ನಾಯಕನಟನಾಗಿ ಹೊಸ ಪಯಣದತ್ತ ಹೆಜ್ಜೆಯಿಟ್ಟ ಪುತ್ತೂರಿನ ಬ್ರಾಯನ್ ಸಿಕ್ವೇರಾ
-ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಕನ್ನಡ, ತೆಲುಗು, ಹಿಂದಿ, ತಮಿಳು ಚಿತ್ರರಂಗಕ್ಕೆ ಹೋಲಿಸಿದರೆ ಕೊಂಕಣಿ ಚಿತ್ರರಂಗದಲ್ಲಿ ಕೊಂಕಣಿ ಭಾಷೆಯ ಚಿತ್ರಗಳು ನಿರ್ಮಾಣವಾಗುತ್ತಿರುವುದು ಬಹಳ ವಿರಳವೇ ಸರಿ. ಹಲವು ವರ್ಷಗಳ ಬಳಿಕ ಇತ್ತೀಚೆಗೆ ಆಸ್ಮಿತಾಯ್ ಎಂಬ ಕೊಂಕಣಿ ಸಿನೆಮಾ ಬಿಡುಗಡೆಗೊಂಡು ಯಶಸ್ವಿಗೊಂಡಿತ್ತು. ಈಗ ಮತ್ತೊಂದು ಕೊಂಕಣಿ ಚಿತ್ರದ ಸರದಿ. ಪುತ್ತೂರಿನ ಸ್ಫುರದ್ರೂಪಿ, ಎತ್ತರದ ಮೈಕಟ್ಟಿನ ಯುವಕನೊಬ್ಬ ಕೊಂಕಣಿ ಚಿತ್ರರಂಗದಲ್ಲಿ ನಾಯಕ ನಟನಾಗಿ ‘ಪಯಣ್(ಣ)’ವನ್ನು ಆರಂಭಿಸುವ ಮೂಲಕ ಹೊಸ ಹೆಜ್ಜೆಯನ್ನಿಟ್ಟಿದ್ದಾನೆ.
ಹೌದು, ನಾವು ಹೇಳುವ ಆ ಯುವಕನೇ ಚಿಕ್ಕಪುತ್ತೂರು ನಿವಾಸಿ ಬ್ರಾಯನ್ ಸಿಕ್ವೇರಾ. ಕಾಲಾತೀತ ಪರಂಪರೆ ಎಂಬ ಟ್ಯಾಗ್ಲೈನ್ನೊಂದಿಗೆ ಚಿತ್ರೀಕರಿಸಲ್ಪಟ್ಟ ಕೊಂಕಣಿ ಚಿತ್ರದ ಹೆಸರೇ ‘ಪಯಣ್(ಪಯಣ)’. ಸಂಗೀತ್ ಘರ್ ಪ್ರೊಡಕ್ಷನ್ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ನಿರ್ಮಾಪಕರಾಗಿ ಗಾಯಕ ಮೆಲ್ವಿನ್ ಹಾಗೂ ನೀತಾ ಪೆರಿಸ್ ದಂಪತಿ, ಚಿತ್ರಕ್ಕೆ ಸಂಗೀತ್ ಗುರು ಜೋಯೆಲ್ ಪಿರೇರಾರವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಕೊಂಕಣಿ(ಕ್ರಿಶ್ಚಿಯನ್) ಭಾಷಿಗರಲ್ಲಿ ಬಿಗ್ಬಾಸ್ ಆರನೇ ಆವೃತ್ತಿಯಲ್ಲಿ ಪುತ್ತೂರಿನ ಎಪಿಎಂಸಿ ನಿವಾಸಿ ರೀಮಾ ಲರಿಸ್ಸಾ ಡಾಯಸ್ರವರು ಭಾಗವಹಿಸಿರುವುದು ಇಲ್ಲಿ ನೆನಪಿಸಬೇಕಾಗುತ್ತದೆ.
ಆಲ್ಬಂನಲ್ಲಿ ಹೆಜ್ಜೆ:
ನಟ ಬ್ರಾಯನ್ ಸಿಕ್ವೇರಾರವರು ಕೆಲವೊಂದು ಕೊಂಕಣಿ ಆಲ್ಬಂಗಳಲ್ಲಿ ಹೆಜ್ಜೆ ಹಾಕಿದ ಅನುಭವ ಹೊಂದಿರುತ್ತಾರೆ ಜೊತೆಗೆ 2020ರ ಮಿ.ಕರ್ನಾಟಕ ಪೊಪ್ಯುಲರ್ ಐಕಾನ್ ಆಗಿಯೂ ಹೊರ ಹೊಮ್ಮಿದ್ದರು. 29ರ ಹರೆಯದ ಬ್ರಾಯನ್ ಸಿಕ್ವೇರಾರವರು ಮಾಯಿದೆ ದೇವುಸ್ ಚರ್ಚ್ನಲ್ಲಿ ನಡೆಯುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ಪ್ರಹಸನಗಳಲ್ಲಿ, ಡ್ಯಾನ್ಸ್ನಲ್ಲಿ ಗೆಳೆಯರೊಂದಿಗೆ ನಟಿಸಿ ‘ಸೈ’ ಎನಿಸಿಕೊಂಡಿದ್ದಾರೆ.
ಎಂಕಾಂ ಪದವೀಧರ:
ಚಿಕ್ಕಪುತ್ತೂರು ದಿ.ಬ್ಯಾಪ್ಟಿಸ್ಟ್ ಸಿಕ್ವೇರಾ ಹಾಗೂ ಸೆವ್ರಿನ್ ಸಿಕ್ವೇರಾ ದಂಪತಿ ಪುತ್ರ, ಬಬಿತಾ ಶರಲ್ ಸಿಕ್ವೇರಾ ಸಹೋದರನಾಗಿರುವ ಬ್ರಾಯನ್ ಸಿಕ್ವೇರಾರವರು ಓರ್ವ ಎಂಕಾಂ ಪದವೀಧರನಾಗಿದ್ದು ಪ್ರಸ್ತುತ ಮಂಗಳೂರಿನ ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ನೀಡುತ್ತಿದ್ದಾರೆ. ತನ್ನ ವೃತ್ತಿ ಜೊತೆಗೆ ಸಮಾಜಮುಖಿ ಸೇವೆಗೂ ಮುಡಿಪಾಗಿಡಬೇಕು ಎನ್ನುವ ನಿಟ್ಟಿನಲ್ಲಿ ಪುತ್ತೂರಿನ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಸದಸ್ಯರಾಗಿ ಸಮಾಜಸೇವೆಯತ್ತ ಒಲವನ್ನು ತೋರಿರುತ್ತಾರೆ.
ಸ್ಯಾಂಡಲ್ವುಡ್ಗೂ ಎಂಟ್ರಿ ಕೊಡಲಿ:
ಪ್ರತಿಭಾವಂತರಿಗೆ ಯಾವುದೇ ಕ್ಷೇತ್ರವಾದರೂ ಚಿಂತಿಲ್ಲ. ಪ್ರತಿಭೆಯನ್ನು ತೋರ್ಪಡಿಸಲು ಸೂಕ್ತ ವೇದಿಕೆ ಸಿಗಬೇಕಾಗಿದೆ. ಆದರೆ ಯಾರು ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ನೆಲೆಯನ್ನು ಕಂಡುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಟನೆಯತ್ತ ಗಮನಹರಿಸಿದ ಬ್ರಾಯನ್ ಸಿಕ್ವೇರಾರವರು ಮುಂದೆ ಸಿನಿರಂಗದಲ್ಲಿ ಮಿಂಚುತ್ತಾ ಸ್ಯಾಂಡಲ್ವುಡ್ನಲ್ಲೂ ಎಂಟ್ರಿ ಕೊಡಲಿ, ಭವಿಷ್ಯ ಉಜ್ವಲವಾಗಲಿ ಎಂಬುದಾಗಿ ಹಾರೈಸೋಣ.
ಸೆಪ್ಟೆಂಬರ್ನಲ್ಲಿ ಬಿಡುಗಡೆ..
ಈಗಾಗಲೇ ಡೊನ್ ಬೊಸ್ಕೊ ಕ್ಲಬ್ ನೇತೃತ್ವದಲ್ಲಿ ‘ಪಯಣ್’ ಕೊಂಕಣಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಚಿತ್ರವು ಸೆ.14 ರಂದು ಪುತ್ತೂರಿನ ಭಾರತ್ ಸಿನೆಮಾಸ್ನಲ್ಲಿ ಸಂಜೆ ಏಳು ಗಂಟೆಗೆ ಪ್ರೀಮಿಯರ್ ಶೋ ಕಾಣಲಿದೆ. ಸೆಪ್ಟೆಂಬರ್ನಲ್ಲಿ ಈ ಚಿತ್ರವು ಕರುನಾಡಿನಾದ್ಯಂತ ಬಿಡುಗಡೆಗೊಳ್ಳಲಿದ್ದು, ಸಿನಿರಸಿಕರು ಚಿತ್ರವನ್ನು ವೀಕ್ಷಿಸಿ, ಈ ಉದಯೋನ್ಮುಖ ನಟನನ್ನು ಆಶೀರ್ವದಿಸುವುದರೊಂದಿಗೆ ಇಡೀ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡುವಂತಾಗಲಿ.