ಕಡಬ: ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಸರಕಾರ 90 ಲಕ್ಷ ರೂ ಮಂಜೂರುಗೊಳಿಸಿದೆ ಎಂದು ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಹೇಳಿದರು.
ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವೈಜ್ಞಾನಿಕ ಕಾಮಗಾರಿ ನಡೆಸಿ ಶಾಲಾ ಕಟ್ಟಡ ಕುಸಿತವಾದ ಹಿನ್ನೆಲೆಯಲ್ಲಿ ಉಳಿದ ಕೊಠಡಿಗಳು ಕೂಡಾ ಬಳಕೆಗೆ ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ಅದನ್ನು ತೆರವುಗೊಳಿಸಿ ನೂತನವಾಗಿ ಐದು ಕೊಠಡಿಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ನಮ್ಮ ನಾಯಕರ ಒತ್ತಾಯದ ಮೇರೆಗೆ ಸರಕಾರದಿಂದ 85 ರಿಂದ 90 ಲಕ್ಷ ರೂ ಅನುದಾನ ಮಂಜೂರುಗೊಂಡಿದೆ ಎಂದು ಹೇಳಿದರು. ಅನುದಾನ ಮಂಜೂರಾಗಿರುವುದು ನಿಜವೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರಾಯ್ ಅಬ್ರಹಾಂ ನೂರಕ್ಕೆ ನೂರು ಸತ್ಯ ನಾನು ಆ ಬಗ್ಗೆ ದಾಖಲೆ ನೀಡುತ್ತೇನೆ ಈಗಾಗಲೇ ಮೌಖಿಕ ಆದೇಶ ಬಂದಿದೆ ಎಂದು ಸ್ಪಷ್ಟಪಡಿಸಿದರು.
ಕುಂತೂರು ಶಾಲಾ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆಯ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ, ಅಧಿಕೃತವಾದ ಯಾವುದೇ ಎಗ್ರಿಮೆಂಟು ಮಾಡದೇ ಎಂಜಿನಿಯರ್, ಗುತ್ತಿಗೆದಾರ ಮತ್ತು ಪಂಚಾಯತಿಯವರು ಸೇರಿಕೊಂಡು ಹಣ ಹೊಡೆಯುವ ಉದ್ದೇಶದಿಂದ ಕಳಪೆ ಕಾಮಗಾರಿ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ಮುಖ್ಯವಾಗಿ ತಾಲೂಕು ಪಂಚಾಯಿತಿ ಇ.ಒ, ಗ್ರಾಮ ಪಂಚಾಯಿತಿ ಪಿ.ಡಿ.ಓ. ಗುತ್ತಿಗೆದಾರರು, ಪಂಚಾಯಿತಿ ಆಡಳಿತ ಮಂಡಳಿಯವರಿಗೆ ಹಾಗೂ ಕುಂತೂರು ಒಂದನೇ ವಾರ್ಡ್ ಸದಸ್ಯರಿಗೆ ತಿಳಿಯದೆ ಈ ಕೆಲಸ ನಡೆದಿಲ್ಲ. ಆದ್ದರಿಂದ ಇವರ ವಿರುದ್ಧ ಕಾನೂನುಕ್ರಮ ಜರಗಿಸಬೇಕು, ಅನಾಹುತಕ್ಕೆ ಕಾರಣರಾದವರಿಂದ ನಷ್ಟವನ್ನುಭರಿಸಬೇಕು ಎಂದು ಆಗ್ರಹಿಸಿದರು.
ಗ್ರಾ.ಪಂ. ಸದಸ್ಯರು ರಾಜೀನಾಮೆ ನೀಡಲಿ:
ಪೆರಾಬೆ ಪಂಚಾಯಿತಿಯ ಒಂದನೇ ವಾರ್ಡ್‌ನ ಸದಸ್ಯರು ಹಾಗೂ ಆಡಳಿತ ಮಂಡಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕಟ್ಟಡ ಕುಸಿತದ ನೈತಿಕ ಹೊಣೆಗಾರಿಕೆ ಇರುವುದರಿಂದ ಅವರೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ತಪ್ಪಿದಲ್ಲಿ ಊರವರು ಹಾಗೂ ವಿದ್ಯಾಭಿಮಾನಿಗಳೊಂದಿಗೆ ಸೇರಿ ಕಡಬ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿಯವರು, ಸಹಾಯಕ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳು ಹಾಗೂ ಕಡಬ ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಗುರುರಾಜ್ ಕೇವಳ, ಸಾಮಾಜಿಕ ಮುಂದಾಳು ಸಾಜಾನ್ ವರ್ಗೀಸ್ ಉಪಸ್ಥಿತರಿದ್ದರು.
ಅನುದಾನ ಬಿಡುಗಡೆ ಬಗ್ಗೆ ಸಂಜೆಯೊಳಗೆ ದಾಖಲೆ ನೀಡಲಾಗುವುದು ಎಂದು ಭರವಸೆ ನೀಡಿದ್ದ ರಾಯ್ ಅಬ್ರಹಾಂ ಪತ್ರಿಕಾಗೋಷ್ಠಿಯಲ್ಲಿದ್ದ ಸಾಜಾನ ವರ್ಗೀಸ್ ಅವರ ಮುಖಾಂತರ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಿಂದ ಕ್ಷೇತ್ರ ಶಿಕ್ಷಣಾಽಕಾರಿಯವರಿಗೆ ಅಂದಾಜು ಪಟ್ಟಿ ಸಲ್ಲಿಸಿದ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪತ್ರದಲ್ಲಿ ಅಪಾಯಕಾರಿ ಕಟ್ಟಡವನ್ನು ಕೆಡವಲು ಹಾಗೂ ಐದು ಕೊಠಡಿಗಳ ನಿರ್ಮಾಣಕ್ಕೆ ತಗಲಬಹುದಾದ ವೆಚ್ಚದ ಅಂದಾಜುಪಟ್ಟಿಯನ್ನು ತಯಾರಿಸಿದ ವರದಿ ನೀಡಲಾಗಿದೆ. ಶಾಲಾ ಕಟ್ಟಡ ಕುಸಿತವಾದ ಸಂದರ್ಭದಲ್ಲಿ ಕಟ್ಟಡ ಪರಿಶೀಲನೆ ನಡೆಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಹೊಸದಾಗಿ ಐದು ಕೊಠಡಿಗಳ ರಚನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುತ್ತಾರೆ. ಅದರಂತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹೊಸದಾಗಿ ಐದು ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ 85 ಲಕ್ಷ ರೂ ಮೊತ್ತದ ಅಂದಾಜುಪಟ್ಟಿ ತಯಾರಿಸಿದ್ದು , ಪತ್ರದಲ್ಲಿ ಅನುದಾನ ಮಂಜೂರಾತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮುಂದಿನ ಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಕಳುಹಿಸಿಕೊಟ್ಟಿರುವ ಬಗ್ಗೆ ಮಾಹಿತಿ ಇದೆ, ಇದರೊಂದಿಗೆ ಅಪಾಯಕಾರಿ ಕಟ್ಟಡಗಳ ತೆರವಿಗೆ ಒಟ್ಟು 27,266 ರೂನ ಅಂದಾಜುಪಟ್ಟಿಯನ್ನೂ ಕಳುಹಿಸಿಕೊಡಲಾಗಿದೆ. ಅನುದಾನ ಮಂಜೂರಾಗಿರುವ ಯಾವುದೇ ದಾಖಲೆಯನ್ನು ರಾಯ್ ಅಬ್ರಹಾಂ ಒದಗಿಸಿಲ್ಲ.