ಕೌಕ್ರಾಡಿ-ಮಣ್ಣಗುಂಡಿ ಪರಿಸರದಲ್ಲಿ ನಿರಂತರ ಕಾಡಾನೆ ದಾಳಿ, ವ್ಯಾಪಕ ಕೃಷಿ ಹಾನಿ

0

ನೆಲ್ಯಾಡಿ: ಕಳೆದ ನಾಲ್ಕೈದು ದಿನಗಳಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪರಿಸರದಲ್ಲಿ ಜೋಡಿ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ವ್ಯಾಪಕ ಕೃಷಿ ಹಾನಿಗೊಳಿಸುತ್ತಿರುವುದಾಗಿ ವರದಿಯಾಗಿದೆ.


ಅ.16ರಂದು ರಾತ್ರಿ ಮಣ್ಣಗುಂಡಿ ನಿವಾಸಿಗಳಾದ ಹರಿಯಪ್ಪ ಗೌಡ, ಮಿಥುನ್, ವಿನೋದ್, ನೀಲಮ್ಮ, ಮೋಹನ ಅವರ ಕೃಷಿ ತೋಟಕ್ಕೆ ನುಗ್ಗಿ ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶಗೊಳಿಸಿವೆ. ಅಲ್ಲದೇ ಕಾಡಾನೆ ದಾಳಿಗೆ ತೋಟದಲ್ಲಿದ್ದ ಸ್ಪಿಂಕ್ಲರ್ ಪೈಪುಲೈನ್‌ಗಳಿಗೂ ಹಾನಿಯಾಗಿದೆ. ಭತ್ತದ ಗದ್ದೆಗಳಿಗೂ ಕಾಡಾನೆ ದಾಳಿ ನಡೆಸಿರುವುದರಿಂದ ಭತ್ತದ ಕೃಷಿಯೂ ನಾಶಗೊಂಡಿದ್ದು ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮನೆಯಂಗಳದಲ್ಲೇ ಸಂಚಾರ;
ಕಾಡಾನೆಗಳು ತಡರಾತ್ರಿ ವೇಳೆ ಮನೆಯಂಗಳದಲ್ಲೇ ಸಂಚಾರ ಮಾಡುತ್ತಿರುವುದರಿಂದ ರಾತ್ರಿ ವೇಳೆ ಮನೆಯಿಂದ ಹೊರಬರಲು ಜನ ಭಯಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಅ.೧೬ರ ತಡರಾತ್ರಿ ವೇಳೆ ಮಣ್ಣಗುಂಡಿ ನಿವಾಸಿ ಹರಿಯಪ್ಪ ಗೌಡ ಅವರ ಮನೆಯ ಅಂಗಳದಲ್ಲೇ ಕಾಡಾನೆಗಳು ಸಂಚಾರ ನಡೆಸಿವೆ. ಆನೆಗಳ ಹೆಜ್ಜೆ ಗುರುತು ಅಂಗಳದಲ್ಲಿ ಕಾಣಿಸಿಕೊಂಡಿದೆ. ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಕೃಷಿ ತೋಟಗಳಿಗೆ ಕಾಡಾನೆಗಳು ನಿರಂತರ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿವೆ. ಕಾಡಾನೆಗಳ ಪದೇ ಪದೇ ದಾಳಿಯಿಂದ ಕೃಷಿಕರು ಕಂಗೆಟ್ಟಿದ್ದು ಕಾಡಾನೆಗಳು ಕೃಷಿ ತೋಟಕ್ಕೆ ಬರದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here