‘ಕಿಲ್ಲೆ ಮೈದಾನದ ಗಣಪತಿ ಕರ್ನಾಟಕ ರಾಜ್ಯದಲ್ಲೆ ವಿಶಿಷ್ಟ..’: ಪಂಜಿಗುಡ್ಡೆ ಈಶ್ವರ ಭಟ್
ಪುತ್ತೂರು: ಇಲ್ಲಿನ ಐತಿಹಾಸಿಕ ಕಿಲ್ಲೆ ಮೈದಾನದಲ್ಲಿ ದೇವತಾ ಸಮಿತಿಯ ವತಿಯಿಂದ ಆಚರಿಸಕೊಂಡು ಬರಲಾಗುತ್ತಿರುವ ಐತಿಹಾಸಿಕ ಹಿನ್ನಲೆಯುಳ್ಳ ಗಣೇಶೋತ್ಸವದ ಹಿನ್ನಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮ ಸೆ.07ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮನ್ನು ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪ್ರಗತಿಪರ ಕೃಷಿಕ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ‘ಪುತ್ತೂರು ಕಿಲ್ಲೆ ಮೈದಾನದ ವೈಭವದ ಗಣಪತಿಯು ಇಡೀ ಕರ್ನಾಟಕದಲ್ಲೆ ಬಹಳ ವಿಶಿಷ್ಟ ಎಂದು ಹೇಳಿದರು. ಎಲ್ಲಾ ಧರ್ಮ ಎಲ್ಲಾ ಜಾತಿ ಎಲ್ಲಾ ಪಕ್ಷದವರನ್ನು ಒಗ್ಗೂಡಿಸುವ ಶಕ್ತಿ ಇಲ್ಲಿನ ಗಣಪತಿಗಿದ್ದು ಆ ಮೂಲಕ ಇಲ್ಲಿನ ಈ ಉತ್ಸವವು ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿಯನ್ನು ಪಡೆದಿದೆ ಎಂದ ಅವರು, ದಿವಂಗತ ಸುಧಾಕರ ಶೆಟ್ಟಿ ಅವರ ಆಶಯ ಕೂಡ ಅದೇ ಆಗಿತ್ತು..’ ಎಂದು ಅವರು ಹೇಳಿದರು.
ಸುಧಾಕರ ಶೆಟ್ಟಿ ಅವರು ಎಲ್ಲಾ ಜಾತಿ, ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಸೌಹಾರ್ದತೆಯ ಗಣಪತಿ ಉತ್ಸವವನ್ನು ಆಚರಿಸಿಕೊಂಡು ಬಂದವರಾಗಿದ್ದಾರೆ. ಅವರ ಎಲ್ಲಾ ಗುಣಗಳನ್ನು ಪ್ರವರ್ತನೆಗಳನ್ನು ಹೊಂದಿರುವ ಅವರ ಪುತ್ರ ಅಭಿಜಿತ್ ಶೆಟ್ಟಿ ಅವರು ಮುಂದೆ ಕೂಡ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರಲಿದ್ದಾರೆ ಇವರ ಈ ಎಲ್ಲಾ ಕಾರ್ಯಗಳಿಗೆ ನಾವು ಯಾವತ್ತೂ ಕೈಜೋಡಿಸಲಿದ್ದೇವೆ ಎಂದು ಹೇಳಿದರು. ಇವತ್ತು ನಾನೇನಾದರೂ ಇಷ್ಟೊಂದು ಎತ್ತರಕ್ಕೆ ಬೆಳೆಯಬೇಕಾದರೆ ಸುಧಾಕರ ಶೆಟ್ಟಿ ಕಾರಣಕರ್ತರಾಗಿದ್ದಾರೆ. ಅವರು ಯಾವತ್ತೂ ಕೂಡ ನನ್ನನ್ನು ಪ್ರೀತಿಯಿಂದ ಕಂಡವರಾಗಿದ್ದರು ಎಂದು ಅವರು ಹೇಳಿದರು. ಸುಧಾಕರ ಶೆಟ್ಟಿ ಅವರ ಎಲ್ಲಾ ಆಸೆಗಳು ಪೂರ್ತಿಗೊಂಡರೂ ಗಣಪತಿಗೆ ಗುಡಿ ಕಟ್ಟಿಸುವ ಅವರ ಕನಸು ನನಸಾಗಬೇಕಾಗಿದೆ ಎಂದು ಹೇಳಿದರು.
ಕಿಲ್ಲೆ ಮೈದಾನದ ಅನ್ನ ಸಂತರ್ಪಣೆ ಹತ್ತೂರಲ್ಲೂ ಪ್ರಸಿದ್ಧಿ ಸುರೇಶ್ ಶೆಟ್ಟಿ
ನಿವೃತ್ತ ಅಧ್ಯಾಪಕ ಸುರೇಶ್ ಶೆಟ್ಟಿ ಯವರು ಮಾತನಾಡಿ, ಈ ಹಿಂದೆ ಕಿಲ್ಲೆ ಮೈದಾನದ ಗಣಪತಿ ಉತ್ಸವವು ಸಣ್ಣಪುಟ್ಟ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದ್ದು, ಯಾವಾಗ ಸುಧಾಕರ್ ಶೆಟ್ಟಿ ಅವರು ಇದರ ನೇತೃತ್ವವನ್ನು ವಹಿಸಿಕೊಂಡ ಬಳಿಕ ಇಡೀ ಚಿತ್ರಣವೇ ಬದಲಾಯಿತು. ಇಲ್ಲಿ ನಡೆಯುವ ಅನ್ನ ಸಂತರ್ಪಣೆ ಪುತ್ತೂರು ಮಾತ್ರವಲ್ಲ ಇಡೀ ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಅವರು ಹೇಳಿದರು. ಕಿಲ್ಲೆ ಮೈದಾನದಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮ ಪುತ್ತೂರಿನ ಎರಡನೇ ಜಾತ್ರೆಯಂತೆ ಪರಿಗಣಿಸಲಾಗಿದೆ. ದಿವಂಗತ ಸುಧಾಕರ್ ಶೆಟ್ಟಿ ಅವರ ಮನಸ್ಸಿನ ಶಕ್ತಿಯನ್ನು ಭಾವನೆಗಳನ್ನು ಅರ್ಥೈಸಿಕೊಂಡು ಅವರ ಪುತ್ರ ಅಭಿಜಿ ಶೆಟ್ಟಿ ಅವರು ಮುಂದೆ ಬಂದಿದ್ದು ಈ ಉತ್ಸವ ಮುಂದೆ ಇನ್ನಷ್ಟು ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಹೇಳಿದರು.
‘ಕಿಲ್ಲೆ ಮೈದಾನದ ಮಹಾ ಗಣೇಶೋತ್ಸವ ನಿರಂತರವಾಗಿ ಅದ್ದೂರಿಯಾಗಿ ನಡೆಯಲಿ’ – ಬಾಲಚಂದ್ರ ಕೆಮ್ಮಿಂಜೆ
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಅವರು ಮಾತನಾಡಿ, ಕಳೆದ 66 ವರ್ಷಗಳಿಂದ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬರುವಂತಹ ಪುತ್ತೂರು ಕಿಲ್ಲೆ ಮೈದಾನದ ಮಹಾಗಣೇಶೋತ್ಸವವು ಹತ್ತೂರಿನಲ್ಲೂ ಪ್ರಸಿದ್ಧಿ ಪಡೆದಿದೆ ಇಲ್ಲಿನ ಮಹಾಗಣಪತಿಯ ಆಶೀರ್ವಾದದಿಂದಲೇ ನಾನು ನಗರಸಭಾ ಉಪಾಧ್ಯಕ್ಷನಾಗಿದ್ದೇನೆ ಎಂದು ನಾನು ನಂಬಿರುತ್ತೇನೆ. ಎಂದು ಅವರು ಹೇಳಿದರು. ದಿವಂಗತ ಸುಧಾಕರ ಶೆಟ್ಟಿ ಅವರು ಕೇವಲ ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ, ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ತೊಡಗಿಸಿಕೊಂಡವರಾಗಿದ್ದರು ಕ್ರೀಡಾಪಟುವಾಗಿ ಕ್ರೀಡೆಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದರು ಎಂದು ಹೇಳಿದ ಅವರು ಸುಧಾಕರ ಶೆಟ್ಟಿ ಅವರ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದರು, ಕಿಲ್ಲೆ ಮೈದಾನದ ಈ ಮಹಾಗಣಪತಿ ಉತ್ಸವ ನಿರಂತರವಾಗಿ ಅದ್ದೂರಿಯಾಗಿ ನಡೆಯುತ್ತಾ ಬರಲಿ ಎಂದು ಅವರು ಹೇಳಿದರು.
‘ಹತ್ತೂರಿನ ಜನ ಒಗ್ಗಟ್ಟಾಗಿ ಆಚರಿಸಲ್ಪಡುವ ಕಿಲ್ಲೆಮೈದಾನದ ಗಣೇಶೋತ್ಸವ’ : ನವೀನ್ ಭಂಡಾರಿ
66 ವರ್ಷಗಳ ಗಣಪತಿ ಉತ್ಸವದ ದಾಖಲೆಯನ್ನೊಳಗೊಂಡ ವೆಬ್ ಸೈಟ್ ಅನ್ನು ಅನಾವರಣ ಮಾಡಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಕಿಲ್ಲೆ ಮೈದಾನದ ಅತ್ಯಂತ ಉತ್ಕೃಷ್ಟ , ಪ್ರತಿಷ್ಠಿತ ಗಣೇಶೋತ್ಸವ ಬಹಳಷ್ಟು ಹೆಸರುವಾಸಿಯಾಗಿದೆ. ಈ ಕಿಲ್ಲೆ ಮೈದಾನದ ಗಣೇಶೊತ್ಸವದಲ್ಲಿ ಹತ್ತೂರಿನ ಜನ ಪಾಲ್ಗೊಂಡು ಬಹಳ ವಿಜ್ರಂಭಣೆಯಿಂದ ಆಚರಿಸುವಂತಹ ಸನ್ನಿವೇಶವನ್ನು ಸುಧಾಕರ ಶೆಟ್ಟಿ ಅವರು ಸೃಷ್ಟಿ ಮಾಡಿ ಕೊಟ್ಟಿದ್ದಾರೆ. ಈ ವೈಭವದ ಗಣೇಶೋತ್ಸವ ಶತಮಾನದತ್ತ ಸಾಗಲಿ ಮತ್ತು ಯಶಸ್ವಿಯಾಗಿ ನೆರವೇರಲಿ ಎಂದು ಅವರು ಹೇಳಿದರು. ಗಣೇಶೋತ್ಸವವನ್ನು ಹಿಂದೆ ಮನೆ ಮನೆಯಲ್ಲಿ ಪೂಜಿಸಲ್ಪಡುತ್ತಿತ್ತು. ಸಂಘಟನೆಯ ಉದ್ದೇಶದಿಂದ ಸಾರ್ವಜನಿಕವಾಗಿ ಇದೊಂದು ರಾಷ್ಟ್ರೀಯ ಉತ್ಸವನಾಗಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಆಚರಿಸಿಕೊಂಡು ಬರುತ್ತಿರುವುದು ಇತಿಹಾಸದಿಂದ ಕಂಡುಬಂದಿದ್ದು ಅದರಂತೆ ನಾವು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
‘ವೆಬ್ಸೈಟ್ ಸಮಕಾಲಿಕ ದಾಖಲೆಯಾಗಲಿದೆ’ – ಡಾ ರಾಜೇಶ್ ಬೆಜ್ಜಂಗಳ
ಕಾರ್ಯಕ್ರಮವನ್ನು ನಿರೂಪಿಸಿದ ಡಾ ರಾಜೇಶ್ ಬೆಜ್ಜಂಗಳ ಮಾತನಾಡಿ, ದೇವತಾ ಸಮಿತಿಯ ಸದಸ್ಯರಾಗಿರುವ ಡೆನ್ಮಾರ್ಕ್ ನಲ್ಲಿ ಉದ್ಯೋಗದಲ್ಲಿರುವ ಸತೀಶ್ ಎಂಬವರು ತಯಾರಿಸಿದ ಕಿಲ್ಲೆ ಮೈದಾನದ ಗಣೇಶೋತ್ಸವದ 66 ವರ್ಷಗಳ ದಾಖಲೆಗಳನ್ನೊಳಗೊಂಡ ವೆಬ್ಸೈಟ್ ಅನ್ನು ಇಂದು ಅನಾವರಣ ಮಾಡಲಾಗಿದೆ ಈ ವೆಬ್ಸೈಟ್ ಮೂಲಕ ಕಳೆದ ವರ್ಷಗಳಲ್ಲಿ ನಡೆದ ಕಾರ್ಯಕ್ರಮಗಳು ಇತಿಹಾಸ. ವಿವಿಧ ಸೇವಾ ದಾಖಲೆಗಳು, ಲೇಖನಗಳು, ಸಾಹಿತ್ಯಗಳು ಅಡಕವಾಗಿದ್ದು ಈ ವೆಬ್ಸೈಟ್ ಸಮಕಾಲಿಕ ದಾಖಲೆಯಾಗಲಿದೆ ಎಂದು ಅವರು ಹೇಳಿದರು.
ಶ್ರೀದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನಲ್ಲಿ ಕಟ್ಟೆ ಸಮಿತಿಯ ಹಿರಿಯ ಸದಸ್ಯ ಕೃಷ್ಣಣ್ಣ ಗೌಡ ಉಪಸ್ಥಿತರಿದ್ದರು. ದಿನೇಶ್ ಕುಲಾಲ್ ಪಿವಿ ಸುದೇಶ್ ಕುಮಾರ್ ಚಿಕ್ಕ ಪುತ್ತೂರು ಮತ್ತಿತರರು ವಿವಿಧ ಕಾರ್ಯಕ್ರಮ ನಿರೂಪಿಸಿದರು ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು