ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೆಪಿಎಸ್ ಕೆಯ್ಯೂರಿನ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು.
ಸ್ವಾತಂತ್ರ್ಯ ಸಿಗುವ ಮೊದಲು ನಾವು ಬಾಹ್ಯ ಶಕ್ತಿಗಳ ವಿರುದ್ಧ ಹೋರಾಡಬೇಕಿತ್ತು. ಆದರೀಗ ಒಳಗಿನ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ. ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ಆಂತರಿಕ ಶತ್ರುಗಳಿಂದ ನಮಗಿಂದು ಬಿಡುಗಡೆ ಬೇಕಿದೆ ಎಂದರು. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ದೇಶಭಕ್ತರ ಸ್ಮರಣೆ ಮಾಡುವುದಷ್ಟೇ ಅಲ್ಲ,ನಾವೂ ದೇಶಪ್ರೇಮಿಗಳಾಗಬೇಕು ಎಂದರು. ಕೆಪಿಎಸ್ ಕೆಯ್ಯೂರಿನ ಪ್ರಾಂಶುಪಾಲರಾದ ಇಸ್ಮಾಯಿಲ್ ಪಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ದೇಶಕ್ಕಾಗಿ ಬಲಿದಾನಗೈದವರ ತತ್ವಾದರ್ಶಗಳನ್ನು ಪಾಲಿಸುವುದು ಹಾಗೂ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಅವರಲ್ಲಿದ್ದ ಸಹಕಾರ, ಪ್ರಾಮಾಣಿಕತೆ, ಸತ್ಯ, ನೀತಿ, ಒಗ್ಗಟ್ಟು, ವಿಧೇಯತೆ, ದೇಶಪ್ರೇಮ, ಧೈರ್ಯ ಇತ್ಯಾದಿ ಗುಣಗಳನ್ನು ನಾವೂ ರೂಢಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸ್ವಾತಂತ್ರೋತ್ಸವ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿ ತೇಜಸ್ ಪಿ.ಎಂ ತಯಾರಿಸಿದ ಭಾರತ ಮಾತೆಯ ಕಲಾತ್ಮಕ ಪ್ರತಿಕೃತಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಧ್ವಜಾರೋಹಣದ ವೇಳೆ ಧ್ವಜವಂದನೆ ಸಲ್ಲಿಸುತ್ತಾ ರಾಷ್ಟ್ರಗೀತೆ ಹಾಡಿದ ಬಳಿಕ ವಿದ್ಯಾರ್ಥಿಗಳು ಧ್ವಜಗೀತೆ, ರೈತ ಗೀತೆಗಳನ್ನು ಹಾಡಿದರು. ಘೋಷಣೆಗಳನ್ನು ಕೂಗಿದರು. ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೆಯ್ಯೂರು ಗ್ರಾಮಪಂಚಾಯತಿ ವತಿಯಿಂದ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿಗಳು, ಎಸ್ ಡಿ ಎಂ ಸಿ ಸದಸ್ಯರು, ಪೂರ್ವ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.