ಭಗವದ್ಗೀತೆಯ ಮೂಲಕ ಸದಾ ಸೂರ್ಯೋದಯ ಕಾಣುವ- ಅನಿಲ ದೀಪಕ್ ಶೆಟ್ಟಿ
ಪುತ್ತೂರು: ವಿಶ್ವಹಿಂದು ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಷಷ್ಠಿಪೂರ್ತಿ ಸಂಭ್ರಮದ ಮೊಸರುಕುಡಿಕೆ ಉತ್ಸವಕ್ಕೆ ಪೂರ್ವಭಾವಿಯಾಗಿ ಆ.25ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ಚರ ದೇವಳದ ಸಾರ್ವಜನಿಕ ಗಣೇಶೋತ್ಸವದ ಸಭಾಂಗಣದಲ್ಲಿ ಶ್ರೀ ಕೃಷ್ಣವೇಷ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅನಿಲ ದೀಪಕ್ ಶೆಟ್ಟಿ ಮಾತನಾಡಿ, ಎಲ್ಲವೂ ಇದ್ದು ಎಲ್ಲವನ್ನೂ ತ್ಯಜಿಸಿದವ ಶ್ರೀಕೃಷ್ಣ ಪರಮಾತ್ಮ. ಯಾಕೆಂದರೆ ಆತನಿಗೆ ಸಮಾಜವೇ ಕುಟುಂಬ. ಕಳೆದು ಹೋದ ದಿನಗಳ ಬಗ್ಗೆ ಚಿಂತಿಸಿ ಫಲವಿಲ್ಲ ಎಂದು ಭಗವಂತ ಭಗವದ್ಗೀತೆಯ ಮೂಲಕ ತಿಳಿಸಿಕೊಟ್ಟಿದ್ದಾನೆ. ಹಾಗಾಗಿ ಇವತ್ತು ಭಗವದ್ಗೀತೆ ಮಕ್ಕಳಿಗೆ ಹೇಳಿಕೊಡದಿದ್ದರೆ ಸೂರ್ಯೋದಯದ ಮುಂದೆ ಕಣ್ಣು ಮುಚ್ಚಿಕೂತಂತೆ. ಹಾಗಾಗಿ ಭಗವದ್ಗೀತೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಎಲ್ಲಾ ತಾಯಂದಿರಿಂದ ಆಗಬೇಕು ಎಂದರು.
ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ಪ್ರಭಾವತಿ ಸ್ವಾಗತಿಸಿದರು. ದುರ್ಗಾ ವಾಹಿನಿ ಜಿಲ್ಲಾ ಸಂಯೋಜಕಿ ಹೇಮ ಸುಭಾಷಿಣಿ ವಂದಿಸಿದರು. ಕು. ಮಾನಸ, ಹಂಪನ, ಪವಿತ್ರ ಪ್ರಾರ್ಥಿಸಿದರು. ಸುಕೀರ್ತಿ ಅತಿಥಿಯನ್ನು ಗೌರವಿಸಿದರು.
ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಜಗದೀಶ್ ನೀರ್ಪಾಜೆ, ಶ್ರೀಧರ್ ತೆಂಕಿಲ, ಜಯಂತ್ ಕುಂಜೂರುಪಂಜ, ಸಹಿತ, ಪ್ರಮುಖರು ಉಪಸ್ಥಿತರಿದ್ದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀಕೃಷ್ಣ ವೇಷ ಸ್ಪರ್ಧೆ ಮತ್ತು ಶಂಖನಾದ ಸ್ಪರ್ಧೆ ನಡೆಯಿತು.