ಪುತ್ತೂರು: ಬೆಟ್ಟಂಪಾಡಿ ಶ್ರೀಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ 39ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮ ಸೆ.7 ಮತ್ತು 8ರಂದು ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೆ.7ರಂದು ಬೆಳಿಗ್ಗೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಪ್ರಗತಿಪರ ಕೃಷಿಕ ಶ್ರೀಮಂಜುನಾಥ ಪೈ ಕೊಂದಲ್ಕಾನ ದೀಪ ಪ್ರಜ್ವಲಿಸಿ ಬಾಲಗಂಗಾಧರ ತಿಲಕ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿ ಭಗವಾಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.
ಧಾರ್ಮಿಕ ಸಭಾ ಕಾರ್ಯಕ್ರಮ:
ಬೆಳಿಗ್ಗೆ.11ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅತಿಥಿಯಾಗಿ ಮಾತನಾಡಿ ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿ ಸಂಸ್ಕಾರವಂತರಾಗಬೇಕು. ಮಕ್ಕಳಿಗೆ ಎಳವೆಯಲ್ಲಿಯೇ ಧಾರ್ಮಿಕ ಚಿಂತನೆ ಕೊಡಬೇಕು. ಪ್ರತೀ ಮನೆ, ಧಾರ್ಮಿಕ ಸ್ಥಳಗಳಲ್ಲಿ ಭಜನಾ ಕಾರ್ಯ ನಡೆಯಬೇಕು. ಭಜನೆಯಿಂದ ವ್ಯಕ್ತಿ, ಸಮಾಜ ಬದಲಾವಣೆ ಸಾಧ್ಯ ಎಂದರು. ಎಲ್ಲಾ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಡಿಜೆ ಕುಣಿತ ಅಬ್ಬರ ಇರುತ್ತದೆ. ಆದರೆ ಬೆಟ್ಟಂಪಾಡಿ ಗಣೇಶೋತ್ಸವದಲ್ಲಿ ಡಿಜೆ ಇಲ್ಲದೆ ಕುಣಿತ ಭಜನೆ ಅಬ್ಬರ ಇದೆ ಇದು ಇತರ ಗಣೇಶೋತ್ಸವಕ್ಕೆ ಮಾದರಿ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಶ್ವತ್ ಬರಿಮಾರು ಧಾರ್ಮಿಕ ಉಪನ್ಯಾಸ ನೀಡಿದರು. ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಮೊಕ್ತೇಸರ ತಾರಾನಾಥ ಎನ್. ರೈ ಪಡ್ಯಂಬೈಲುಗುತ್ತು, ಬೆಂಗಳೂರು ಟಿಇ ಕನೆಕ್ಟಿವಿಟಿಯ ಗ್ಲೋಬಲ್ ಪ್ರೊಡಕ್ಟ್ ಮ್ಯಾನೇಜರ್ ದೇವಿಕಿಶೋರ್, ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ನಾರಾಯಣ ಕೆ., ಪ್ರಗತಿಪರ ಕೃಷಿಕ ದೇರಣ್ಣ ರೈ ತಲೆಪ್ಪಾಡಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಆರ್.ಬಿ., ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಅನಿಲೇಶ್ ಕೃಷ್ಣ ಕಾಜಿಮೂಲೆ, ಕ್ಯಾಂಪ್ಕೋ ವಿಜಯಪುರ ಶಾಖೆಯ ಪ್ರವೀಣ್‌ರಾಜ್ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಪುತ್ತೂರು ಆಶಾ ಜ್ಯುವೆಲ್ಲರ‍್ಸ್ ಮಾಲಕ ಸಂತೋಷ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು. ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ:
ಒಲಿಂಪಿಯಾಡ್ ಸಂಸ್ಥೆಯಾದ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್‌ನಿಂದ ‘ಡಿಸ್ಟ್ರಿಕ್ಟ್ ಬೆಸ್ಟ್ ಪ್ರಿನ್ಸಿಪಾಲ್’ ಅವಾರ್ಡ್‌ಗೆ ಭಾಜನರಾದ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈವರನ್ನು ಗಣೇಶೋತ್ಸವ ಸಮಿತಿಯಿಂದ ಅಭಿನಂದಿಸಲಾಯಿತು. ಪುತ್ತೂರಿನ ವಿನೋದ್ ಚಿಕನ್ ಸೆಂಟರ್ ಮಾಲಕ ವಿನೋದ್ ರೈ ಕೂಟತ್ತಾನರವರು ವೈಯುಕ್ತಿಕವಾಗಿ ಸತೀಶ್ ಕುಮಾರ್ ರೈರವರನ್ನು ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಸತೀಶ್ ಕುಮಾರ್ ರೈ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಗಣೇಶೋತ್ಸವ ಸಮಿತಿ ಮಾಜಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಟಿ. ಅಭಿನಂದನಾ ಮಾತನಾಡಿದರು.
ಪ್ರಣತಿ ಬಲ್ಲಾಳ್ ಪ್ರಾರ್ಥಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಮಿತ್ತಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಜಯರಾಮ ರೈ ಮೂರ್ಕಾಜೆ ವಂದಿಸಿದರು. ಮಾಜಿ ಕಾರ್ಯದರ್ಶಿ ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಿಶಾಖ್‌ರಾಜ್ ಇರ್ದೆ, ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಮೊಕ್ತೇಸರ ವಿನೋದ್ ರೈ ಬೆಟ್ಟಂಪಾಡಿ ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸೆ.7ರಂದು ಅಪರಾಹ್ನ 2ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಲೆ ನಡೆಯಿತು. ಸಂಜೆ 6ರಿಂದ ವಿದುಷಿ ಗೌತಮಿ ಅನುದೀಪ್ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ, ರಾತ್ರಿ ಬೆಟ್ಟಂಪಾಡಿ ಪ್ರಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ “ಕಲಾದರ್ಶಿನಿ” ಸಾಂಸ್ಕೃತಿಕ ವೈಭವ ಬಳಿಕ ನಿತಿನ್ ಹೊಸಂಗಡಿ ನಿರ್ದೇಶನದಲ್ಲಿ ಪುಗರ್ತೆ ಕಲಾವಿದೆರ್ ವಿಟ್ಲ ಕೇಪು ಮೈರ ಅಭಿನಯದ, ಸತೀಶ್ ಶೆಟ್ಟಿ ಪಟ್ಲ ಹಿನ್ನಲೆ ಗಾಯನದ, ಶ್ರೀದುರ್ಗಾ ಕಲಾತಂಡದಿಂದ ಭಕ್ತಿಪ್ರಧಾನ ಕಲ್ಜಿಗದ ಕಾಳಿ ಮಂತ್ರದೇವತೆ ತುಳುನಾಟಕ ನಡೆಯಿತು.
ಸೆ.7ರಂದು ಬೆಳಿಗ್ಗೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, 10ರಿಂದ ಗಣಪತಿ ಹೋಮ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಗಣೇಶ ಪ್ರಸಾದ-ಅನ್ನಸಂತರ್ಪಣೆ ನಡೆಯಿತು. ರಾತ್ರಿ 8ರಿಂದ ಶ್ರೀಮಹಾಗಣಪತಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸೆ.8ರಂದು ಪೂರ್ವಾಹ್ನ 9ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ, 11ರಿಂದ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣೇಶೋತ್ಸವ ಸಮಿತಿ ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.
ಕುಣಿತ ಭಜನೆ, ಸ್ತಬ್ದಚಿತ್ರ, ಬೊಂಬೆ ಕುಣಿತ,ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ವೈಭವದ ಶೋಭಾಯಾತ್ರೆ
ಸೆ.8ರಂದು ಸಂಜೆ 4ರಿಂದ ಗಣಪತಿ ದೇವರಿಗೆ ಪೂಜೆ ನಡೆದು ವಿಶೇಷ ಅಲಂಕೃತ ವಾಹನದಲ್ಲಿ ಗಣಪತಿ ದೇವರ ಶೋಭಾಯಾತ್ರೆ ಆರಂಭಗೊಂಡಿತು. ಶೋಭಾಯಾತ್ರೆಯಲ್ಲಿ ನಿಡ್ಪಳ್ಳಿ ಶಾಂತದುರ್ಗಾ ಕುಣಿತ ಭಜನಾ ತಂಡ, ಇರ್ದೆ ವಿಷ್ಣು ಚಿಣ್ಣರ ಭಜನಾ ತಂಡ, ಕುಂಞಿಮೂಲೆ-ದರ್ಭೆ ಸಿದ್ಧಿವಿನಾಯಕ ಭಜನಾ ಸೇವಾ ಟ್ರಸ್ಟ್, ಪಾಣಾಜೆ ದೇವಸ್ಯ ರಣಮಂಗಲ ಶ್ರೀಸುಬ್ರಹ್ಮಣ್ಯ ಕುಣಿತ ಭಜನಾ ತಂಡ ಹಾಗೂ ಬೆಟ್ಟಂಪಾಡಿ ವಿನಾಯಕನಗರ ಸಿದ್ಧಿವಿನಾಯಕ ಕುಣಿತ ಭಜನಾ ತಂಡದ ಸುಮಾರು 300 ಮಕ್ಕಳಿಂದ ಕುಣಿತ ಭಜನೆ ನಡೆಯಿತು. ರೆಂಜ ಟೈಗರ‍್ಸ್ ತಂಡದಿಂದ ಕೃಷ್ಣರಾಧೆಯರ ಮತ್ತು ಬೆಟ್ಟಂಪಾಡಿ ವಿಶ್ವಹಿಂದೂ ಪರಿಷತ್‌ನಿಂದ ಭಾರತ ಮಾತೆಯ ಸ್ತಬ್ದಚಿತ್ರ ಗಮನಸೆಳೆಯಿತು. ಯುವಕರ ತಂಡದಿಂದ ಬೊಂಬೆ ಕುಣಿತ, ರೆಂಜ ಮಣಿಕಂಠ ಚೆಂಡೆಮೇಳದಿಂದ ಚೆಂಡೆಮೇಳ, ಚೆಲ್ಯಡ್ಕದಲ್ಲಿ ಕೇದಾರ ಕನ್‌ಸ್ಟ್ರಕ್ಷನ್ ಪ್ರಾಯೋಜಕತ್ವದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಚೆಲ್ಯಡ್ಕದಲ್ಲಿರುವ ಕಟ್ಟೆಯಲ್ಲಿ ಪೂಜೆ ನಡೆದು ಬಳಿಕ ಶ್ರೀಗಣೇಶ ಸ್ವಾಮಿಯ ವಿಗ್ರಹದ ಜಲಸ್ತಂಭನ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
5000ಕ್ಕೂ ಮಿಕ್ಕಿ ಭಕ್ತರಿಂದ ಗಣೇಶ ಅನ್ನಪ್ರಸಾದ ಸ್ವೀಕಾರ
ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಕ್ತರಿಗೆ ಗಣೇಶ ಅನ್ನಪ್ರಸಾದ ಅನ್ನಸಂತರ್ಪಣೆ ನಡೆಯಿತು. ಎರಡು ದಿನ ಕಾರ್ಯಕ್ರಮಮದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸುಮಾರು 5000ಕ್ಕಿಂತಲೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.