡೆಗೋಡೆ  ಕಾಮಗಾರಿಯ ಬಗ್ಗೆ ಸ್ಥಳೀಯರ ಆಕ್ಷೇಪ ಇದ್ದರೂ ಕಾಮಗಾರಿ ನಡೆಸಲಾಗಿದೆ. ಇದರ ಬಗ್ಗೆ ತನಿಖೆ ನಡೆಸುವುದು ಸೂಕ್ತ ಎಂದು ಮೊಯಿದು ಕುಂಞ ಹೇಳಿದರು. ಎರಡು ಗ್ರಾಮಗಳಲ್ಲಿ ಹೆಚ್ಚು ಮಳೆ ಹಾನಿಯಾಗಿದ್ದು ವಿಪತ್ತು ನಿರ್ವಹಣಾ ಅನುದಾನದಲ್ಲಿ ಪರಿಹಾರ ನೀಡಲು ಕಷ್ಟ ಸಾಧ್ಯ ಎಂದು ಅಧ್ಯಕ್ಷೆ ವಿದ್ಯಾಶ್ರೀ ಹೇಳಿದರು. ನಂತರ ಚರ್ಚೆ ನಡೆದು  ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ವಿವಿಧ ರೀತಿಯಲ್ಲಿ ಹಾನಿಯಾಗಿದ್ದು ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲು ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.  ಕೆಲವು ಕಡೆ ಕುಡಿಯುವ ನೀರಿನ  ಹಳೆಯ ಪೈಪು ಲೈನ್ ಗೆ ಜಲಜೀವನ್ ಮಿಷನ್ ಯೋಜನೆಯ  ಲೆಕ್ಷನ್ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು.ಅದಕ್ಕೆ ಉತ್ತರಿಸಿದ ಅಧ್ಯಕ್ಷೆ  ಪಂಚಾಯಿತಿಗೆ  ಹ್ಯಾಂಡ್ ಓವರ್ ಆಗುವ ಸಂದರ್ಭದಲ್ಲಿ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು  ಹೇಳಿದರು.       ಸದಸ್ಯ ಗಂಗಾಧರ್ ಗೌಡ ಮಾತನಾಡಿ ಮಕ್ಕಳ ಪೋಷಕರು ಖರ್ಚು ಮಾಡಿ ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಿದ್ದಾರೆ, ಆದರೆ ಇನ್ನೂ ಸ್ಕಾಲರ್ಶಿಪ್ ಬಂದಿಲ್ಲ ಎಂದು ಹೇಳಿದರು.

ಅಂಗಡಿ ಕೋಣೆ ಯಾಕೆ ಏಲಂ ಕರೆದಿಲ್ಲ…?
ಅಂಗಡಿ ಕೋಣೆ ಏಲಂ ವಿಷಯದ ಬಗ್ಗೆ ವಿಷಯ ಪ್ರಸ್ತಾವಿಸಿದ  ಸದಸ್ಯ ಮಹಾಲಿಂಗ ನಾಯ್ಕ, ಮೊಯಿದ್ ಕುಂಞ  ಯವರು ಅಂಗಡಿ ಕೋಣೆ ಬಾಡಿಗೆ ಅವಧಿ ಮುಗಿದಿದೆ.ಅವಧಿ ಮುಗಿದರೂ  ಯಾಕೆ ಎಲಂ ಕರೆದಿಲ್ಲ ಎಂದು ಪಿಡಿಓ ರವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಿಡಿಒ ಏಲಂ ಮಾಡಲು ನೀವು ಡೇಟ್ ಕೊಡಿ  ಎಂದು ಹೇಳಿದರು. ಏಲಂ ಕುರಿತು ಈಗ ಚರ್ಚೆ ಬೇಡ. ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಅಧ್ಯಕ್ಷರು ಉಪಾಧ್ಯಕ್ಷರು ಹೇಳಿ ಚರ್ಚೆಗೆ ತೆರೆ ಹೇಳಿದರು.

ಶಾಸಕರಿಗೆ ಅಭಿನಂದನೆ; 
9/11 ನ್ನು ತಾಲೂಕು ಕೇಂದ್ರದಲ್ಲಿ ಸಿಗುವಂತೆ ಮಾಡಿದ  ಮತ್ತು ಪುತ್ತೂರಿನಿಂದ ಗುಮ್ಮಟಗದ್ದೆವರೆಗೆ ಕೆ.ಎಸ್.ಅರ್.ಟಿ.ಸಿ ಬಸ್ ಸೇವೆ ಆರಂಭಿಸಲು ಕಾರಣಕರ್ತರಾದ ಶಾಸಕ ಅಶೋಕ್ ಕುಮಾರ್ ಇವರಿಗೆ ಸದಸ್ಯ ನವೀನ್ ರೈ ಅಭಿನಂದನೆ ಸಲ್ಲಿಸಿದರು. 

ಧ್ವಜಾರೋಹಣಕ್ಕೆ ಪ್ರತಿಯೊಬ್ಬರೂ ಭಾಗವಹಿಸಿ;
ಸ್ವಾತಂತ್ರ್ಯ ದಿನಾಚರಣೆಯಂದು  9 ಗಂಟೆಗೆ ಧ್ವಜಾರೋಹಣ ಮಾಡಲಾಗುವುದು ಎಂದ ಅಧ್ಯಕ್ಷರು ಸಿಬ್ಬಂದಿಗಳು, ಸದಸ್ಯರು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಪ್ರಮುಖ ನಿರ್ಣಯಗಳು; 
*ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ  ಶಾಲೆ ಕಟ್ಟಡ ಶಿಥಿಲಗೊಂಡಿದ್ದು ಅದರ  ದುರಸ್ತಿಗೆ ಅನುದಾನ ಒದಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಬರೆಯುವುದು ಎಂದು ನಿರ್ಣಯಿಸಲಾಯಿತು. 
*  ಆವರಣ ಗೋಡೆ ರಚನೆ ಮತ್ತು ಕೈತೋಟ ನಿರ್ಮಿಸುವ ಬಗ್ಗೆ ಇರ್ದೆ ಉಪ್ಪಳಿಗೆ ಶಾಲೆಯಿಂದ ಬಂದ ಮನವಿ ಬಗ್ಗೆ ಚರ್ಚಿಸಿದ ಸಭೆಯಲ್ಲಿ ಅದನ್ನು ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.


ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಅಹ್ವಾನ ; ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ  9 ಜನ ಸದಸ್ಯರ ಆಯ್ಕೆ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಬಂದ ಸುತ್ತೋಲೆಯನ್ನು ಸಭೆಯಲ್ಲಿ ಮಂಡಿಸಿ ಇದರಲ್ಲಿ ಆಸಕ್ತಿ ಇರುವವರು ತಮ್ಮ ಅರ್ಜಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಬಹುದು ಎಂದು ತಿಳಿಸಲಾಯಿತು.

  ಉಪಾಧ್ಯಕ್ಷ ಮಹೇಶ್.ಕೆ, ಸದಸ್ಯರಾದ ನವೀನ್ ರೈ, ಗಂಗಾಧರ ಗೌಡ, ಮೊಯಿದು ಕುಂಞ, ಮಹಾಲಿಂಗ ನಾಯ್ಕ,ಸುಮಲತಾ, ಲಲಿತಾ ಚಿದಾನಂದ, ರಮ್ಯ.ಕೆ, ಲಲಿತಾ,ಚಂದ್ರಶೇಖರ ರೈ, ಪಾರ್ವತಿ.ಎಂ,ವಿನೋದ್ ಕುಮಾರ್ ರೈ,ಪವಿತ್ರ.ಡಿ, ಬೇಬಿ ಜಯರಾಮ,ಉಮಾವತಿ, ಪ್ರಕಾಶ್ ರೈ,ಗೋಪಾಲ.ಬಿ ಉಪಸ್ಥಿತರಿದ್ದರು.ಪಿಡಿಒ ಸೌಮ್ಯ, ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು.ಸಿಬ್ಬಂದಿಗಳಾದ ಕವಿತಾ, ಸಂದೀಪ್, ಸವಿತಾ, ಚಂದ್ರಾವತಿ ಸಹಕರಿಸಿದರು.ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here