ಉಪ್ಪಿನಂಗಡಿ: ಗ್ರಾಮ ಪಂಚಾಯತ್ ಲೆಕ್ಕಪತ್ರಗಳ ದಾಖಲೆ ಮತ್ತು 2023-24ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆಯ ಜಮಾಬಂಧಿ ಸಭೆ ಉಪ್ಪಿನಂಗಡಿ ಗ್ರಾ.ಪಂ. ನಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಕಾರ್ಯದರ್ಶಿ ಗೀತಾ ಬಿ. ಅವರು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರಲ್ಲದೆ, ಲೆಕ್ಕಪತ್ರಗಳ ದಾಖಲೆಗಳನ್ನು ನೀಡಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಅಬ್ದುರ್ರಶೀದ್ ಮಾತನಾಡಿ, ಜಮಾಬಂದಿ ಸಭೆಗೆ ಗ್ರಾ.ಪಂ. ಪಿಡಿಒ ಅವರು ಗೈರು ಹಾಜರಾದ ಬಗ್ಗೆ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಕಾರ್ಯದರ್ಶಿಯವರು ಅವರಿಗೆ ತಾಲೂಕು ಪಂಚಾಯತ್‌ನಲ್ಲಿ ಮೀಟಿಂಗ್ ಇದೆ. ಅಲ್ಲಿಗೆ ತೆರಳಿದ್ದಾರೆ ಎಂದರು. ಆಗ ಅಬ್ದುರ್ರಶೀದ್, ಮೀಟಿಂಗ್ ಇದ್ದರೆ ಅದೇ ದಿನ ಇಲ್ಲಿ ಜಮಾಬಂದಿ ಸಭೆಯನ್ನು ನಿಗದಿಪಡಿಸಿದ್ದು ಯಾಕೆ ಎಂದರು. ಅದಕ್ಕೆ ಗೀತಾ ಬಿ. ಅವರು ತಾಲೂಕು ಪಂಚಾಯತ್ ಮೀಟಿಂಗ್‌ನ ಬಗ್ಗೆ ನಿನ್ನೆ ಮಾಹಿತಿ ಬಂದಿದ್ದು, ಅದಕ್ಕಿಂತ ಮೊದಲೇ ಜಮಾಬಂದಿ ಸಭೆಯನ್ನು ಇಲ್ಲಿ ನಿಗದಿಪಡಿಸಲಾಗಿತ್ತು ಎಂದರು. ಹಾಗಾದರೆ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು ಎಂದು ಅಬ್ದುರ್ರಶೀದ್ ಮರು ಪ್ರಶ್ನಿಸಿದಾಗ ಅದು ನಾನೇ ಕೊಡುತ್ತೇನೆ ಎಂದರು. ಬಳಿಕ ಸಭೆ ಮುಂದುವರಿದು ವಿವಿಧ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಮಾಹಿತಿ ಕೇಳಿದರು. ಇದಕ್ಕೆ ಕಾರ್ಯದರ್ಶಿ ಗೀತಾ ಬಿ. ಅವರು ದಾಖಲೆ ಸಹಿತವಾಗಿ ಉತ್ತರ ನೀಡಿ, ಗ್ರಾಮಸ್ಥರ ಸಂಶಯ ಬಗೆಹರಿಸಿದರು.
ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ಘಟಕವಿದ್ದರೂ ನೆಡ್ಚಿಲ್ ಬಳಿಯ ಎಸ್ಸಿ ಕಾಲನಿ ಬಳಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ. ಇದರಿಂದ ಪರಿಸರವಿಡೀ ದುರ್ವಾಸನೆ ಬೀರುವಂತಾಗಿದೆಯಲ್ಲದೆ, ಕಾಡು ಹಂದಿ, ನಾಯಿಗಳು ಬಂದು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಮಾಡಿ ಹಾಕಿವೆ. ಇದರಿಂದ ಈ ಪ್ರದೇಶವಿಡೀ ಕಲುಷಿತಗೊಂಡಿದೆ ಎಂದು ಗ್ರಾಮಸ್ಥ ಲಕ್ಷ್ಮಣ ನೆಡ್ಚಿಲ್ ಆರೋಪಿಸಿದರು. ಇದಕ್ಕೆ ಪೂರಕವಾಗಿ ಗ್ರಾಮಸ್ಥ ಫಾರೂಕ್ ಜಿಂದಗಿ, ಅಬ್ದುಲ್ ಮಜೀದ್ ಮಾತನಾಡಿ, ತ್ಯಾಜ್ಯ ಘಟಕದ ಬಳಿಯೇ ನೇತ್ರಾವತಿ ನದಿಗೆ ತ್ಯಾಜ್ಯಗಳು ಸೇರುತ್ತವೆ. ಅಲ್ಲದೇ, ಕಲುಷಿತ ನೀರು ಕೂಡಾ ನದಿಗೆ ಹರಿಯುತ್ತಿದೆ. ಇದರಿಂದ ನಮ್ಮ ಜೀವನದಿಗಳು ಮಲೀನವಾಗುತ್ತಿವೆ ಎಂದು ಆರೋಪಿಸಿದರು. ಇದಕ್ಕುತ್ತರಿಸಿದ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳದ ಸಮಸ್ಯೆ ಇದೆ. ತ್ಯಾಜ್ಯ ವಿಲೇವಾರಿಗೆ ಜಾಗ ಹುಡುಕಿಕೊಡಲು ಕಂದಾಯ ಇಲಾಖಾಧಿಕಾರಿಗಳಿಗೆ ಹೇಳಿದ್ದೇವೆ. ನದಿಗೆ ಮಲಿನ ನೀರು ಹರಿಯುವುದನ್ನು ತಡೆಗಟ್ಟಲು ಬೃಹತ್ ಇಂಗುಗುಂಡಿ ನಿರ್ಮಿಸುವ ಯೋಜನೆಯೂ ಗ್ರಾ.ಪಂ. ಹಾಕಿಕೊಂಡಿದೆ ಎಂದರು.
ಜಮಾಬಂದಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಮಾತನಾಡಿ, ಜಮಾಬಂದಿ ಸಭೆಯಲ್ಲಿ ಗ್ರಾ.ಪಂ.ನಲ್ಲಿ ನಡೆದ ಕಾಮಗಾರಿಗಳ ಲೆಕ್ಕ ಪರಿಶೀಲನೆ, ದಾಖಲೆ ಪರಿಶೀಲನೆ ಮಾಡಲು ಗ್ರಾಮಸ್ಥರಿಗೆ ಮುಕ್ತ ಅವಕಾಶವಿದೆ. ಇದನ್ನು ಗ್ರಾಮಸ್ಥರು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರಲ್ಲದೆ, ತೆರಿಗೆ ವಸೂಲಾತಿಗೆ ಗ್ರಾ.ಪಂ. ವಿಶೇಷ ಅಭಿಯಾನ ರೂಪಿಸಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಉಷಾ ನಾಯ್ಕ, ಉಷಾ ಮುಳಿಯ, ವನಿತಾ ಆರ್ತಿಲ ಉಪಸ್ಥಿತರಿದ್ದರು. ಗ್ರಾ.ಪಂ. ಸಿಬ್ಬಂದಿ ಜ್ಯೋತಿ ಕಾಮಗಾರಿಗಳ ಪಟ್ಟಿ ಓದಿದರಲ್ಲದೆ, ಸ್ವಾಗತಿಸಿ, ವಂದಿಸಿದರು.