ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ-ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿ-ನಾಳೆ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

0

ಕಾವು: 2023-24ನೇ ಆರ್ಥಿಕ ವರ್ಷಾಂತ್ಯಕ್ಕೆ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿದ ತಾಲೂಕಿನ ಏಕೈಕ ಸಹಕಾರಿ ಸಂಘವಾದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಆ.14ರಂದು ಮಂಗಳೂರಿನಲ್ಲಿ ನಡೆಯಲಿರುವ ಎಸ್‌ಸಿಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಸತತ 11ನೇ ಬಾರಿಗೆ ಪ್ರಶಸ್ತಿ:
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸತತವಾಗಿ ಕಳೆದ 11 ವರ್ಷದಿಂದ ವಿವಿಧ ಸಾಧನೆಗಳಿಗಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಯಾಗುತ್ತಿದೆ. 2013-14ನೇ ಸಾಲಿನಿಂದ ಹಲವು ಬಾರಿ ಸಾಲ ವಸೂಲಾತಿ ಸಾಧನೆಗಾಗಿ, ಸಂಘದ ಪ್ರಗತಿ, ಅಭಿವೃದ್ಧಿಯ ಸಾಧನೆಗಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿ, ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆಯುತ್ತಿದೆ.


ಸಂಘದ ಕಾರ್ಯ ಸಾಧನೆ:
110 ವರ್ಷಗಳ ಇತಿಹಾಸ ಹೊಂದಿರುವ ಕೇವಲ 2 ಗ್ರಾಮ ವ್ಯಾಪ್ತಿಯನ್ನು ಹೊಂದಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, ಕಾವುನಲ್ಲಿ ಪ್ರಧಾನ ಕಛೇರಿ, ಈಶ್ವರಮಂಗಲ ಮತ್ತು ಕರ್ನೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಸಂಘವು ನಿರಂತರವಾಗಿ ಉತ್ತಮ ಪ್ರಗತಿ, ಸಾಧನೆಯನ್ನು ಮಾಡುತ್ತಾ ಬರುತ್ತಿದ್ದು, ಆಡಿಟ್ ವರದಿಯಲ್ಲೂ ನಿರಂತರವಾಗಿ ಎ ತರಗತಿಯನ್ನು ಪಡೆದುಕೊಂಡಿದೆ.

2023-24ರಲ್ಲಿ ಸಾರ್ವಕಾಲಿಕ ದಾಖಲೆಯ ವ್ಯವಹಾರ:
ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಈವರೆಗಿನ ಎಲ್ಲಾ ದಾಖಲೆಯನ್ನು ಮೀರಿ ಸಾರ್ವಕಾಲಿಕ ಸಾಧನೆಯನ್ನು ಮಾಡಿದೆ. ವರ್ಷಾಂತ್ಯಕ್ಕೆ ರೂ.245.50 ಕೋಟಿ ವಾರ್ಷಿಕ ವ್ಯವಹಾರವನ್ನು ಮಾಡಿ ರೂ.1,25,03,452 ನಿವ್ವಳ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ ರೂ. 40.06 ಕೋಟಿ ವಿವಿಧ ಠೇವಣಿಗಳನ್ನು ಹೊಂದಿದ್ದು, ರೂ. 32.81 ಕೋಟಿ ಸಾಲ ಹೊರಬಾಕಿ ಹೊಂದಿದೆ. ರೂ. 52.03 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ರೂ. 4.08 ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಸಿ ರೂ. 20.45 ಲಕ್ಷ ವ್ಯಾಪಾರ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ ಸಂಘದಲ್ಲಿ 2248 ಜನ ಸದಸ್ಯರಿದ್ದು, ರೂ.2.69 ಕೋಟಿ ಪಾಲು ಬಂಡವಾಳ ಹೊಂದಿದೆ. ಆರ್ಥಿಕ ವರ್ಷದಲ್ಲಿ ರೂ. 17.40 ಕೋಟಿ ಶೂನ್ಯಬಡ್ಡಿದರದ ಬೆಳೆ ಸಾಲ ಮತ್ತು ರೂ.1.28 ಕೋಟಿ ಕೃಷಿ ಅಭಿವೃದ್ಧಿ ಸಾಲ, ರೂ.21.54 ಕೋಟಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗಿದೆ.


ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ:
ಹಲವು ಬಾರಿ ಸಾಲ ವಸೂಲಾತಿಯಲ್ಲಿ ಶೇ.100 ಗುರಿ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲೂ ಶೇ.100 ಗುರಿ ಸಾಧನೆಯೊಂದಿಗೆ ತಾಲೂಕಿನಲ್ಲೇ ದಾಖಲೆಯನ್ನು ಮಾಡಿದೆ.

ಆಡಳಿತ ಮಂಡಳಿ:
ಸಂಘದ ಆಡಳಿತ ಮಂಡಳಿಯಲ್ಲಿ ನನ್ಯ ಅಚ್ಚುತ ಮೂಡೆತ್ತಾಯರವರು ಅಧ್ಯಕ್ಷರಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಉಪಾಧ್ಯಕ್ಷರಾಗಿ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾಗಿ ಪ್ರವೀಣ್ ರೈ ಮೇನಾಲ, ಮಂಜುನಾಥ ರೈ ಸಾಂತ್ಯ, ಶಿವಪ್ರಸಾದ್ ಕೊಚ್ಚಿ, ಲೋಕೇಶ್ ಚಾಕೋಟೆ, ಹೇಮಾವತಿ ಚಾಕೋಟೆ, ಮೋಹನಾಂಗಿ ಬೀಜಂತಡ್ಕ, ಶ್ರೀಧರ್ ರಾವ್ ನಿಧಿಮುಂಡ, ರಾಮಣ್ಣ ನಾಯ್ಕ ಕುದ್ರೋಳಿ, ಲೋಹೀತ್ ಅಮ್ಚಿನಡ್ಕ, ವಲಯ ಮೇಲ್ವಿಚಾರಕ ಶರತ್ ಡಿ ಇವರುಗಳು ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕೇಶವಮೂರ್ತಿ ಪಿ.ಜಿ ಮತ್ತು ಸಿಬ್ಬಂದಿ ವರ್ಗದವರು ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


110 ವರ್ಷಗಳ ಇತಿಹಾಸ ಹೊಂದಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೇವಲ 2 ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದರೂ ವರ್ಷದಿಂದ ವರ್ಷಕ್ಕೆ ದಾಖಲೆಯ ಸಾಧನೆಯನ್ನು ಮಾಡುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಾಲ ವಸೂಲಾತಿಯಲ್ಲಿ ಶೇ.100 ಗುರಿ ಸಾಧನೆಯೊಂದಿಗೆ ರೂ. 1.25 ಕೋಟಿಗೂ ಮಿಕ್ಕಿ ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ಪ್ರಗತಿ, ಸಾಧನೆಗಾಗಿ ಸತತವಾಗಿ 11 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಯಾಗುತ್ತಿರುವುದು ಸಂತಸ ತಂದಿದೆ. ಸಂಘದ ಪ್ರಗತಿ, ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಕೃತಜ್ಞರಾಗಿದ್ದೇವೆ. ಮತ್ತು ಸಂಘವು ನಿರಂತರವಾಗಿ ಗಣನೀಯವಾದ ಸಾಧನೆ ಮಾಡಲು ಸಹಕರಿಸುತ್ತಿರುವ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ, ಸಂಘದ ಸದಸ್ಯರುಗಳಿಗೆ, ಎಸ್‌ಸಿಡಿಸಿಸಿ ಬ್ಯಾಂಕ್‌ಗೆ, ಸಂಘದ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ.

-ನನ್ಯ ಅಚ್ಚುತ ಮೂಡೆತ್ತಾಯ,ಅಧ್ಯಕ್ಷರು, ಕಾವು ಪಿಎಸಿಎಸ್


ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ವಿಭಾಗದಲ್ಲೂ ಪ್ರಗತಿಯನ್ನು ಸಾಧಿಸಿ ಸಾರ್ವಕಾಲಿಕ ಸಾಧನೆಯನ್ನು ಮಾಡಿದೆ, ರೂ.245.50 ಕೋಟಿ ವ್ಯವಹಾರದ ಮೂಲಕ ರೂ.1.25 ಕೋಟಿ ಲಾಭ ಗಳಿಸಿ, ಸಾಲ ಮರುಪಾವತಿಯಲ್ಲಿ ಶೇ.100 ಸಾಧನೆ ಮಾಡಲಾಗಿದೆ, ಸಂಘದ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ, ಸಿಬ್ಬಂದಿಗಳ ಶ್ರಮ ಮತ್ತು ಸದಸ್ಯರ ಸಹಕಾರದ ಮೂಲಕ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಮುನ್ನಡೆಯಲು ಸಹಕಾರಿಯಾಗಿದೆ. ಸಂಘದ ಸಾಧನೆಗಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿಯ ಗೌರವಕ್ಕೆ ಸಂತೋಷವಾಗಿದೆ.

ಕೇಶವಮೂರ್ತಿ ಪಿ.ಜಿ, ಸಿಇಓ ಕಾವು ಪಿಎಸಿಎಸ್.

LEAVE A REPLY

Please enter your comment!
Please enter your name here