ಬಲ್ನಾಡು:ಉಜ್ರುಪಾದೆ ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮಗಳು ಸಂಪನ್ನ

0

ಪುತ್ತೂರು: ಬಲ್ನಾಡು ಉಜ್ರುಪಾದೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಎರಡು ದಿನಗಳ ಕಾಲ ಬಲ್ನಾಡು ವಿನಾಯಕ ನಗರದ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಕೂಟಗಳು ಹಾಗೂ ಸ್ಪರ್ಧೆಗಳೊಂದಿಗೆ ಮೇಳೈಸಿದ  ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮಗಳು ಆ.26ರಂದು ಸಂಪನ್ನಗೊಂಡಿತು.


ಎರಡು ದಿನದ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಪ್ರತ್ಯೇಕ ಕ್ರೀಡಾಕೂಟಗಳು, ಮನೋರಂಜನಾ ಆಟಗಳು, ನಡೆದವು. ಆ.26ರಂದು ಬೆಳಿಗ್ಗೆ ಭಜನೆ, ವಿವಿಧ ಕ್ರೀಡಾಕೂಟಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಮ್ಮೆಲ್ಲರನ್ನು ಪ್ರತಿನಿಧಿಸುವ ಅವಕಾಶ ನನಗೆ ದೊರೆತಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆಯ್ಕೆಯಾಗಿದ್ದೇನೆ. ಈ ನೆಲದ ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಹಿಂದುತ್ವದ ಆಧಾರದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಕಲ್ಪ, ಗುರಿ ಸ್ಪಷ್ಟವಿದ್ದರೆ ಯಶಸ್ಸು ಶತಸಿದ್ದ ಎಂಬ ನಂಬಿಕೆಯೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು. ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದ ಮೂಲಕ ಸಮಾಜವನ್ನು ಜಾಗೃತಗೊಳಿಸಿ, ಸಂಘಟಿಸುವ ಕೆಲಸವು ಬಲ್ನಾಡಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ನಡೆಯುತ್ತಿದ್ದು ಇದು ನಿರಂತರವಾಗಿ ನಡೆಯಲಿ ಎಂದರು.


ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಶ್ರೀಕೃಷ್ಣ ಸಂದೇಶಗಳ ಅನುಸಂದಾನ ಮಾಡುತ್ತಾ, ಸಮಾಜಕ್ಕೆ ನಿರಂತರವಾಗಿ ಸಂಸ್ಕಾರ ನೀಡುತ್ತಾ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದು ಹಾಗೂ ಕೃಷ್ಣನ ಮೌಲ್ಯಗಳನ್ನು ಅನುಷ್ಟಾನ ಮಾಡಬೇಕೆಂಬ ಉದ್ದೇಶದಿಂದ ಉಜ್ರುಪಾದೆಯ ಕೃಷ್ಣ ಜನ್ಮಾಷ್ಟಮಿಯ ಬೆಳ್ಳಿ ಹಬ್ಬದ ಸಂಭ್ರಮವು ಉತ್ಸವವು ಗ್ರಾಮದ ಉತ್ಸವ ಆಗಿದೆ. ನಿರಂತರ ಕಾರ್ಯಕ್ರಮಗಳ ಮೂಲಕ ಸಂಸ್ಕಾರ ನೀಡಬೇಕು, ಸಮಾಜದಲ್ಲಿ ಸಂಘಟನೆಯಾಗಬೇಕು. ಕೃಷ್ಣನ ಆದರ್ಶಗಳನ್ನು ಯುವ ಪೀಳಿಗೆಗೆ ನೆನಪಿಸಬೇಕು. ಧಾರ್ಮಿಕ ನಂಬಿಕೆ, ಆಚರಣೆಗಳ ಮೂಲಕ ಧರ್ಮದ ತಲಹದಿ ಭದ್ರಗೊಳಿಸಿ ಸಾಮಾಜಿಕ ಜಾಗೃತಿ ಮೂಡಿಸಿ ಸಂಘಟನೆ ಮಾಡುವ ಕಾರ್ಯವು ಕಳೆದ ಇಪ್ಪತ್ತೈದು ವರ್ಷಗಳಿಂದ ನಡೆಯುತ್ತಿರುವುದನ್ನು ಶ್ಲಾಘಿಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೃಷ್ಣ ಜನ್ಮಾಷ್ಟಮಿಯು ಸಮಾಜದ ಪರಿವರ್ತನೆಗೆ ಸಂದೇಶ ನೀಡುವ ಕಾರ್ಯಕ್ರಮವಾಗಿದೆ. ಸಂಘಟನೆ ಮುಖಾಂತರ ಧರ್ಮದ ಉತ್ಥಾನ ನಡೆಯುತ್ತವೆ. ಕೃಷ್ಣ ಜನ್ಮಾಷ್ಟಮಿ ಸಮಿತಿಯು ಆಚರನೆಗೆ ಸೀಮಿತವಾಗಿರದೆ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.


ಬಜರಂಗದಳದ ನಿಕಟಪೂರ್ವ ದಕ್ಷಿಣ ಪ್ರಾಂತ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಮಾತನಾಡಿ, ಸಾಮೂಹಿಕವಾಗಿ ಸಂಘಟನೆ ಮಾಡುವುದು ಸುಲಭವಲ್ಲ. ಆದರೂ ಇಂದು ಸಂಘಟನೆ ಎಲ್ಲರಿಗೂ ಅನಿವಾರ್ಯ. ಬಾಂಗ್ಲದೇಶದಲ್ಲಿ ಸಾಮೂಹಿಕ ಆಕ್ರಮಣವಾಗಿದೆ. ಅಲ್ಲಿ ಜಾತಿ ಕೇಲಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.


ಚನಿಲ ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷ್ಣಜನ್ಮಾಷ್ಟಮಿ ಸಮಿತಿಯು ಕೇಲವ ಆಚರಣೆಗೆ ಸೀಮಿತವಾಗಿರದೆ ಸಾಮಾಜಿಕ, ಧಾರ್ಮಿಕವಾಗಿ ಈ ಭಾಗದ ಎಲ್ಲಾ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಬೆಳ್ಳಿ ಹಬ್ಬದ ಗ್ರಾಮದ ಎಲ್ಲರನ್ನು ಸೇರಿಸಿಕೊಂಡು ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳೊಂದಿಗೆ ಸಂಯೋಜನೆಗೊಂಡಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಪ್ರಕಾಶ್ ಕೆಲ್ಲಾಡಿ ಮಾತನಾಡಿ,ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬವನ್ನು ಎರಡು ದಿನಗಳ ಕಾಲ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಲಾಗಿದೆ. ಪ್ರತಿಯೊಬ್ಬರ ಸಹಕಾರದಿಂದ ಬೆಳ್ಳಿ ಹಬ್ಬವು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.


ನೋಟರಿ, ನ್ಯಾಯವಾದಿ ಚಿದಾನಂದ ಬೈಲಾಡಿ, ನೆಮ್ಮದಿ ವೆಲ್‌ನೆಸ್ ಸೆಂಟರ್ ಪ್ರಭಾಕರ ಸಾಲ್ಯಾನ್, ಬಲ್ನಾಡು ಹಿ.ಪ್ರಾ ಶಾಲಾ ಶಿಕ್ಷಕ ಎಚ್.ಆರ್ ಮಂಜಪ್ಪ, ಪ್ರಗತಿಪರ ಕೃಷಿ ಜಯಂತ ಬಾಯಾರು ಮಾತನಾಡಿ ಶುಭಹಾರೈಸಿದರು.


ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ, ನಗರ ಸಭಾ ಸದಸ್ಯೆ ಪೂರ್ಣಿಮಾ ಚೆನ್ನಪ್ಪ ಗೌಡ, ನೋಟರಿ, ನ್ಯಾಯವಾದಿ ಮಂಜುನಾಥ ಎನ್.ಎಸ್., ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ಗುತ್ತಿಗೆದಾರ ಬಾಲಕೃಷ್ಣ ನಾಯಕ್ ಅಂಬಟೆಮೂಲೆ, ಆನಂದ ಸುವರ್ಣ ಬಪ್ಪಳಿಗೆ, ಸಾಯತೀರ್ಥ ಚಿಟ್ಸ್‌ಮ ರುಕ್ಮಯ ಕುಲಾಲ್ ಸುಂಕಮೂಲೆ, ಕೊರಗಪ್ಪ ಕುಲಾಲ್ ವಿನಾಯಕನಗರ, ಚಂದ್ರಹಾಸ ಕುಲಾಲ್ ಪದವು, ಕೃಷ್ಣಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಗೌರವಾಧ್ಯಕ್ಷ ಬಾಬು ಪೂಜಾರಿ ಕುಕ್ಕುತ್ತಡಿ, ಬೆಳ್ಳಿ ಹಬ್ಬ ಸಮಿತಿ ಗೌರವಾಧ್ಯಕ್ಷ  ರವಿಕೃಷ್ಣ ಭಟ್ ಕಲ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಬಲ್ನಾಡು ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ಒದಗಿಸಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ, ನಿವೃತ್ತ ಯೋಧ ಬಾಬು ಪೂಜಾರಿ ಕುಕ್ಕುತ್ತಡಿ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಬಂದಿ ವೆಂಕಟಕೃಷ್ಣ ಪಾಲೆಚ್ಚಾರು, ಪ್ರಗತಿಪರ ಕೃಷಿಕ ದೇವಪ್ಪ ಗೌಡ ಮುದಲಾಜೆ ಯಕ್ಷಗಾನ ಕಲಾವಿದೆ ಶ್ರುತಿ ವಿಸ್ಮಿತ್ ಗೌಡ ಪದವುರವರನ್ನು ಸನ್ಮಾನಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಮಾಜಿ ಅಧ್ಯಕ್ಷರಾದ ಸುದೇಶ್ ಕುಕ್ಕುತ್ತಡಿ ಪರವಾಗಿ ನವೀನ್ ಕರ್ಕೇರ, ಮಾಧವ ಗೌಡ ಕಾಂತಿಲ, ಕುಶಾಲಪ್ಪ ಗೌಡ, ಪ್ರಕಾಶ್ ಕೆಲ್ಲಾಡಿ, ಅಶೋಕ್ ಪದವು, ಜಯಂತ ಬಾಯಾರು, ಬಾಲಸುಬ್ರಹ್ಮಣ್ಯ ಕೋಟ್ಯಾನ್‌ರವನ್ನು ಗೌರವಿಸಲಾಯಿತು.


ಜಸ್ಮಿತ್ ಅಶೋಕ್ ಪದವು ಪ್ರಾರ್ಥಿಸಿದರು. ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಪ್ರಕಾಶ್ ಕೆಲ್ಲಾಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವೆಂಕಟಕೃಷ್ಣ ಪಾಲೆಚ್ಚಾರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು.

LEAVE A REPLY

Please enter your comment!
Please enter your name here