





ಪುತ್ತೂರು: ಈಗಿನ ಸರಕಾರ ಎಸ್ಸಿ, ಎಸ್ಟಿ ಅಭಿವೃದ್ಧಿಗೆಂದು ತಂದ ಅನುದಾನವನ್ನು ಗ್ಯಾರೆಂಟಿ ಯೋಜನೆ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದಲಿತ ಸೇವಾ ಸಮಿತಿ ದ.ಕ.ಜಿಲ್ಲಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ.


ಪತ್ರಿಕಾಗೋಷ್ಟಿಯಲ್ಲಿ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ ನಮ್ಮ ಮೀಸಲಾತಿ ಹಣವನ್ನು ಸರಕಾರ ದುರ್ಬಳಕೆ ಮಾಡುತ್ತಿದೆ. ಇದರಿಂದ ಮೀಸಲಾತಿಗೆ ಕುತ್ತು ತಂದಿದೆ. ಈ ಕುರಿತು ಮೀಸಲಾತಿ ಹಣವನ್ನು ದುರ್ಬಳಕೆ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಅಭಿವೃದ್ಧಿಗಾಗಿ ಇರಿಸಿದ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಕೆ ಮಾಡಿದ್ದು ತಪ್ಪು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಹಿಡಿಯಬೇಕೆಂದರು.





ಜಿಲ್ಲೆಯಲ್ಲಿ 25 ಅಂಬೇಡ್ಕರ್ ಭವನದ ಹಣಕ್ಕೆ ತಡೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ಅಂಬೇಡ್ಕರ್ ಭವನಕ್ಕೆ ಮಂಜೂರುಗೊಳಿಸಿದ ಹಣವನ್ನು ಸರಕಾರ ತಡೆ ಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮಾಹಿತಿ ಹಕ್ಕು ಮೂಲಕ ಪ್ರಶ್ನಿಸಿದ್ದೇವೆ. ಒಂದು ವಾರದೊಳಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಸೇಸಪ್ಪ ಬೆದ್ರಕಾಡು ತಿಳಿಸಿದರು.
ಪುತ್ತೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ರೂ. 10 ಕೋಟಿ ಆಗ್ರಹ:
ಪುತ್ತೂರಿನ ಬನ್ನೂರು ನಂದಿಲಕ್ಕೆ ಹೋಗುವ ದಾರಿಯಲ್ಲಿ 75 ಸೆಂಟ್ಸ್ ಜಾಗ ತಾಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರುಗೊಂಡಿದೆ. ಆದರೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.10 ಕೋಟಿ ನೀಡಬೇಕೆಂದು ಆಗ್ರಹಿಸಿದ್ದೇವೆ. ಇದೀಗ ಆ ಸ್ಥಳದಲ್ಲಿ ಬಾಡಿಗೆ ನೆಲೆಯಲ್ಲಿರುವ ಆಡು ಮಾಂಸದ ಕಟ್ಟಡದಿಂದ ಕೋರ್ಟ್‌ಗೆ ಸ್ಟೇ ತಂದಿದ್ದಾರೆ. ನಗರಸಭೆ ಇದರ ವಿರುದ್ಧ ಕಾನೂನು ಹೋರಾಟ ಮಾಡಲಿದೆ ಎಂದು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಹೇಳಿದರು.
ಸರಕಾರ ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡಬೇಕು:
ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ಪ್ರೀತಿ, ಪ್ರೇಮ, ಜಾತಿ ಧರ್ಮ ಜಾಸ್ತಿಯಾಗುತ್ತಿದ್ದು, ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಯಾರು ಕೂಡಾ ಯಾವ ಸಂಘಕ್ಕೆ ಅವರನ್ನು ಬಳಸಿಕೊಳ್ಳಬಾರದು. ಸಮಾಜದಲ್ಲಿ ಅವರನ್ನು ಬೇರೆ ದೃಷ್ಟಿಯಲ್ಲಿ ನೋಡುವ ಕೆಲಸವನ್ನು ಮಾಡಬಾರದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸರಕಾರ ಹೆಚ್ಚಿನ ರಕ್ಷಣೆ ನೀಡಬೇಕೆಂದು ಅವರು ಸೇಸಪ್ಪ ಬೆದ್ರಕಾಡು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಉಪಾಧ್ಯಕ್ಷ ಕೃಷ್ಣ ನಾಯ್ಕ, ಗೌರವಾಧ್ಯಕ್ಷ ಕರಿಯಪ್ಪ ಕೆ.ಎಸ್, ಬಂಟ್ವಾಳ ತಾಲೂಕು ಅಧ್ಯಕ್ಷ ಗಣೇಶ್ ವಿಟ್ಲ ಉಪಸ್ಥಿತರಿದ್ದರು.










