ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೊತ್ಸವ ಆಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.


ನಿವೃತ್ತ ಸೈನಿಕ ಚಿತ್ತರಂಜನ್ ಶೆಟ್ಟಿ ಅವರು ಧ್ವಜಾರೋಹಣಗೈದು, ದೇಶ ಸೇವೆಯ ಸವಿ ನೆನಪನ್ನು ಮೆಲುಕು ಹಾಕುತ್ತಾ, ನಮ್ಮ ದೇಶ ಸುಂದರ ದೇಶ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹೆಮ್ಮೆಯ ಸೈನಿಕರ ಏಕತಾ ಮನೋಭಾವದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ವಿದ್ಯಾರ್ಥಿಗಳೆಲ್ಲರೂ ದೇಶವನ್ನು ಪ್ರೀತಿಸುವ, ಸಹಕಾರ ಬಾಳ್ವೆಯಿಂದ, ನಿಷ್ಠೆಯಿಂದ ಪ್ರಯತ್ನಶೀಲರಾಗಬೇಕು ಹಾಗೂ ನಮ್ಮ ದೇಶದ ಗೌರವವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ತಿಳಿಸಿದರು.


ಸಭಾಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಸತ್ಯಾಗ್ರಹ, ಸ್ವದೇಶಿ ವಸ್ತುಗಳ ಬಳಕೆ ಎಂಬ ಮೂಲ ಮಂತ್ರದೊಂದಿಗೆ ಎಲ್ಲರ ಒಗ್ಗಟ್ಟಿನಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ವಿದ್ಯಾರ್ಥಿಗಳೆಲ್ಲರೂ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ದೇಶ ರಕ್ಷಣೆಯ ಚಿಂತನೆ ಮಾಡುತ್ತಾ, “ವಿಶ್ವಗುರು” ಆಗಲು ಪ್ರಯತ್ನ ಪಡಬೇಕೆಂದು ಹೇಳಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಅವರು ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ದೇಶಭಿಮಾನ ಬೆಳೆಸಿಕೊಳ್ಳಬೇಕು. ಈ ಪುಣ್ಯದಿನದಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನೆದುಕೊಂಡು ಐಕ್ಯತೆಯಿಂದ ಒಂದೇ ಎಂಬ ಭಾವನೆಯಿಂದ ಬದುಕಬೇಕೆಂದು ತಿಳಿಸಿದರು.


ವೇದಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಚಿತ್ತರಂಜನ್ ಶೆಟ್ಟಿ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಸಹಶಿಕ್ಷಕಿ ಕು. ನಾಯ್ಕ್ ಅಶ್ವಿನಿ ಹಾಗೂ ವಿದ್ಯಾರ್ಥಿಗಳಾದ ಆಯುಶ್ ದೇವ್, ಜನನಿ, ಶರಣ್ಯ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು ಎನ್ ಸ್ವಾಗತಿಸಿದರು. ವಸಂತ ಹಾಗೂ ಜಯಶ್ರೀ ಎಂ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿ ಪೋಷಕರು, ಶಿಕ್ಷಕ-ಶಿಕ್ಷಕೇತರ ವೃಂದದವರು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು.

LEAVE A REPLY

Please enter your comment!
Please enter your name here