ಸೆ.11: ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ವಿವೇಕ ವಿಜಯ – ವಿಶೇಷ ಉಪನ್ಯಾಸಗಳು

0

ಪುತ್ತೂರು: ಭಾರತವು ಪಾಶ್ಚಾತ್ಯರ ಆಳ್ವಿಕೆಯಲ್ಲಿದ್ದ ಕಾಲಘಟ್ಟದಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ವಿಶ್ವಕ್ಕೆ ಸಾರಿ ಹೇಳಿದ ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದರು. 1893 ನೇ ಇಸವಿಯ ಸೆಪ್ಟೆಂಬರ್‌ 11 ರಂದು ಸ್ವಾಮಿ ವಿವೇಕಾನಂದರು ಮಾಡಿದ ಐತಿಹಾಸಿಕ ಭಾಷಣದ 131ನೇ ವರ್ಷಾಚರಣೆಯ ಸುಸಂದರ್ಭದಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು “ವಿವೇಕ ವಿಜಯ” ಎಂಬ ಶೀರ್ಷಿಕೆಯೊಂದಿಗೆ ವಿಶೇಷ ಉಪನ್ಯಾಸಗಳನ್ನು ಮೂರು ಅವಧಿಗಳಲ್ಲಿ ದಿನಾಂಕ 11 ಸೆಪ್ಟೆಂಬರ್‌ 2024 ಬುಧವಾರದಂದು ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.

ಉದ್ಘಾಟನೆ ಹಾಗೂ ಮೊದಲ ಅವಧಿ
ಬೆಳಗ್ಗೆ 9.45 ಕ್ಕೆ ಸರಿಯಾಗಿ ವಿವೇಕಾನಂದ ಆವರಣದ ಕೇಶವ ಸಂಕಲ್ಪ ಸಭಾಭವನದಲ್ಲಿ ವಿವೇಕ ವಿಜಯ ವಿಶೇಷ ಉಪನ್ಯಾಸಗಳ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್‌ ಅವರು ನೆರವೇರಿಸಲಿದ್ದಾರೆ. ಉದ್ಘಾಟನೆಯ ನಂತರ ನಡೆಯುವ ಮೊದಲ ಅವಧಿಯಲ್ಲಿ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ವಿದ್ಯಾರ್ಥಿಗಳನ್ನುದ್ದೇಶಿಸಿ “ವಿವೇಕ ಚಿಂತನ – ಭಾರತ ವಂದನಾ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಅವರು ಉಪಸ್ಥಿತರಿರಲಿದ್ದಾರೆ. ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಭಾಗವಹಿಸಲಿದ್ದಾರೆ.

ಎರಡನೇ ಅವಧಿ
ಎರಡನೇ ಅವಧಿಯು ಬೆಳಗ್ಗೆ 11.30 ಕ್ಕೆ ಸರಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆಯಲಿದ್ದು ಚಕ್ರವರ್ತಿ ಸೂಲಿಬೆಲೆಯವರು ಶಿಕ್ಷಕರನ್ನುದ್ದೇಶಿಸಿ “ವಿವೇಕ ಶಿಕ್ಷಣ – ರಾಷ್ಟ್ರ ನಿರ್ಮಾಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ಸುಮಾರು 250 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮೂರನೇ ಅವಧಿ
ಮೂರನೇ ಅವಧಿಯಲ್ಲಿ “ಬಾಂಗ್ಲಾ ವಿದ್ಯಮಾನಗಳು ಮತ್ತು ಭಾರತ” ಎಂಬ ವಿಷಯದ ಕುರಿತು ಪುತ್ತೂರು ಸಿಟಿಝನ್‌ ಫೋರಮ್‌ ನೇತೃತ್ವದಲ್ಲಿ ವಿಶೇಷ ಸಂವಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಸಂವಾದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ವಿಷಯ ಮಂಡನೆ ನಡೆಸಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನ ಜಿ. ಎಲ್. ‌ಆಚಾರ್ಯ ಜ್ಯುವೆಲರ್ಸ್‌ನ ಲಕ್ಷ್ಮೀಕಾಂತ್‌ ಬಿ. ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಪುತ್ತೂರಿನ ವಿವೇಕಾನಂದ ಇನ್ಸ್ಟಿಟ್ಯೂಟ್‌ ಆಫ್‌ ಫಾರ್ಮಾಸಿಟಿಕಲ್‌ ಸೈನ್ಸ್‌ನ ನಿರ್ದೇಶಕರಾದ ಅನಿಲಾ ದೀಪಕ್‌ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಅಖಂಡತೆಯನ್ನು ಕೇಂದ್ರೀಕರಿಸಿ ನಡೆಸಲಾಗುವ ಈ ಸಂವಾದದಲ್ಲಿ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here