ಒಳ್ಳೆಯದನ್ನೇ ಕಾಣುತ್ತಿದ್ದರೆ ಒಳ್ಳೆಯದನ್ನೇ ಮಾಡಲು ಸಾಧ್ಯ : ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ
ಪುತ್ತೂರು: ನಾವು ಒಳ್ಳೆಯ ವಿಚಾರಗಳನ್ನೇ ನೋಡುತ್ತಾ ಸಾಗಿದರೆ ಮಾಡುವ ಕೆಲಸಗಳೂ ಒಳ್ಳೆಯದಾಗುತ್ತಾ ಸಾಗುತ್ತವೆ. ಆದ್ದರಿಂದ ಒಳ್ಳೆಯ ಸಂಗತಿಗಳು ದೊರಕುವ ವ್ಯವಸ್ಥೆಯಲ್ಲೇ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸದಸದ್ವಿಚಾರ ಚಿಂತನೆಗಳು ನಮಗೆ ದೊರಕುತ್ತಾ ಸಾಗಿದಂತೆ ಬದುಕು ಉತ್ಕರಷ್ಟತೆಯೆಡೆಗೆ ಸಾಗುತ್ತದೆ ಎಂದು ವಾಗ್ಮಿ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಗಣೇಶ ಚೌತಿ ಆಚರಣೆ ಸಂದರ್ಭದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದು ಯುವಸಮೂಹ ಕೆಟ್ಟಿದೆ ಎಂಬ ಆರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಆದರೆ ಯುವಸಮೂಹ ಕೆಟ್ಟಿಲ್ಲ, ಬದಲಾಗಿ ಅವರಿಗೆ ಸರಿಯಾದ ಹಾದಿ ತೋರಿಸುವವರ ಅಗತ್ಯವಿದೆ ಎಂಬುದಷ್ಟೇ ಸತ್ಯವಿಚಾರ. ಆದ್ದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಿರುವುದು ಸಮರ್ಥ ಮಾರ್ಗದರ್ಶನ. ಅಂತಹ ದಾರಿತೋರುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ಆಚರಣೆಯ ಅರ್ಥಗಳನ್ನು ಅರಿತು ಸನಾತನ ಹಿಂದೂ ಧರ್ಮದ ಅತ್ಯುನ್ನತ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ವೇದಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಸಿಕೊಟ್ಟರು. ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಸಂಜೆ ಶ್ರೀ ಗಣಪತಿ ದೇವರ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳು ನಡೆದವು.