ಗಿಡ ಮರಗಳನ್ನು ನಾವು ಮಕ್ಕಳಂತೆ ಪೋಷಿಸಿ ಬೆಳೆಸಬೇಕು- ಡಾ. ರವಿ ಶೆಟ್ಟಿ
ಪುತ್ತೂರು: ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ, ಪಜಿಮಣ್ಣು, ಮುಂಡೂರು ಇದರ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮವು ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೂಡಂಬೈಲು ಶ್ರೀ ರವಿ ಶೆಟ್ಟಿ, ನೇಸರ ಕಂಪ ಇವರ ನೇತೃತ್ವಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಶೆಟ್ಟಿ ಪ್ರಕೃತಿಯನ್ನು ರಕ್ಷಿಸಿ ಬೆಳೆಸುವ ಅಗತ್ಯತೆ ಹಾಗೂ ಮರಗಿಡಗಳನ್ನು ನಾವು ನಮ್ಮ ಮಕ್ಕಳಂತೆ ಕಂಡು ಬೆಳೆಸಿದಾಗ ಮಾತ್ರ ನಮ್ಮ ಪರಿಸರವನ್ನು ಹಚ್ಚ ಹಸಿರಾಗಿ ಉಳಿಸಿಕೊಳ್ಳಹುದು. ಪ್ರತಿಯೊಬ್ಬನೂ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು ಎಂದು ಕರೆ ಕೊಟ್ಟರು. ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಸಾಂದರ್ಭಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿ ತೆಗೆದುಕೊಂಡು ವನಮಹೋತ್ಸವವನ್ನು ನಿಜ ಅರ್ಥದಲ್ಲಿ ಜಾರಿಗೊಳಿಸಿ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮ ನಿರೂಪಿಸಿದ ಮಾಜಿ ವ್ಯವಸ್ಥಾಪನಾ ಸದಸ್ಯ ಬಾಲಕೃಷ್ಣ ಕಣ್ಣಾರಾಯ ಬನೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಮುಂಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ ಗೌಡ ಪಜಿಮಣ್ಣು ಹಾಗೂ ಭಾಸ್ಕರ ಆಚಾರ್ ಹಿಂದಾರು ಅವರ ವಿಶೇಷ ಸಹಕಾರವನ್ನು ಸ್ಮರಿಸಲಾಯಿತು.
ಬಳಿಕ ದೇವಳದ ವಠಾರದಲ್ಲಿ ಗಿಡ ನೆಟ್ಟು, ಶಾಲಾ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮುಖಾಂತರ ಆಯಾ ಶಾಲೆಗಳಿಗೆ ಗಿಡ ವಿತರಿಸಲಾಯಿತು. ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಕುರೆಮಜಲು ಹಾಗೂ ಉಮೇಶ ಅಂಬಟ, ಪ್ರಧಾನ ಅರ್ಚಕ ನಾಗೇಶ ಕುದ್ರೆತ್ತಾಯ ಹಾಗೂ ಪ್ರಬಂಧಕ ಪ್ರಸಾದ ಬೈಪಾಡಿತ್ತಾಯರಿಗೂ ಸಾಂಕೇತಿಕವಾಗಿ ಗಿಡ ವಿತರಿಸಲಾಯಿತು. ಗಿಡ ನೆಡುವ ಹಾಗೂ ವಿತರಿಸುವ ಕಾರ್ಯಕ್ರಮವನ್ನು ರವಿ ಶೆಟ್ಟಿ ನೆರವೇರಿಸಿದರು.
ಸಭೆಯಲ್ಲಿ ಊರಿನ ಪ್ರಮುಖರಾದ ರಂಗ ಶಾಸ್ತ್ರಿ ಮಣಿಲ, ಸುಧೀರ್ ಶೆಟ್ಟಿ ನೇಸರ ಕಂಪ, ಮುಂಡೂರು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ರಾಮಚಂದ್ರ, ಶೇಷಪ್ಪ ಶೆಟ್ಟಿ ಪೊನೋನಿ, ಅಜಿತ್ ಕರ್ಕೇರ ಅಡೀಲು, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಸದಾಶಿವ ಶೆಟ್ಟಿ ಪಟ್ಟೆ, ಸದಾಶಿವ ಗೌಡ ಕೊಡಂಕಿರಿ ಹಾಗೂ ರಾಮಣ್ಣ ಗೌಡ ಪೊನೋನಿ ಉಪಸ್ಥಿತರಿದ್ದರು.