ಬಣ್ಣ-ಬಣ್ಣದ ಪೋಷಾಕಿನಲ್ಲಿ ಮಿಂಚಿದ ಪುಟಾಣಿಗಳು
ದೇಶಭಕ್ತಿ ಉದ್ದೀಪನಾ ಕಾರ್ಯ ಮಕ್ಕಳಲ್ಲೂ ಮೂಡಿಸುವಂಥದ್ದು ಶ್ಲಾಘನೀಯ – ಕಿಶೋರ್ ಕುಮಾರ್ ಬೊಟ್ಯಾಡಿ
ಪುತ್ತೂರು : ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಕ್ಕಳಲ್ಲೂ ದೇಶಭಕ್ತಿಯ ಉದ್ದೀಪನ ಕಾಯಕ ಮಾಡಿಸುತ್ತಿರುವ ಸಮಿತಿ ಕಾರ್ಯ ಬಹಳ ಶ್ಲಾಘನೀಯ. ಭಗವಾನ್ ಶ್ರೀ ಕೃಷ್ಣ ಮತ್ತು ಪ್ರಭು ಶ್ರೀ ರಾಮಚಂದ್ರ ನಮ್ಮೆಲ್ಲರ ಆರಾಧ್ಯ ದೇವರುಗಳಾದರೂ, ಭಗವಾನ್ ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನೊಮ್ಮೆ ನಾವೆಲ್ಲರೂ ನೋಡಿದರೇ ಜೀವನದಲ್ಲೆಲ್ಲೂ ದಾರಿ ತಪ್ಪಲು ಸಾಧ್ಯವಿಲ್ಲವೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಆ.27 ರಂದು ಪುತ್ತೂರು ಯುವಕ ವೃಂದ ಕಲ್ಲಾರೆ ಇದರ ವತಿಯಿಂದ ಆಯೋಜಿಸಿದ್ದ 45ನೆಯ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಶ್ರೀ ಕೃಷ್ಣನ ಪೂಜೆ, ಧ್ಯಾನ ಮಾಡುವ ಮುಖಾಂತರ ಅಂಧಕಾರವನ್ನೆಲ್ಲಾ ದೂರ ಮಾಡಿದರೆ ಸುಗಂಧಭರಿತ ಜೀವನ ನಮ್ಮೆಲ್ಲರದಾಗಲು ಸಾಧ್ಯವಿದೆ.
ಸಾಧು-ಸಂತರಿಗೆ ನೋವು-ಅನ್ಯಾಯವಾದಾಗ, ಧರ್ಮಕ್ಕೆ ತೊಂದರೆಯಾದಾಗ ಮತ್ತೆಮತ್ತೆ ಹುಟ್ಟಿ ಬರುತ್ತೇನೆಯೆಂದು ಶ್ರೀ ಕೃಷ್ಣ ಪರಮಾತ್ಮನು ಹೇಳಿರುವ ಮಾತಿನ ಅರ್ಥವೆನೆಂದರೇ, ಇಡೀ ಸಮಾಜದ ರಕ್ಷಣೆಗೆ ನಾವೇ ಶ್ರೀ ಕೃಷ್ಣರಾಗಬೇಕು ಮತ್ತು ಧರ್ಮ ರಕ್ಷಣೆಯ ಕಾರ್ಯಕ್ಕೆ ಕಟಿಬದ್ಧರಾಗುವ ಜೊತೆಗೆ ಭಗವಾನ್ ಶ್ರೀ ಕೃಷ್ಣನ ವೇಷ ಧರಿಸುವ ಮೂಲಕ ಅವನಂತೆ ನಾವೆಲ್ಲರೂ ಬಾಳೋಣವೆಂದರು.
ಮಠದ ಕಾರ್ಯದರ್ಶಿ ಯು.ಪೂವಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ, ಪುತ್ತೂರು ಯುವಕ ವೃಂದದ ಅಧ್ಯಕ್ಷ ಭವಿಷ್ಯತ್, ಬಿಪಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಶೇಖರ್ ಹಾಗೂ ಶಿವಪ್ರಸಾದ್ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಠದ ಅವರಣದೊಳಗೆ ಭಗವಾನ್ ಶ್ರೀ ಕೃಷ್ಣನ ಭವ್ಯ ರಥೋತ್ಸವ ನಡೆದು, ಪ್ರಸಾದ ವಿತರಣೆಯಾಯಿತು. ವೇದಿಕೆ ಮುಂಭಾಗದಲ್ಲಿ ಇರಿಸಲಾಗಿದ್ದ ಭಾರತಾಂಬೆಯ ಭಾವಚಿತ್ರಕ್ಕೆ ಅತಿಥಿಗಳು ವಂದಿಸಿ, ಪುಷ್ಪಾರ್ಚನೆ ಮಾಡಿದ ಬಳಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಪ್ರಭಾ ಪ್ರಾರ್ಥಿಸಿ, ಅರುಣ್ ಕಲ್ಲಾರೆ ಪ್ರಾಸ್ತಾವಿಕ ಮಾತನಾಡಿದರು. ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ವಂದಿಸಿದರು. ತದನಂತರ ನೃತ್ಯ ವೈಭವ -2024 ನೆರವೇರಿತು. ವಿಜೇತ ತಂಡಗಳಿಗೆ ನಗದು, ಸ್ಮರಣಿಕೆ ನೀಡಲಾಯಿತು. ಪುತ್ತೂರು ಯುವಕ ವೃಂದದ ಪದಾಽಕಾರಿಗಳು, ಸದಸ್ಯರು, ಮಠದ ಆಡಳಿತ ಮಂಡಳಿ, ಅರ್ಚಕ ವೃಂದ, ಭಕ್ತಾದಿಗಳು ಮತ್ತು ಪುಟಾಣಿ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.
ಶ್ರೀ ಕೃಷ್ಣನ ರಥೋತ್ಸವ…
ಎರಡು ದಿನಗಳಿಂದ ನಡೆದ ಧಾರ್ಮಿಕ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್. ಗಣಪತಿ ನಾಯಕ್ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಬಳಿಕ ಹಲವು ರೀತಿಯ ಸ್ಪರ್ಧೆಗಳು ನಡೆದವು. ಆ.27 ರಂದು ಮಧ್ಯಾಹ್ನ ಬಳಿಕ ಮೊಸರು ಕುಡಿಕೆ ಕಂಬ ಏರುವ ಸ್ಪರ್ಧೆ, ಕೃಷ್ಣವೇಷ ಸಹಿತ ಛಧ್ಮವೇಷ ಸ್ಪರ್ಧೆ ನಡೆದವು. ಸಭಾ ಕಾರ್ಯಕ್ರಮಕ್ಕೂ ಮೊದಲು ಪಟಾಕಿ ಸಿಡಿಸಿ ,ಬಳಿಕ ಮಠದ ಆವರಣದಲ್ಲಿ ಶ್ರೀ ಕೃಷ್ಣನ ರಥೋತ್ಸವವು ನಡೆಯಿತು.