ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ-2023-24ರಲ್ಲಿ 3.50 ಕೋ.ರೂ ನಿವ್ವಳ ಲಾಭ-ಸೆ.22ರಂದು ವಾರ್ಷಿಕ ಮಹಾಸಭೆ

0

ಉಪ್ಪಿನಂಗಡಿ: ದ.ಕ. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಉತ್ತಮ ಸೇವೆಯಿಂದ ಹೆಸರು ಪಡೆದುಕೊಂಡ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು 2023-24ನೇ ಸಾಲಿನಲ್ಲಿ 521 ಕೋ. ರೂ. ವ್ಯವಹಾರ ನಡೆಸಿ, 3,50,41,100.86 ರೂ. ಲಾಭ ಗಳಿಸಿದೆ. ಸಂಘದ ಆಡಳಿತ ಮಂಡಳಿ ಸದಸ್ಯರ ಸಲಹೆ ಸೂಚನೆ, ನೌಕರರ ಪರಿಶ್ರಮ ಹಾಗೂ ಸದಸ್ಯರ ಮತ್ತು ಗ್ರಾಹಕರ ಉತ್ತಮ ಸ್ಪಂದನೆಯಿಂದ ಈ ಉತ್ತಮ ಸಾಧನೆ ಸಾಧ್ಯವಾಗಿದೆ. ಸಂಘದ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.22ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ವಿ. ಪ್ರಸಾದ ತಿಳಿಸಿದರು.


ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸಂಘದ ಸಭೆಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಪೂರ್ವಾಹ್ನ 10:30ಕ್ಕೆ ಸಭೆ ನಡೆಯಲಿದೆ. ಈ ಬಾರಿ ಶೇ.13 ಪಾಲು ಮುನಾಫೆಯನ್ನು ನೀಡುವಂತೆ ಮಹಾಸಭೆಗೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ. ಮಹಾಸಭೆಯಲ್ಲಿ ಪ್ರಸ್ತಾಪಿಸಲು ಏನಾದರೂ ವಿಷಯಗಳಿದ್ದಲ್ಲಿ ಸಭೆಯ ದಿನಾಂಕದ 5 ದಿನ ಮುಂಚಿತವಾಗಿ ಸಂಘದ ಕಾರ್ಯನಿರ್ವಹಣಾಧಿಕಾರಿಯವರಿಗೆ ಲಿಖಿತವಾಗಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ವಿವಿಧ ವ್ಯಾಪಾರಗಳಿಂದ 87.65 ಲಕ್ಷ ರೂ. ಲಾಭ ಗಳಿಸಿರುತ್ತದೆ. ಹಾಗೆಯೇ ಒಟ್ಟು ವ್ಯವಹಾರದಿಂದ 3 ಕೋಟಿ 50 ಲಕ್ಷ ಲಾಭ ಗಳಿಸಿರುತ್ತದೆ. 2023-24ನೇ ಸಾಲಿನಲ್ಲಿ ಸಂಘವು ಸಾಧಿಸಿದ ಗಣನೀಯ ಪ್ರಗತಿಗಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿಯನ್ನು ಪಡೆದಿದ್ದು, ಸತತ 4ನೇ ಬಾರಿಗೆ ಸಂಘವು ಈ ಪ್ರಶಸ್ತಿಗೆ ಭಾಜನವಾಗಿದೆ ಎಂದರು.


ಸಂಘದಲ್ಲಿ ವರ್ಷಾಂತ್ಯಕ್ಕೆ ಒಟ್ಟು 8942 ಸದಸ್ಯರಿದ್ದು 9.10 ಕೋಟಿ ಶೇರು ಬಂಡವಾಳವನ್ನು ಸಂಗ್ರಹಿಸಲಾಗಿದೆ. ಸಂಘವು ವರದಿ ಸಾಲಿನಲ್ಲಿ 94.50 ಕೋಟಿ ರೂ. ಠೇವಣಿ ಹೊಂದಿದ್ದು 119.26 ಕೋಟಿ ಸಾಲ ವಿತರಿಸಿದೆ. ವರ್ಷಾಂತ್ಯದಲ್ಲಿ ಶೇ. 98.33 ಸಾಲ ವಸೂಲಾತಿ ಆಗಿರುತ್ತದೆ. ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 12.61 ಕೋಟಿ ಇರುತ್ತದೆ. ಸಂಘವು ಒಟ್ಟು 141.02 ಲಕ್ಷ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಆಡಿಟ್ ವರ್ಗೀಕರಣದಲ್ಲಿ ಸತತ “ಎ” ಗ್ರೇಡನ್ನು ಪಡೆಯುತ್ತಾ ಬಂದಿರುತ್ತದೆ ಎಂದು ಅವರು ತಿಳಿಸಿದರು.


“ಸುವರ್ಣ ಸಂಗಮ ನಿಧಿ” ಯೋಜನೆಯಂತೆ ಮೃತಪಟ್ಟ ಸದಸ್ಯರ ವಾರೀಸುದಾರರಿಗೆ 20,000 ರೂ. ಸೌಲಭ್ಯ ನೀಡಲಾಗುತ್ತದೆ. ಅದರಂತೆ ವರದಿ ಸಾಲಿನಲ್ಲಿ 37 ಮಂದಿ ಮೃತ ಸದಸ್ಯರ ವಾರೀಸುದಾರರಿಗೆ 7,40,000 ರೂ. ಮೊತ್ತವನ್ನು ನೀಡಲಾಗಿದೆ. ಸಂಘದ ಕೃಷಿ ಸಾಲಗಾರರನ್ನು “ಪಾಯಸ್” (ವೈಯಕ್ತಿಕ ಅಪಘಾತ ವಿಮೆ) ವಿಮಾ ಮತ್ತು ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆಗೆ ಒಳಪಡಿಸಲಾಗಿದೆ. “ವಿದ್ಯಾಶ್ರೀ” ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಘದ ಕಾರ್ಯವ್ಯಾಪ್ತಿಯ ಬಿಪಿಎಲ್ ಪಡಿತರ ಚೀಟಿದಾರ ಕುಟುಂಬದ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಾಗೂ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ 2023-24ರಲ್ಲಿ ಒಟ್ಟು 32 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಕೆ.ವಿ. ಪ್ರಸಾದ ತಿಳಿಸಿದರು.


ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪನಿಗಳ ಡೀಲರ್‌ಶಿಪ್ ಪಡಕೊಂಡು ರಖಂ ನೆಲೆಯಲ್ಲಿ ಜಿಲ್ಲಾದ್ಯಂತ ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡುತ್ತಿರುವ ಏಕೈಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದಾಗಿದ್ದು, ಸಂಘದಲ್ಲಿ ಸದಸ್ಯರ, ಗ್ರಾಹಕರ ಹಿತದೃಷ್ಟಿಯಿಂದ ಪಹಣಿ ಪತ್ರ ಮತ್ತು ಇ-ಸ್ಟಾಂಪಿಂಗ್ ಸೌಲಭ್ಯ ನೀಡಲಾಗುತ್ತಿದೆ ಮತ್ತು ಚಿನ್ನಾಭರಣ ಪರಿಶುದ್ಧತೆಯನ್ನು ತಿಳಿಸುವ ಅತ್ಯಾಧುನಿಕ ತಂತ್ರಜ್ಞಾನದ ಚಿನ್ನಾಭರಣ ಪರಿಶುದ್ಧತೆ ಪರಿಶೀಲನಾ ಯಂತ್ರ ಹೊಂದಿದ್ದು, ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನಮ್ಮ ಸಹಕಾರಿ ಸಂಘದಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್ ಹಾಗೂ ಸೇಫ್ ಲಾಕರ್ ವ್ಯವಸ್ಥೆಯೂ ಇರುತ್ತದೆ ಎಂದು ಅವರು ತಿಳಿಸಿದರು.


“ಅಮೃತ ಮಹೋತ್ಸವ” ವರ್ಷಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಸಂಭ್ರಮದಿಂದ ಆಚರಿಸಿದ್ದು, ಅಮೃತಮಹೋತ್ಸವ ವರ್ಷಾಚರಣೆಯ ಸವಿನೆನಪಿಗಾಗಿ 570 ಚದರ ಮೀಟರ್ ವಿಸ್ತೀರ್ಣದ “ಅಮೃತ ಸಂಗಮ” ಎಂಬ ರಸಗೊಬ್ಬರ ಗೋದಾಮು ಮತ್ತು ಕಚೇರಿ ಹಾಗೂ “ಅಮೃತ ಸಹಕಾರಿ ಮಾರ್ಟ್” ಎಂಬ ದಿನಬಳಕೆ ವಸ್ತುಗಳ ಮಾರಾಟ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಗಿದ್ದು, ಇದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘದ ಅಧ್ಯಕ್ಷರಾದ ಕೆ.ವಿ. ಪ್ರಸಾದ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ಹಾಗೂ ನಿರ್ದೇಶಕರಾದ ಯಶವಂತ ಜಿ., ಯತೀಶ್ ಶೆಟ್ಟಿ ಯು., ಎಂ. ಜಗದೀಶ ರಾವ್, ದಯಾನಂದ ಎಸ್., ರಾಮ ನಾಯ್ಕ, ಶ್ರೀಮತಿ ಸುಜಾತ ಆರ್. ರೈ, ಶ್ರೀಮತಿ ಶ್ಯಾಮಲ ಶೆಣೈ, ರಾಜೇಶ್ , ಕುಂಞ ಎಂ. ಎನ್., ಸಚಿನ್ ಎಂ., ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಎಚ್. ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಶರತ್ ಡಿ. ಉಪಸ್ಥಿತರಿದ್ದರು.


34 ನೆಕ್ಕಿಲಾಡಿ ಹಾಗೂ ಇಳಂತಿಲದಲ್ಲಿ ಸಂಘದ ಶಾಖೆ ತೆರೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಜಾಗ ಖರೀದಿಗೆ ಚಿಂತಿಸಲಾಗಿದೆ. ಅಲ್ಲದೇ, ಕೃಷಿ ಸಾಲ ಪಡೆದ ಸದಸ್ಯರನ್ನು ವಿಮಾ ಸೌಲಭ್ಯದ ವ್ಯಾಪ್ತಿಗೆ ಒಳಪಡಿಸುವ ಯೋಜನೆ ಹಾಕಿಕೊಂಡಿದ್ದು, ಈ ವಿಮಾ ಯೋಜನೆಗೊಳಪಟ್ಟ ಕೃಷಿ ಸಾಲ ಪಡೆದ ಸದಸ್ಯರು ಆಕಸ್ಮಿಕ ಮರಣ ಹೊಂದಿದ್ದಲ್ಲಿ ಸಾಲದ ಮೊತ್ತವನ್ನು ವಿಮಾ ಕಂಪೆನಿ ಭರಿಸುತ್ತದೆ. ಇದರ ವಿಮಾ ಕಂತಿನ ಅರ್ಧ ಭಾಗವನ್ನು ಸಂಘವು ಭರಿಸಿದರೆ, ಇನ್ನರ್ಧ ಭಾಗವನ್ನು ವಿಮಾ ಯೋಜನೆಗೆ ಒಳಪಡುವ ಸದಸ್ಯರು ಭರಿಸಬೇಕಾಗುತ್ತದೆ. ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತರೆ ಈ ಸೌಲಭ್ಯವನ್ನು ಕಲ್ಪಿಸುವ ಚಿಂತನೆಯಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ತಿಳಿಸಿದರು.

LEAVE A REPLY

Please enter your comment!
Please enter your name here