ಹೆಣ್ಣು ಮಗು ಅಪಹರಣ ಪ್ರಕರಣವನ್ನು ಎರಡೇ ಗಂಟೆಗಳಲ್ಲಿ ಭೇದಿಸಿದ ಮಂಗಳೂರು ಪೊಲೀಸರು!

0

ಮಂಗಳೂರು: ನಗರದ ಅಳಪೆ ಪಡೀಲ್ ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಆ.31ರಂದು ಸಾಯಂಕಾಲ ವೇಳೆಯಲ್ಲಿ ಎರಡೂವರೆ ವರ್ಷದ ಮಗುವೊಂದನ್ನು ಅಪಹರಿಸಿದ ಪ್ರಕರಣವನ್ನು ಸಿಸಿಟಿವಿ ಫೂಟೇಜ್ ನೆರವಿನಿಂದ ಕಂಕನಾಡಿ ನಗರ ಪೊಲೀಸರು (Mangaluru Police) ಎರಡೇ ಗಂಟೆಗಳಲ್ಲಿ ಭೇದಿಸುವ ಮೂಲಕ ಮಗುವನ್ನು ಹೆತ್ತವರ ವಶಕ್ಕೆ ಒಪ್ಪಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದ ಘಟನೆ ವರದಿಯಾಗಿದೆ.

ಆ.31ರಂದು ಎರಡೂವರೆ ವರ್ಷದ ಮಗುವಿನ ಅಪಹರಣಕ್ಕೆ ಸಂಬಂಧಿಸಿದಂತೆ ಮಗುವಿನ ಹೆತ್ತವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೀಶ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯು ಆ.28ರಂದು ತನ್ನ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈಗೆ ರೈಲಿನಲ್ಲಿ ಹೋಗಿದ್ದು, ಗೋವಾದಲ್ಲಿ ರೈಲಿನಿಂದ ಇಳಿದು ಈತನು ಮುಂಬೈ ರೈಲನ್ನು ತಪ್ಪಿಸಿಕೊಂಡು ಆ.31ರಂದು ಗೋವಾದಿಂದ ಹೊರಟು ಮಂಗಳೂರಿಗೆ ಬಂದು, ಪಡೀಲ್ ಅಳಪೆಯ ಅರಣ್ಯ ಭವನದ ಮುಂಭಾಗದಲ್ಲಿ ಒಂದು ಹೆಣ್ಣು ಮಗು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ, ತನಗೆ ಹೆಣ್ಣು ಮಕ್ಕಳಿಲ್ಲವೆಂದು ಆಸೆಯಿಂದ ಈ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಈ ಪ್ರಕರಣದಲ್ಲಿ ಆರೋಪಿಯು ಮಂಗಳೂರು ಜಂಕ್ಷನ್ ನ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಹೋಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು, ಕಾಸರಗೋಡಿನ ರೈಲ್ವೇ ಪೊಲೀಸರಿಗೆ ಮಾಹಿತಿಯನ್ನು ನೀಡಿ, ತಕ್ಷಣ ಕಾರ್ಯಪ್ರವೃತ್ತರಾಗಿ ಕಂಕನಾಡಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿಗಳ ಮಾರ್ಗದರ್ಶನದಂತೆ ಪಿ.ಎಸ್.ಐ ಶಿವಕುಮಾರ.ಕೆ ಮತ್ತು ತಂಡವು ಕಾಸರಗೋಡಿಗೆ ತೆರಳಿ ಕಾಸರಗೋಡಿನ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಹಾಗೂ ಮಗುವನ್ನು ವಶಕ್ಕೆ ಪಡೆದುಕೊಂಡು ಬಳಿಕ ಮಗುವನ್ನು ಹೆತ್ತವರ ವಶಕ್ಕೆ ಒಪ್ಪಿಸಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಐ.ಪಿ.ಎಸ್ (Anupam Agrawal) ಮಾರ್ಗದರ್ಶನದಲ್ಲಿ, ಉಪ-ಪೊಲೀಸ್ ಆಯುಕ್ತರಾದ ಸಿದ್ದಾರ್ಥ್ ಗೋಯಲ್ (ಕಾ&ಸು) ಐ.ಪಿ.ಎಸ್ ಮತ್ತು ದಿನೇಶ್ ಕುಮಾರ್ ಕೆ.ಎಸ್.ಪಿ.ಎಸ್ ರವರ ನಿರ್ದೇಶನದಂತೆ ಹಾಗೂ ಮಂಗಳೂರು ದಕ್ಷಿಣ ವಿಭಾಗದವ ಸಹಾಯಕ ಪೊಲೀಸ್ ಆಯುಕ್ತರಾಗಿರುವ ಧನ್ಯಾ ನಾಯಕ್ ಅವರ ಸೂಚನೆಯಂತೆ ಕಂಕನಾಡಿ ನಗರ ಠಾಣೆಯ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಶಿವಕುಮಾರ , ಎ.ಎಸ್.ಐ ಅಶೋಕ್ ಹಾಗೂ ಸಿಬ್ಬಂದಿಯವರಾದ ಅಶೀತ್ ಡಿ”ಸೋಜಾ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ಅವರು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here