ವಿಟ್ಲ: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವಿಟ್ಲ ಶಾಖೆಯ ಸ್ವಂತ ಕಟ್ಟಡ ಕೋಣೆಯ ಉದ್ಘಾಟನೆ

0

ಪುತ್ತೂರು: ಕುಂಬಾರರ ಗುಡಿ ಕೈಗಾರಿಕೆ ಸಹಕಾರ ಸಂಘ ಅತ್ಯಲ್ಪಕಾಲದಲ್ಲಿ ಭಾರಿ ಅಭಿವೃದ್ದಿಯಾಗಿ ಜನಮೆಚ್ಚುಗೆ ಪಡೆದಿರುವುದು ಭಾರಿ ಹೆಮ್ಮೆಯ ವಿಷಯ ಎಂದು ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಬಿ.ಎಸ್.ಎಫ್ ಮತ್ತು ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಏಜೆನ್ಸಿಯ ಮಾಲಕ ಚಂದಪ್ಪ ಮೂಲ್ಯ ಅವರು ಹೇಳಿದರು.


ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯೊಂದಿಗೆ 15 ಶಾಖೆಗಳ ಮೂಲಕ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿಕೊಂಡು ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವಿಟ್ಲ ಸ್ಮಾರ್ಟ್ ಸಿಟಿಯಲ್ಲಿ ವಿಟ್ಲ ಶಾಖೆ ಸ್ಥಳಾಂತರ ಮತ್ತು ಸ್ವಂತ ಕಟ್ಟಡ ಕೋಣೆಯನ್ನು ಅವರು ಸೆ.13ರಂದು ಉದ್ಘಾಟಿಸಿ ಮಾತನಾಡಿದರು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಕಾರ್ಯಚಟುವಟಿಕೆಯಿಂದ ಸಂತೋಷ ಪಟ್ಟಿದ್ದೇನೆ. 15 ಶಾಖೆಗಳನ್ನು ಹೊಂದಿಕೊಂಡು ಅತ್ಯಲ್ಪ ಕಾಲದಲ್ಲಿ ಭಾರಿ ಅಭಿವೃದ್ದಿಯಾಗಿ ಜನಮೆಚ್ಚುಗೆ ಪಡೆದಿರುವುದು ಭಾರಿ ಹೆಮ್ಮೆಯ ವಿಷಯ. ವಿಟ್ಲದಲ್ಲೂ ಯೋಗ್ಯ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ಇಂತಹ ಸಂದರ್ಭದಲ್ಲಿ ನಮ್ಮ ಮೂಲ ಉದ್ದೇಶವಾದ ಗುಡಿಕೈಗಾರಿಕೆ ಪ್ರೋತ್ಸಾಹ ಕೊಡಬೇಕು. ಇವತ್ತು ಮಣ್ಣಿನ ಕೊರತೆ ಇದೆ. ಆದರೆ ಕುಂಬಾರರ ಉತ್ಪನ್ನಕ್ಕೆ ಬೇಡಿಕೆ ಇದೆ. ಮೂಲ ಗುಡಿಕೈಗಾರಿಕೆಗೆ ಪ್ರೋತ್ಸಾಹ ಕೊಟ್ಟು ಬ್ಯಾಂಕ್ ಅನ್ನು ನಡೆಸಬೇಕು ಎಂದರು.


ದೀಪ ಪ್ರಜ್ವಲನೆ ಮಾಡಿದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಗಣಕ ಯಂತ್ರ ಉದ್ಘಾಟಿಸಿದ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ , ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಸಂಗೀತ , ವಿಟ್ಲ ಗ್ರಾ.ಪಂಚಾಯತ್‌ನ ಮಾಜಿ ಅಧ್ಯಕ್ಷ ರಮಾನಾಥ , ವಿಟ್ಲ, ಭಾರತ್ ಅಡಿಟೋರಿಯಂನ ಮ್ಹಾಲಕ ಸಂಜೀವ ಪೂಜಾರಿ ಶುಭ ಹಾರೈಸಿದರು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಎಂ ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಹೊಂಡಾ ಶೋ ರೂಮ್ ಮತ್ತು ಶೆಲ್ ಪೆಟ್ರೋಲ್ ಪಂಪ್‌ನ ಮಾಲಕ ಉದ್ಯಮಿ ಕೃಷ್ಣಕಿಶೋರ್ ಎನ್.ಟಿ ಅವರು ಭದ್ರತಾ ಕೋಣೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ವಾಹನ ಖರೀದಿಗೆ ಸಾಲ ಪಡೆದ ತಾರನಾಥ್ ಅವರಿಗೆ ವಾಹನ ಕೀ ಹಸ್ತಾಂತರ ಮಾಡಲಾಯಿತು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ವಿಟ್ಲ ಎಂಪ್ಯಾಯರ್ ಮಾಲ್‌ನ ಮಾಲಕ ಪೀಟರ್ ಎಫ್ ಲಸ್ರಾದೋ, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಾಬು ಬಿ.ಕೆ, ಇಂಜಿನಿಯರ್ ರಾಮ ಮೂಲ್ಯ, ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ವಸಂತ ಮೂಲ್ಯ ಎರುಂಬು, ವಿಟ್ಲ ಸ್ಮಾರ್ಟ್ ಸಿಟಿಯ ಮಹಮ್ಮದ್ ಹನೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ದಾಮೋದರ್ ವಿ, ನಿರ್ದೇಶಕರಾದ ಗಣೇಶ್ ಪಿ, ನಾಗೇಶ್ ಕುಲಾಲ್, ಸಚ್ಚಿದಾನಂದ ಡಿ, ಶಿವಪ್ಪ ಮೂಲ್ಯ, ಪ್ರಶಾಂತ್ ಬಂಜನ್, ಸುಜಾತ, ಜಯಪ್ರಕಾಶ್ ಅತಿಥಿಗಳನ್ನು ಗೌರವಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ಸ್ವಾಗತಿಸಿದರು. ದೀಪಕ್ ಕುಮಾರ್ ಪ್ರಾರ್ಥಿಸಿದರು. ಶಾಖಾ ಪ್ರಬಂಧಕ ಗಣೇಶ್ ಕುಮಾರ್ ಟಿ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಸೇಸಪ್ಪ ಕುಲಾಲ್, ಜಯಶ್ರೀ ಎಸ್, ಪದ್ಮಕುಮಾರ್, ಶಿವಪ್ಪ ಮೂಲ್ಯ ಶುಭ ಎ ಬಂಜನ್ ಸಹಿತ ಸಂಘದ ಸದಸ್ಯರು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here