





ಪುತ್ತೂರು:ಚುನಾಯಿತ ಕೌನ್ಸಿಲ್ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ಸೇರಿದಂತೆ 118 ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಡಳಿತದ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶಿಸಿದೆ.


ಪುತ್ತೂರು ನಗರಸಭೆ ಸಹಿತ 42 ನಗರಸಭೆ, 53 ಪುರಸಭೆ ಮತ್ತು 23 ಪಟ್ಟಣ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಅಧಿನ ಕಾರ್ಯದರ್ಶಿ(ಎಂಎ-13)ಟಿ.ಮಂಜುನಾಥ ಅವರು ನ.6ರಂದು ಆದೇಶ ಹೊರಡಿಸಿದ್ದಾರೆ.ಈ ಕುರಿತ ಸರ್ಕಾರದ ಅಧಿಸೂಚನೆ(ಸಂಖ್ಯೆ:ನಅಇ 287 ಎಂಎಲ್‌ಆರ್ 2025) ನ.6ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.ಪುತ್ತೂರು ನಗರಸಭೆಗೆ ಸಂಬಂಧಿಸಿ ನ.3ರಿಂದ ಅನ್ವಯವಾಗುವಂತೆ ದ.ಕ.ಜಿಲ್ಲಾಧಿಕಾರಿಯವರನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.





ಆಡಳಿತಾಧಿಕಾರಿ ನೇಮಕಕ್ಕೆ ಮಧ್ಯಂತರ ತಡೆ ನೀಡಿದ್ದ ಹೈಕೋರ್ಟ್:
ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ,ಹಾಲಿ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಸದಸ್ಯರ ಅವಧಿ ಮುಂದುವರಿಕೆಗೆ ಅವಕಾಶ ಕಲ್ಪಿಸಿತ್ತು.ತಮ್ಮ ಅಧಿಕಾರದವಧಿ ಇನ್ನೂ ಮುಗಿಯದೇ ಇದ್ದರೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನಗರಸಭೆಗೆ ಆಡಳಿತಾಽಕಾರಿ ನೇಮಕ ಮಾಡಲು ನಿರ್ದೇಶನ ನೀಡಿರುವುದನ್ನು ಪ್ರಶ್ನಿಸಿ ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ,ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಹಾಗೂ ಸದಸ್ಯರಾದ ಜೀವಂಧರ್ ಜೈನ್ ಮತ್ತು ಭಾಮಿ ಅಶೋಕ್ ಶೆಣೈ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ,ಮುಂದಿನ ದಿನಾಂಕದವರೆಗೆ ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಮಧ್ಯಂತರ ಆದೇಶ ಮಾಡಿತ್ತು.
ಪುತ್ತೂರು ನಗರಸಭೆಗೆ 2018ರ ಸೆ.3ರಂದು ಚುನಾವಣೆ ನಡೆದಿತ್ತು.ಅದಾದ ಬಳಿಕ 30 ತಿಂಗಳ ಪ್ರಥಮ ಅವಧಿಗೆ 2020ರ ನ.2ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.30 ತಿಂಗಳ ಪ್ರಥಮ ಅವಧಿ ಮುಗಿದು ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತೆ ವಿಳಂಬವಾಗಿ ಆಡಳಿತಾಧಿಕಾರಿ ನೇಮಕವಾಗಿತ್ತು.ಸುಮಾರು 16 ತಿಂಗಳ ಅವಧಿಯಲ್ಲಿ ಆಡಳಿತಾಧಿಕಾರಿಯವರೇ ಆಡಳಿತ ನಡೆಸಿದ್ದರಿಂದ ಚುನಾಯಿತ ಸಮಿತಿಗೆ ಯಾವುದೇ ಅಧಿಕಾರವಿರಲಿಲ್ಲ.ಕೊನೆಗೂ 30 ತಿಂಗಳ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ 2024ರ ಸೆ.3ರಂದು ಚುನಾವಣೆ ನಡೆದಿದೆ.30 ತಿಂಗಳ ಎರಡನೇ ಅವಧಿ ಪೂರ್ಣಗೊಳ್ಳುವ ಮೊದಲೇ ಇದೀಗ ನಗರಸಭೆಗೆ ಆಡಳಿತಾಽಕಾರಿ ನೇಮಕಕ್ಕೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ದ.ಕ.ಜಿಲ್ಲಾಧಿಕಾರಿಯವರಿಗೆ ಇದೇ ಸೆ.15ರಂದು ಪತ್ರ ಬರೆದು ನಿರ್ದೇಶನ ನೀಡಿದೆ.ಪ್ರಥಮ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಪ್ರಥಮ ಸಭೆ ನಡೆದಿದ್ದ 2020ರ ನ.2ರ ಲೆಕ್ಕಾಚಾರದಲ್ಲಿ 5 ವರ್ಷ ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.ಆದರೆ ಪ್ರಥಮ ಅವಧಿಯಲ್ಲಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬವಾಗಿ ಸುಮಾರು 16 ತಿಂಗಳು ಆಡಳಿತಾಧಿಕಾರಿಯವರೇ ಆಡಳಿತ ನಡೆಸುವಂತಾಗಿ ಚುನಾಯಿತ ಸದಸ್ಯರಿಗೆ ಯಾವುದೇ ಅಧಿಕಾರ ನಡೆಸಲು ಅವಕಾಶ ಲಭಿಸಿರಲಿಲ್ಲ.ಜೊತೆಗೆ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಾದ ಬಳಿಕ ನಿಯಮಾನುಸಾರ 30 ತಿಂಗಳ ಕಾಲ ಆಡಳಿತ ನಡೆಸಲು ಅವಕಾಶ ನೀಡಬೇಕು.ಆದರೆ ಈ ಅವಧಿ ಮುಗಿಯುವ ಮೊದಲೇ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿರುವುದು ಸರಿಯಲ್ಲ.ಹಾಲಿ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರದ ಅವಧಿ ಮುಗಿಯುವ ತನಕ ಯಾವುದೇ ಕಾರಣಕ್ಕೂ ನಗರಸಭೆಗೆ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ನೀಡದೆ ನ್ಯಾಯ ಮತ್ತು ಸಮಾನತೆಯನ್ನು ಕಾಪಾಡಬೇಕು ಎಂದು ಅರ್ಜಿದಾರರು ರಿಟ್ ಅರ್ಜಿಯಲ್ಲಿ ಆಗ್ರಹಿಸಿದ್ದರು.ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಪೀಠ, ಮುಂದಿನ ಆದೇಶದ ತನಕ ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಮಧ್ಯಂತರ ತಡೆ ನೀಡಿದೆ.ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್‌ಶ್ಯಾಮ್ ವಾದಿಸಿದ್ದರು.ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.ಪುತ್ತೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿಯವರು ಇದೇ ರೀತಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು.
ವಾರ್ಡ್‌ವಾರು ಮೀಸಲಾತಿ ಅಧಿಸೂಚನೆಗೆ ಕನಿಷ್ಟ 150 ದಿನ ಅಗತ್ಯವಿದೆ- ಹೈಕೋರ್ಟ್‌ಗೆ ಸರಕಾರದ ಹೇಳಿಕೆ:
ನವೆಂಬರ್ ತಿಂಗಳ ಅಂತ್ಯಕ್ಕೆ ಅವಧಿ ಕೊನೆಗೊಳ್ಳಲಿರುವ ರಾಜ್ಯದ 180ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಡಿಸಲು 150 ದಿನಗಳ ಸಮಯ ಬೇಕಾಗುತ್ತದೆ ಎಂದು ವಿಚಾರಣೆ ವೇಳೆ ರಾಜ್ಯ ಸರಕಾರ ಹೈಕೋರ್ಟ್‌ಗೆ ಹೇಳಿದೆ.
ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ 16 ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು 5 ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು, ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗಬಾರದು ಎಂದು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ 65ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನ.3ರಂದು ವಿಚಾರಣೆ ನಡೆಸಿದ ವೇಳೆ, ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಹಾಜರಾಗಿ, ಅವಧಿ ಮುಗಿಯಲಿರುವ ಅಂದಾಜು 188 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ, ಅಂತಿಮ ಅಧಿಸೂಚನೆ ಹೊರಡಿಸಲು ಕನಿಷ್ಠ 150 ದಿನಗಳು ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಜತೆಗೆ ಕೆಲ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಬೇಕಿದೆ. ಮೊದಲು ಕರಡು ಹೊರಡಿಸಿ, ಆಕ್ಷೇಪಣೆ ಆಹ್ವಾನಿಸಿ, ಅವುಗಳನ್ನು ಇತ್ಯರ್ಥಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕಾಗುತ್ತದೆ.ಇದಕ್ಕೆಲ್ಲ ಸುಮಾರು 150 ದಿನಗಳು ಬೇಕಾಗುತ್ತದೆ.ಮೀಸಲಾತಿ ಅಂತಿಮ ಅಽಸೂಚನೆ ಬಳಿಕ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು.ಬಳಿಕ ಆಯೋಗ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಮಿತಿಗಿಂತ ಹೆಚ್ಚು ಅವಧಿಗೆ ಆಡಳಿತಾಧಿಕಾರಿ ನೇಮಕ ಸಂವಿಧಾನ,ಕಾಯ್ದೆಗೆ ವಿರುದ್ಧ:
ಇದಕ್ಕೆ ಆಕ್ಷೇಪಿಸಿದ್ದ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವ ಹಾಗೂ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.ಸಕಾಲಕ್ಕೆ ಚುನಾವಣೆ ನಡೆಸದೇ ಸುದೀರ್ಘ ಅವಧಿಗೆ ಸ್ಥಳೀಯ ಸಂಸ್ಥೆಗಳನ್ನು ಖಾಲಿ ಇಡುವುದು, ಮಿತಿಗಿಂತ ಹೆಚ್ಚು ಅವಧಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವುದು ಸಂವಿಧಾನ ಮತ್ತು ಕಾಯ್ದೆಗೆ ವಿರುದ್ಧವಾಗಿದೆ.ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗಷ್ಟೇ ವಾರ್ಡ್ ಮರು ವಿಂಗಡಣೆ ಮಾಡಬೇಕಿದೆ.ಅದನ್ನು ಮುಗಿಸಿ ಸರಕಾರ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ, ಅದರ ಜತೆಜತೆಯಾಗಿ ಆಯೋಗ ಮತದಾರರ ಪಟ್ಟಿ ತಯಾರಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು.
ವಾದ ಆಲಿಸಿದ ನ್ಯಾಯಪೀಠ, ನಗರ ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಚುನಾವಣೆ ನಡೆಸುತ್ತೀರಿ, ಅದಕ್ಕೂ ಮೊದಲು ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ನಿರ್ದಿಷ್ಠವಾಗಿ ಯಾವ ಕಾಲಮಿತಿಯಲ್ಲಿ ಮುಗಿಯಲಿದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರಿಸುವ ಕಾರ್ಯ ನಡೆಸಬಹುದೇ ಎಂಬ ಬಗ್ಗೆ ಚರ್ಚಿಸಲು ಸರಕಾರ ಮತ್ತು ಚುನಾವಣಾ ಆಯೋಗ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆ ನಡೆಸಿ ಅದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ನ.10ಕ್ಕೆ ಮುಂದೂಡಿದೆ.ಈ ನಡುವೆ ಇದೀಗ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಿದೆ.
ಹೈಕೋರ್ಟ್‌ನಲ್ಲಿ ನ.10ರಂದು ವಿಚಾರಣೆ
ತಮ್ಮ ಅಧಿಕಾರದವಧಿ ಇನ್ನೂ ಮುಗಿಯದೇ ಇದ್ದರೂ ನಗರಸಭೆಗೆ ಆಡಳಿತಾಧಿಕಾರಿ ನೇಮಕ ಮಾಡಲು ರಾಜ್ಯ ಚುನಾವಣೆ ಆಯೋಗ ನಿರ್ದೇಶನ ನೀಡಿರುವುದನ್ನು ಪ್ರಶ್ನಿಸಿ ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ,ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಹಾಗೂ ಸದಸ್ಯರಾದ ಜೀವಂಧರ್ ಜೈನ್ ಮತ್ತು ಭಾಮಿ ಅಶೋಕ್ ಶೆಣೈ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯ ಮುಂದುವರಿದ ವಿಚಾರಣೆ ನ.10ರಂದು ನಡೆಯಲಿದೆ ಎಂದು ನಗರಸಭೆಯ ಪರ ವಕೀಲರು ಮಾಹಿತಿ ನೀಡಿದ್ದಾರೆ.ಈ ನಡುವೆಯೇ ಸರಕಾರ ಆಡಳಿತಾಽಕಾರಿ ನೇಮಕಗೊಳಿಸಿ ಅಧಿಸೂಚನೆ ಹೊರಡಿಸಿದೆ.










