ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಕೊಳವೆ ಬಾವಿಯಲ್ಲಿ ಬರುತ್ತಿರುವ ಕುಡಿಯುವ ನೀರು ಕುಡಿಯಲು ಯೋಗ್ಯವಾಗಿಲ್ಲ. 34 ನೆಕ್ಕಿಲಾಡಿಯಿಂದ ಶುದ್ಧೀಕರಣಗೊಂಡು ಪುತ್ತೂರು ನಗರ ಸಭೆಗೆ ಪೂರೈಕೆಯಾಗುವ ಕುಡಿಯುವ ನೀರನ್ನೇ ನಮ್ಮ ಗ್ರಾಮಕ್ಕೆ ಕೊಡಬೇಕು ಎಂಬ ಗ್ರಾಮಸ್ಥರ ಬೇಡಿಕೆಯ ನಡುವೆ ಇಲ್ಲಿನ ಬೊಳಂತಿಲ ಎಂಬಲ್ಲಿ ಜಲಜೀವನ್ ಯೋಜನೆಯಡಿ ಕೊರೆದ ಕೊಳವೆ ಬಾವಿಯನ್ನು ಗ್ರಾ.ಪಂ. ವತಿಯಿಂದ ಶುದ್ಧೀಕರಿಸುವ ಕಾರ್ಯ ನಡೆಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಉಪಾಧ್ಯಕ್ಷ ಹರೀಶ್ ಡಿ., ಸದಸ್ಯ ಪ್ರಶಾಂತ್ ಕುಮಾರ್ ಡಿ. ಹಾಗೂ ಗ್ರಾ.ಪಂ.ನ ಲೆಕ್ಕ ಸಹಾಯಕ ದೇವಪ್ಪ ನಾಯ್ಕ ಕೆ. ಉಪಸ್ಥಿತರಿದ್ದರು.
ಕುಡಿಯಲು ಯೋಗ್ಯವಲ್ಲ: ಪ್ರಯೋಗಾಲಯ ವರದಿ
34 ನೆಕ್ಕಿಲಾಡಿ ಗ್ರಾ.ಪಂ.ಯು ಬೊಳಂತಿಲ ಕೊಳವೆ ಬಾವಿಯಿಂದ ಪೂರೈಕೆ ಮಾಡುವ ಕುಡಿಯುವ ನೀರನ್ನು ನೆಕ್ಕಿಲಾಡಿಯ ನಿವಾಸಿ ಶಬೀರ್ ಅಹಮ್ಮದ್ ಅವರು ಪರೀಕ್ಷೆಗೆಂದು ಮಂಗಳೂರಿನ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿ ಈ ನೀರನ್ನು 6-09-2024ರಂದು ಪರೀಕ್ಷೆ ನಡೆಸಿ, ಪ್ರಯೋಗಾಲಯ ವರದಿ ನೀಡಿದ್ದು, ಅದರಲ್ಲಿರುವ ರಿಮಾರ್ಕ್ ಕಾಲಂನಲ್ಲಿ ‘ಕುಡಿಯುವ ಉದ್ದೇಶಗಳಿಗೆ ನೀರು ಸೂಕ್ತವಲ್ಲ’ (WATER IS NOT SUITABLE FOR POTABLE PURPOSES) ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.