ನಿಡ್ಪಳ್ಳಿ: ಪಾಣಾಜೆ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಜಮಾಬಂಧಿ ಸಭೆ ಸೆ.4ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಮನೆ ತೆರಿಗೆ ಮತ್ತು ನೀರಿನ ಬಿಲ್ಲು ಸಂಗ್ರಹಕ್ಕೆ ಪ್ರಯತ್ನ ಅಗತ್ಯ- ಜಮಾಬಂಧಿ ಸಭೆಯ ಜಮಾಬಂದಿ ಅಧಿಕಾರಿಯಾಗಿ ಆಗಮಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಲೆಕ್ಕಪತ್ರ ಮತ್ತು ದಾಖಲೆ ಪರಿಶೀಲನೆ ನಡೆಸಿ ಮಾತನಾಡಿ ಪಂಚಾಯತ್ ನಲ್ಲಿ ಗ್ರಾಮದ ಅಭಿವೃದ್ಧಿ ಮಾಡಲು ಅರ್ಥಿಕ ಸ್ಥಿತಿ ಉತ್ತಮವಾಗಿರ ಬೇಕು. ಅದಕ್ಕೆ ಕಟ್ಟಡ ತೆರಿಗೆ, ನೀರಿನ ಬಿಲ್ಲು ಮತ್ತು ಇತರ ತೆರಿಗೆಗಳ ಸಂಗ್ರಹಕ್ಕೆ ನಾವು ಪ್ರಯತ್ನಿಸ ಬೇಕು. ತೆರಿಗೆ ಸಂಗ್ರಹಕ್ಕೆ ಮನೆ ಭೇಟಿ ಮಾಡಿ ಸಾರ್ವಜನಿಕರನ್ನು ಸಂಪರ್ಕಿಸಿದರೆ ಹೆಚ್ಚು ಪರಿಣಾಮಕಾರಿಯಾದೀತು ಎಂದರು.ಅದಕ್ಕೆ ಉತ್ತರಿಸಿದ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ತೆರಿಗೆ ಸಂಗ್ರಹಿಸಲು ಸಿಬ್ಬಂದಿಗಳು ಮನೆ ಭೇಟಿ ಮಾಡದ ಕಾರಣ ಸ್ವಲ್ಪ ಹಿನ್ನಡೆಯಾಗಿದೆ ಎಂದರು.ಪಂಚಾಯತ್ ಗೆ ತೆರಿಗೆ ಕಟ್ಟಲು ಬರ ಬೇಕಾದರೆ ಜನರಿಗೆ ಒಂದು ದಿನ ಅವರ ಕೆಲಸ ಬಿಟ್ಟು ಬರಬೇಕಾಗಿದೆ. ಅವರ ಅನುಕೂಲಕ್ಕಾಗಿ ಒನ್ ಲೈನ್ ಮೂಲಕ ಕಟ್ಟುವ ವ್ಯವಸ್ಥೆ ಕಲ್ಪಿಸಲು ಅವಕಾಶ ಇದ್ದರೆ ಪಂಚಾಯತ್ ಆ ಮೂಲಕ ತೆರಿಗೆ ಸಂಗ್ರಹಿಸಲು ಪ್ರಯತ್ನ ಮಾಡ ಬಹುದು ಎಂದು ಜಮಾಬಂಧಿ ಅಧಿಕಾರಿ ಸಲಹೆ ನೀಡಿದರು.ಲೆಕ್ಕಪತ್ರ ಮತ್ತು ದಾಖಲೆ ಬಗ್ಗೆ ಪರಿಶೀಲನೆ ನಡೆಸಿ ಕೆಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಗುವೆಲ್ ಗದ್ದೆ ಕೊಳವೆ ಬಾವಿ ಪಂಪು ಬಿಲ್ಲು ಜಾಸ್ತಿ ಬರಲು ಬಳಕೆ ಜಾಸ್ತಿಯೇ ಕಾರಣ- ಸಿಬ್ಬಂದಿಯ ಸ್ಪಷ್ಟೀಕರಣ
ಗುವೆಲ್ ಗದ್ದೆ ಶಾಲಾ ಬಳಿ ಇರುವ ಕೊಳವೆ ಬಾವಿ ಪಂಪು ಬಿಲ್ಲು ಹೆಚ್ಚು ಬರಲು ಕಾರಣವೇನು ಎಂದು ಕಳೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆ ಗದ್ದಲಕ್ಕೆ ಕಾರಣವಾದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸಿಬ್ಬಂದಿ ವಿಶ್ವನಾಥರವರು ಆ ಪಂಪಿನ ಟ್ಯಾಂಕ್ ನಿಂದ ಅತೀ ಹೆಚ್ಚು ನೀರು ಬಳಕೆಯಾಗುತ್ತಿದೆ. ಆರ್ಲಪದವು ಪೇಟೆ, ಪಂಚಾಯತ್ ಕಚೇರಿ, ಲೈಬ್ರೆರಿ, ಪಶು ಆಸ್ಪತ್ರೆ, 2 ಶಾಲೆ, ಅಂಗನವಾಡಿ ಕೇಂದ್ರ, ಪರಾರಿ ಮುಂತಾದ ಕಡೆ ಹೆಚ್ಚು ಸರಬರಾಜು ಆಗುತ್ತಿದ್ದು, ದಿನಂಪ್ರತಿ ಪಂಪು ಚಾಲು ಆಗುತ್ತಿದೆ. ಅಲ್ಲದೆ ಅದು 5 ಹೆಚ್.ಪಿ ಪಂಪು ಆಗಿದ್ದು, ಅದಕ್ಕೆ ಬಿಲ್ಲಿನಲ್ಲಿ ಪೆನಾಲ್ಟಿ ಬರುವುದರಿಂದ ಮತ್ತು ಅತೀ ಹೆಚ್ಚು ಪಂಪು ಬಳಕೆಯಾಗುವುದರಿಂದ ಬಿಲ್ಲು ಜಾಸ್ತಿ ಬರಲು ಕಾರಣವಾಗಿರ ಬಹುದು ಎಂದು ಸಭೆಗೆ ಸ್ಪಷ್ಟೀಕರಣ ನೀಡಿದರು.
ಸಭೆ ಬಳಿಕ ವರದಿ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು. ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ಉಪಾಧ್ಯಕ್ಷೆ ಜಯಶ್ರೀ. ಡಿ, ಸದಸ್ಯರಾದ ಸುಭಾಸ್ ರೈ, ಅಬೂಬಕ್ಕರ್, ನಾರಾಯಣ ನಾಯಕ್, ವಿಮಲ, ಸುಲೋಚನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಆಶಾ.ಬಿ ಸ್ವಾಗತಿಸಿ ವಂದಿಸಿದರು.ಸಿಬ್ಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್, ಸೌಮ್ಯ, ರೂಪಾಶ್ರೀ ಸಹಕರಿಸಿದರು.ಗುತ್ತಿಗೆದಾರ ಸದಾಶಿವ ರೈ ಸೂರಂಬೈಲು, ಗ್ರಾಮಸ್ಥರು ಪಾಲ್ಗೊಂಡರು.