ಪುತ್ತೂರು: ಸಂತರ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟು ವಿದ್ಯಾರ್ಥಿ ಮಿತ್ರರಿಂದಲೇ ದರ್ಬೆ ವಿನಾಯಕ ನಗರದಲ್ಲಿ ಆಚರಿಸಲ್ಪಡುವ ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಶ್ರೀ ಗಣೇಶೋತ್ಸವಕ್ಕೆ ಇದೀಗ 42ರ ಸಂಭ್ರಮ.
ಈ ಸಂಭ್ರಮದ ಅಂಗವಾಗಿ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿತ್ರರಿಂದ ಆ.31 ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನಲ್ಲಿ ಜರಗಿದ್ದು, ಈ ರಕ್ತದಾನ ಶಿಬಿರವನ್ನು ಉದ್ಯಮಿ ಸಹಜ್ ರೈ ಬಳಜ್ಜರವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾನೂ ಕೂಡ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ತನ್ನ ವಿದ್ಯಾರ್ಜನೆಯ ಆ ಮೂರು ವರ್ಷಗಳಲ್ಲಿ ನಾನೂ ಕೂಡ ಈ ಭಾಗದಲ್ಲಿ ನಡೆಯುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇದೀಗ ಈ ಸಂಭ್ರಮವು 42ನೇ ವರ್ಷವನ್ನು ಕಾಣುತ್ತಿದೆ. ಇದು ಕೇವಲ ಆಚರಣೆ ಅಲ್ಲ, ಆಚರಣೆಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಆಚರಣೆಗೆ ಅರ್ಥ ಬರುತ್ತದೆ ಎಂದ ಅವರು ರಕ್ತದಾನ ಎಂಬುದು ಶ್ರೇಷ್ಟ ದಾನ ಮಾತ್ರವಲ್ಲ ಅದು ದೇವರು ಮೆಚ್ಚುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಮೂಡಿ ಬರಲಿ ಎಂದು ಹೇಳಿ ಶುಭ ಹಾರೈಸಿದರು.
ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ಕೆ.ಸೀತಾರಾಮ್ ಭಟ್ ಮಾತನಾಡಿ, ರಕ್ತದಾನ ಮಾಡುವುದು ಒಳ್ಳೆಯ ಕಾರ್ಯವಾಗಿದ್ದು ಫಿಲೋಮಿನಾ ಶ್ರೀ ಗಣೇಶೋತ್ಸವ ಸಮಿತಿಯವರು ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ರಕ್ತದಾನಿಗಳು ನೀಡುವ ಒಂದು ಯೂನಿಟ್ ರಕ್ತದಲ್ಲಿ ಮೂರು ಜೀವವನ್ನು ಉಳಿಸಬಹುದು ಎಂದರು.
ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳದಡ್ಡ, ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಟ್ರಸ್ಟ್ ಸದಸ್ಯ ವೇಣುಗೋಪಾಲ್ ಪಿ.ಎಲ್, ಅಧ್ಯಕ್ಷ ಸೃಜನ್ ರೈ, ಕಾರ್ಯದರ್ಶಿ ಸುಹಾಸ್ ಪ್ರಭು, ಹಿರಿಯ ವಿದ್ಯಾರ್ಥಿಗಳಾದ ವಿಕ್ರಂ, ಸುಕುಮಾರ್, ನಿತೀಶ್, ಸುಮಂತ್, ವಿಖೇಶ್, ಪ್ರಜ್ವಲ್, ಹರ್ಷ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಲ್ಯಾಬ್ ಟೆಕ್ನೀಶಿಯನ್ ಸಜನಿ ಮಾರ್ಟಿಸ್ ಹಾಗೂ ಸಿಬ್ಬಂದಿ ವರ್ಗ ಮತ್ತು ಫಿಲೋಮಿನಾ ಕಾಲೇಜಿನ ಪ್ರಸಕ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ರಿಶಿಕಾ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
42ರ ಸಂಭ್ರಮ..42 ಮಂದಿ ರಕ್ತದಾನ..
ಕಳೆದ ಹಲವು ವರ್ಷಗಳಿಂದ ಶ್ರೀ ಗಣೇಶೋತ್ಸವದ ಪ್ರಯುಕ್ತ ವರ್ಷಂಪ್ರತಿ ನಡೆಯುವ ಶಿಬಿರದಂತೆ ಈ ಬಾರಿಯೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 75ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 42 ಮಂದಿ ವಿದ್ಯಾರ್ಥಿ ಮಿತ್ರರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಶಿಬಿರದ ಕಳೆಯನ್ನು ಹೆಚ್ಚಿಸಿದ್ದರು. ವಿಶೇಷ ಏನೆಂದರೆ ಶ್ರೀ ಗಣೇಶೋತ್ಸವಕ್ಕೆ 42ರ ಸಂಭ್ರಮವಾಗಿದ್ದು, 42 ಮಂದಿ ಉತ್ಸಾಹಿ ಯುವಕರು ರಕ್ತದಾನ ಮಾಡಿರುವುದು ಕಾಕತಾಳೀಯವೆನಿಸಿದೆ.
ಯಶಸ್ವಿ ರಕ್ತದಾನ ಶಿಬಿರ..
ದರ್ಬೆ ವಿನಾಯಕ ನಗರದಲ್ಲಿ ಎಲ್ಲರ ಸಹಕಾರದೊಂದಿಗೆ ವರ್ಷಂಪ್ರತಿ ಶ್ರೀ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಆಚರಣೆಗೆ ಕಳೆದ ೪೧ ವರ್ಷಗಳಿಂದಲೂ ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪ್ರಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇದೀಗ ಗಣೇಶೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರವೂ ಯಶಸ್ವಿಯಾಗಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ನಡೆಯುವ ವಿಘ್ನ ವಿನಾಯಕನ ಹಬ್ಬನ್ನು ಯಶಸ್ವಿಯಾಗಿ ಆಚರಿಸಲು ಸರ್ವರ ಸಹಕಾರ ಕೋರುತ್ತೇನೆ.
-ಪ್ರಕಾಶ್ ಮುಕ್ರಂಪಾಡಿ, ಗೌರವಾಧ್ಯಕ್ಷರು, ಶ್ರೀ ಗಣೇಶೋತ್ಸವ ಸಮಿತಿ