ಬೆಟ್ಟಂಪಾಡಿ ಕಾಲೇಜಿನಲ್ಲಿ ವಾಣಿಜ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

0

ಸಿದ್ಧತೆಯಿಂದ ಆತ್ಮವಿಶ್ವಾಸ , ಆತ್ಮವಿಶ್ವಾಸದಿಂದ ಯಶಸ್ಸು : ಪ್ರೊ. ಪ್ರವೀಣ್ ಡಿ

ವಾಣಿಜ್ಯ ವಿಭಾಗದಿಂದ ವಿದ್ಯಾರ್ಥಿಗಳು ಬೌದ್ಧಿಕವಾಗಿ, ವೃತ್ತಿ ಪರವಾಗಿ, ಕಠಿಣ ಕೌಶಲ್ಯಗಳನ್ನು ಮತ್ತು ಮೃದು ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ತಮಗೆ ದೊರಕಿರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು ಎಂಬುದಾಗಿ ಉಜಿರೆ ಎಸ್ ಡಿ ಎಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಪ್ರವೀಣ್ ಡಿ ರವರು ಹೇಳಿದರು. ಅವರು ಸೆ.13 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ 2024 – 25ನೇ ಸಾಲಿನ ವಾಣಿಜ್ಯ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಒತ್ತಡ ನಿರ್ವಹಣೆ ಎಂಬ ವಿಷಯದ ಅಡಿಯಲ್ಲಿ ಸಂತೋಷ ಮತ್ತು ಒತ್ತಡ ಮುಕ್ತ ಜೀವನ ನಡೆಸಲು ಪ್ರಾಯೋಗಿಕ ಮಾರ್ಗಗಳು ಅಗತ್ಯ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸವನ್ನು ನೀಡಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನವನ್ನು ವೃದ್ಧಿಸುವಲ್ಲಿ ವಾಣಿಜ್ಯ ವಿಭಾಗದ ಕಾರ್ಯ ಚಟುವಟಿಕೆಗಳು ಸಹಕಾರಿಯಾಗಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಮಚಂದ್ರ ಡಿ ಇವರು ಮಾತನಾಡಿ ವಾಣಿಜ್ಯ ವಿಭಾಗದ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ಕೌಶಲ್ಯವನ್ನು ವೃದ್ಧಿಸುವ ಹಾಗೂ ವ್ಯಕ್ತಿತ್ವ ವಿಕಸನವನ್ನು ರೂಪಿಸುವ ವೇದಿಕೆಯಾಗಿದೆ ಎಂದರು.


ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ವಿದ್ಯಾರ್ಥಿಗಳು ತಮ್ಮ ಕಲಿಕಾ ಜೀವನದಲ್ಲಿ ಕಷ್ಟಪಟ್ಟು ಇಷ್ಟದಿಂದ ಕೆಲಸ ಮಾಡಿದರೆ ಯಶಸ್ಸನ್ನು ಪಡೆಯಬಹುದು. ಹೊಸ ಕಾಲದ ಸವಾಲುಗಳನ್ನು ವಿದ್ಯಾರ್ಥಿಗಳು ಹೇಗೆ ಎದುರಿಸಬೇಕು ಎನ್ನುವ ಸಾಮರ್ಥ್ಯ ಈ ಕಾರ್ಯ ಚಟುವಟಿಕೆಗಳಿಂದ ಸಿಗಲಿ ಎಂದು ಶುಭ ಹಾರೈಸಿದರು.
ಗ್ರಂಥಾಪಾಲಕ ರಾಮ ಕೆ ಅವರು ಮಾತನಾಡಿ, ಕಾಲೇಜಿನ ವಾಣಿಜ್ಯ ಸಂಘವು ಅತ್ಯುತ್ತಮ ಶೈಕ್ಷಣಿಕ ಚಟುವಟಿಕೆಗಳನ್ನು ಸಂಘಟಿಸುವುದರೊಂದಿಗೆ ಕಾಲೇಜಿನ ಗ್ರಂಥಾಲಯದಲ್ಲಿ ಲಭ್ಯವಿರುವ ಉದ್ಯೋಗಕ್ಕೆ ಪೂರಕವಾಗಿರುವ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಹಾಗೂ ಡಿಜಿಟಲ್ ಗ್ರಂಥಾಲಯದ ಸದ್ಭಳಕೆ ಮಾಡಿಕೊಳ್ಳುವಂತೆ ಕರೆಯಿತ್ತರು.


ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ.ಕಾಂತೇಶ್ ಎಸ್ ಇವರು ಮಾತನಾಡಿ ವಾಣಿಜ್ಯ ವಿಭಾಗದ ಕಾರ್ಯ ಚಟುವಟಿಕೆಗಳು ವಿದ್ಯಾರ್ಥಿ ಗಳಲ್ಲಿ ಶೈಕ್ಷಣಿಕ ವರ್ಷದ ಬೆಳವಣಿಗೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. 2024-25ನೇ ಸಾಲಿನ ವಾಣಿಜ್ಯ ಸಂಘದ ಅಧ್ಯಕ್ಷರಾಗಿ ಧನ್ಯಶ್ರೀ ಹಾಗೂ ಕಾರ್ಯದರ್ಶಿಯಾಗಿ ಪ್ರಜ್ವಲ್ ಆರ್ ಸಿ ಮತ್ತು ಖಜಾಂಜಿಯಾಗಿ ಪ್ರತೀಕ್ ಬಿ ಇವರು ಆಯ್ಕೆಗೊಂಡರು. ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾತಿ ಪಿ , ಶ್ರಾವ್ಯ ಕೆ ಎಸ್, ದೀಪ್ತಿ ಪಿ, ಕಾವ್ಯಶ್ರೀ ಇವರು ಪ್ರಾರ್ಥಿಸಿದರು. ಹರ್ಷ ಪಿ ವಂದನಾರ್ಪಣೆಗೈದರು. ಶೃತಿಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here