




ಮೆಡಿಕಲ್ ಕಾಲೇಜು ವಿಚಾರ, ವಿಟ್ಲಕ್ಕೆ ಡಯಾಲಿಸಿಸ್ ಕೇಂದ್ರ, ಸರಕಾರಿ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರ ಕುರಿತು ಮಾತುಕತೆ








ಪುತ್ತೂರು: ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಅನುಮೋದನೆಗೊಂಡಿದ್ದು ಮೆಡಿಕಲ್ ಕಾಲೇಜು ಕಡತವನ್ನು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಇಲಾಖೆಗೆ ಹಸ್ತಾಂತರ ಮಾಡುವ ಬಗ್ಗೆ , ವಿಟ್ಲ ಸಮುದಾಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪನೆ ಮಾಡುವುದು ಹಾಗೂ ಪುತ್ತೂರು,ವಿಟ್ಲ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್ ರೈ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ ಅವರ ಜೊತೆ ಮಾತುಕತೆ ನಡೆಸಿದರು.
ಗುರುವಾರ ಬೆಂಗಳೂರಿನಲ್ಲಿ ಅಧಿಕಾರಿಯನ್ನು ಭೇಟಿಯಾದ ಶಾಸಕರು, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಈಗಾಗಲೇ ಸರಕಾರದಿಂದ ಅನುಮೋದನೆಗೊಂಡಿದ್ದು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿ ಸರಕಾರ ಆದೇಶ ಮಾಡಿದೆ. ಈ ಆದೇಶವನ್ನು ಆದಷ್ಟು ಶೀಘ್ರದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡುವಂತೆ ಕೇಳಿಕೊಂಡಿದ್ದಾರೆ.ಸರಕಾರಿ ಆಸ್ಪತ್ರೆಗಳು ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಪುತ್ತೂರಿಗೆ 300 ಬೆಡ್ ನ ಆಸ್ಪತ್ರೆ ಮಂಜೂರಾಗಿದ್ದು ಇದು ಮೆಡಿಕಲ್ ಕಾಲೇಜಿಗೆ ಸಂಬಂಧಪಟ್ಟಿರುವ ಕಾರಣ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ವಿಭಾಗಕ್ಕೆ ಹಸ್ತಾಂತರವಾಗಬೇಕಿದೆ.
ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಅನೇಕ ಮಂದಿ ಕಿಡ್ನಿ ಕಾಯಿಲೆಗೆ ಸಂಬಂಧಿಸಿದ ರೋಗಿಗಳಿದ್ದು ಡಯಾಲಿಸಿಸ್ ವ್ಯವಸ್ಥೆ ಇಲ್ಲದೆ ಕಷ್ಟಪಡುವಂತಾಗಿದೆ. ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭ ಮಾಡುವ ಬಗ್ಗೆ ಶಾಸಕರು ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ರಲ್ಲಿ ಮನವಿ ಮಾಡಿದ್ದರು. ಸಚಿವರು ಶೀಘ್ರ ಕೇಂದ್ರ ಸ್ಥಾಪನೆಯ ಭರವಸೆಯನ್ನು ನೀಡಿದ್ದರು. ಜಿ.ಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಈ ವಿಚಾರವನ್ನು ಶಾಸಕರು ಪ್ರಸ್ತಾಪ ಮಾಡಿದ್ದರು. ಇದೀಗ ಆರೋಗ್ಯ ಇಲಾಖೆಯ ಮೂಲಕ ವಿಟ್ಲದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಯಾಗಲಿದ್ದು ಶೀಘ್ರ ಮಂಜೂರಾತಿಗೆ ಅಧಿಕಾರಿ ಜೊತೆ ಶಾಸಕರು ಮಾತುಕತೆ ನಡೆಸಿದರು.
ಸರಕಾರಿ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರ ನೇಮಿಸಿ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಪ್ರಸೂತಿ ತಜ್ಞರು, ಕಣ್ಣಿನ ತಜ್ಞರ ಕೊರತೆ ಇದ್ದು ಅದನ್ನು ಶೀಘ್ರ ಭರ್ತಿ ಮಾಡುವಂತೆ ಅಧಿಕಾರಿಗೆ ತಿಳಿಸಿದರು. ವಿಟ್ಲ ಸಮುದಾಯ ಕೇಂದ್ರದಲ್ಲೂ ವೈದ್ಯರ ಕೊರತೆಯನ್ನು ಪರಿಹರಿಸುವಂತೆ ಕೇಳಿಕೊಂಡ ಶಾಸಕರು, ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ವಿಚಾರವನ್ನು ಈಗಾಗಲೇ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಇಲಾಖೆಯಿಂದ ಸೂಕ್ತ ಕ್ರಮ ಅಗತ್ಯವಿದೆ ಎಂದು ಅಧಿಕಾರಿಗೆ ಶಾಸಕರು ತಿಳಿಸಿದರು.







