ಕೆಲವೊಮ್ಮೆ ಮನಸ್ಸಿಗೆ ಕಾಡಿದ್ದ ಅನೇಕ ವಿಚಾರಗಳು ಸುಪ್ತವಾಗಿದ್ದುಕೊಂಡೇ ಮನಸ್ಸಿನಾಳದಲ್ಲಿ ಮರೆಯಾಗುವ ನಿದರ್ಶನಗಳಿವೆ. ಆದರೆ ಅದನ್ನು ಮನಸ್ಸಿನಾಳದಿಂದ ಹೊರತೆಗೆದು ಅಕ್ಷರ ರೂಪದಲ್ಲಿ ಪೋಣಿಸಿ, ಪುಸ್ತಕ ರೂಪದಲ್ಲಿ ಓದುಗನಿಗೆ ಉಣಬಡಿಸಿದಾಗ ಅದು ಸಮಾಜದಲ್ಲಿ ಒಂದಷ್ಟು ಪರಿವರ್ತನೆಗಳನ್ನುಂಟುಮಾಡಲು ಸಾಧ್ಯವಾಗುತ್ತದೆ. ವಕೀಲಮಿತ್ರ ಹವ್ಯಾಸಿ ಸಾಹಿತಿ ಭಾಸ್ಕರ ಕೋಡಿಂಬಾಳರು ನಮ್ಮ ಸುತ್ತ ಮುತ್ತ ನಡೆಯುವ ವಿದ್ಯಮಾನಗಳನ್ನು ಅವಲೋಕಿಸಿ, ತನ್ನ ಇರುವಿಕೆಯನ್ನು ಜಾಗೃತವಾಗಿಸಿಕೊಂಡು ನವಿರಾದ ಹಾಸ್ಯ ಲೇಪನದೊಂದಿಗೆ ಹೊರತಂದಿರುವ ಪುಸ್ತಕ ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು. ಇದು ಓದುಗರನ್ನು ಸೆಳೆಯುವುದರಲ್ಲಿ ಖಂಡಿತಾ ಹಿಂದೆ ಬೀಳುವುದಿಲ್ಲ. ಈ ಪುಸ್ತಕವನ್ನು ಪ್ರಬಂಧ ಸಂಕಲನವೆನ್ನುವುದೋ, ಹರಟೆ ಅನ್ನುವುದೋ, ಹಾಸ್ಯ ಲೇಖನಗಳೆನ್ನುವುದೋ, ಎಂಬ ಜಿಜ್ಞಾಸೆ ನಿಮ್ಮನ್ನು ಕಾಡಬಹುದು. ಬದುಕಿನ ಸತ್ಯಗಳನ್ನು ನವಿರಾದ ಹಾಸ್ಯದೊಂದಿಗೆ ಬೆರೆಸಿ ವಿಡಂಬನಾತ್ಮಕವಾಗಿ ನಿರೂಪಿಸಿ, ಓದುಗನನ್ನು ಭವಿಷ್ಯದಲ್ಲಿ ಜಾಗೃತಾವಸ್ಥೆಯಲ್ಲಿ ವ್ಯವಹರಿಸುವಂತೆ ಮಾಡುವ ತಾಕತ್ತು ಈ ಪುಸ್ತಕಕ್ಕಿದೆ.
ಭಾಸ್ಕರ ಕೋಡಿಂಬಾಳರ ಈ ಹಿಂದಿನ ಸಂಕಲನ ಬುತ್ತಿಯೂಟ ಅವರ ಬಾಲ್ಯದ ನೆನಪುಗಳ ಸರಮಾಲೆಯಂತಿತ್ತು. ಓದುಗರ ಬದುಕಿಗೂ ಸಮೀಕರಣಗೊಳ್ಳುವ ಚಾತುರ್ಯ ಇವರ ಈ ಬರಹದಲ್ಲಿದೆ. ಆ ರೀತಿಯ ವೈಯಕ್ತಿಕ ಬದುಕಿನ ನೆನಪುಗಳನ್ನು ಲೇಖಕರು ಆ ಪುಸ್ತಕದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು ಎಂಬ ಈ ಪುಸ್ತಕದಲ್ಲಿ ನಮ್ಮ ನಿಮ್ಮ ನಡುವೆ ನಡೆವ ಘಟನೆಗಳನ್ನು, ಲೇಖಕರು ಚಿಂತನಾ ಶೈಲಿಯಲ್ಲಿ ವೀಕ್ಷಿಸಿ ಪ್ರಸ್ತುತ ಪಡಿಸಿದ್ದಾರೆ. ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರೂಪಿಸಿ, ಇದು ನಾನು ಕೂಡಾ ನೋಡಿ ಅನುಭವಿಸಿದ ಘಟನೆಯೇ ಆಗಿದೆ ಅನ್ನುವ ಯೋಚನೆ ನಮ್ಮಲ್ಲಿ ಮೂಡಿಸುವುದಲ್ಲದೇ, ಲೇಖಕರ ಹಾಸ್ಯಮಿಶ್ರಿತ ಶೈಲಿಯು ಪುಸ್ತಕವನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು ಅನ್ನುವ ಪುಸ್ತಕದ ಹೆಸರು ಬಹುಬೇಗ ನಮ್ಮನ್ನು ಆಕರ್ಷಿಸುತ್ತದೆ. ಕಣ್ಣಿಗೆ ಕಾಣದ್ದು ಲೇಖಕರ ಮನಸ್ಸನ್ನು ಹೇಗೆ ಕಾಡಿದ್ದು, ಅನ್ನುವ ಅಡ್ಡ ಪ್ರಶ್ನೆ ನಮ್ಮಲ್ಲಿ ಬರಬಹುದು. ನೋಡುಗ ತನ್ನ ಕಣ್ಣಿನಿಂದ ನೋಡುವುದು ಒಂದು ನೋಟವಾದರೆ, ಮನಸ್ಸಿನಿಂದ ನೋಡುವುದು ಬೇರೆಯೇ ಆಗಿರುತ್ತದೆ. ಲೇಖಕರು ಅವರ ಮನಸ್ಸಿನಿಂದ ನೋಡಿದ ಮತ್ತು ಅವರ ಮನಸ್ಸಿಗೆ ನಾಟಿದ ವಿಚಾರವನ್ನು ವಿಸ್ತರಿಸಿ ಬರೆದಿದ್ದಾರೆ. ಪ್ರತಿಯೊಂದು ಘಟನೆಯನ್ನು ನಾವು ಮನಸ್ಸಿನಿಂದ ಹೇಗೆ ನೋಡಬಹುದೆಂಬುದನ್ನು ಈ ಪುಸ್ತಕ ನಮಗೆ ಕಲಿಸಿಕೊಡುತ್ತದೆ. ಪುಸ್ತಕದ ಒಟ್ಟಂದದಲ್ಲಿ ಓದುಗನಿಗೆ ನಿಜ ಜೀವನದ ದರ್ಶನ ಮೂಡಿಸುವಲ್ಲಿ ಲೇಖಕ ಭಾಸ್ಕರ ಕೋಡಿಂಬಾಳ ಸಫಲರಾಗಿದ್ದಾರೆ. ಒಂದು ದೃಷ್ಟಿಯಲ್ಲಿ ನೋಡಿದರೆ ವೃತ್ತಿಯಲ್ಲಿ ವಕೀಲನಾಗಿರುವುದರಿಂದ, ಕಾನೂನು ಶಾಸವನ್ನು ಓದಿ ತಿಳಿದುಕೊಂಡಿರುವುದರಿಂದ, ನಾವು ನೋಡುವ ಅನುಭವಿಸುವ ಘಟನೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವುದಕ್ಕೆ ಭಾಸ್ಕರರಿಗೆ ಸಾಧ್ಯವಾಗಿರಬಹುದೆಂದು ನನ್ನ ಅನಿಸಿಕೆ. ಆದರೆ ಸುಲಲಿತವಾದ ಬರಹ, ಅವರ ನಿರಂತರ ಸಾಹಿತ್ಯಿಕ ಓದಿನಿಂದಾಗಿ ಅವರಿಗೆ ಬಂದಿರಬೇಕು. ಒಟ್ಟಿನಲ್ಲಿ ಭಾಸ್ಕರ ಕೋಡಿಂಬಾಳ ಒಬ್ಬ ಲೇಖಕರಾಗಿ ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು ಕೃತಿಯಿಂದ ಗೆದ್ದಿದ್ದಾರೆ ಅಂದರೆ ತಪ್ಪಾಗಲಾರದು.
ಕೋಡಿಂಬಾಳರ ಈ ಕೃತಿಗೆ ಮುನ್ನುಡಿ ಬರೆಯುವ ಭಾಗ್ಯ ನನಗೆ ಲಭಿಸಿತ್ತು. ಹಾಗಾಗಿ ಪ್ರಕಟನೆಗೆ ಪೂರ್ವಭಾವಿಯಾಗಿ ಪುಸ್ತಕವನ್ನು ಇಡಿಯಾಗಿ ಓದುವ ಅವಕಾಶ ನನ್ನದಾಗಿತ್ತು. ಪುಸ್ತಕ ಮುದ್ರಣಗೊಂಡು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಪಿ.ಕೃಷ್ಣ ಭಟ್ ರಿಂದ ಅನೇಕ ನ್ಯಾಯಾಽಶರುಗಳ, ನ್ಯಾಯವಾದಿಗಳ, ಸಾಹಿತಿಗಳ ಸಮೂಹದಲ್ಲಿ ಪ್ರಕಟಗೊಂಡ ನಂತರದಲ್ಲಿ, ವಿದ್ವಾಂಸರ ಮಾತುಗಳನ್ನು ಆಲಿಸಿದ ಮೇಲೆ ಮತ್ತೊಮ್ಮೆ ಈ ಪುಸ್ತಕದ ಲೇಖನಗಳನ್ನು ಬಿಡಿಬಿಡಿಯಾಗಿ ಓದಿದೆ. ಈ ಓದಿನ -ಲಶೃತಿಯೇ ಈ ಲೇಖನ. ಇದು ನನ್ನ ವಿಮರ್ಷೆಯಲ್ಲ. ನೀವು, ಇನ್ನಷ್ಟು ಓದುಗರು ಓದಲೇ ಬೇಕೆಂಬ ಹಂಬಲದಿಂದ ಬರೆಯುತ್ತಿದ್ದೇನೆ.
ಭಾಸ್ಕರರ ಈ ಪುಸ್ತಕದಲ್ಲಿ ಬರುವ ಹಲವು ಘಟನೆಗಳ ಪಾತ್ರಧಾರಿಗಳಾದ ಕೆದಿಲಾಯರು, ಸಾವಿನ ಮನೆಯ ಭಾಷಣಗಾರ, ಉತ್ರಂಬೆಯ ನೆಂಟರು, ಹೂ ಮಾರುವವ, ಕ್ಷೌರದಂಗಡಿಯ ಮಾಲೀಕ, ವಂಶೋದ್ಧಾರಕರ ನಿರೀಕ್ಷೆಯ ಕಿಟ್ಟಣ್ಣ, ರಾಂತೋಮಸ, ಮೆಲುಧ್ವನಿಯ ಅಜ್ಜ, ಇವರೆಲ್ಲಾ ನಮ್ಮ ಸುತ್ತಮುತ್ತಲು ಇದ್ದಾರೆ ಅನ್ನುವ ಭಾವ ನಮ್ಮನ್ನು ಕಾಡುತ್ತದೆ. ಸತ್ತ ನಾಯಿಯ ಕತೆ, ಮತ್ತೆ ಹುಟ್ಟಿ ಬಾರದ ಲೋಕಕ್ಕೆ ಹೋದ ಆತ್ಮೀಯ ಗೆಳೆಯ, ಕಾರಂತರ ಬಗ್ಗೆ ಕಾಳಜಿ, ಚಿಟ್ಟೆ ಹಕ್ಕಿಯ ನಂಬಿಕೆ, ಈ ಎಲ್ಲಾ ಘಟನೆಗಳ ವಿವರಣೆ ಮತ್ತೆ ಮತ್ತೆ ಮನಸ್ಸನ್ನು ಕಾಡುವಂತಿದೆ. ನಾವು ನೋಡಿದ, ನಾವು ಅನುಭವಿಸಿದ, ಜೀವನದಲ್ಲಿ ಆಗುವ ಹಲವಾರು ಘಟನೆಗಳು ನಮ್ಮ ಭವಿಷ್ಯಕ್ಕೆ ಹೇಗೆ ದಾರಿದೀಪವಾಗಬಹುದೆಂಬ ಚಿಂತನೆಯನ್ನು ಲೇಖಕರು ಈ ಪುಸ್ತಕದ ಮೂಲಕ ನಿರೂಪಿಸಿದ್ದಾರೆ.
ಈ ಪುಸ್ತಕದ ತುಂಬಾ ಲೇಖಕರು ಅಲ್ಲಲ್ಲಿ ತುಳು, ಅರೆಭಾಷೆ, ಮಲಯಾಳಿ ಭಾಷೆಗಳ ಪದಗಳನ್ನು ಬಳಸಿದ್ದಾರೆ. ಇವು ನಮಗೆ ಕಚಗುಳಿ ಇಟ್ಟಂತೆ ಭಾಸವಾಗುತ್ತದೆ. ಇದನ್ನು ಲೇಖಕರು ಉದ್ದೇಶಪೂರ್ವಕವಾಗಿ ಜೋಡಿಸಿದ್ದಾರೆ ಅನ್ನುವುದು ನನ್ನ ನಂಬಿಕೆ. ನಾವು ನಿಜಜೀವನದಲ್ಲಿ ಅನೇಕ ಕಡೆ, ಇಂಗ್ಲೀಷ್, ಹಿಂದಿ, ಸಂಸ್ಕೃತ ಪದಗಳನ್ನು ಸೇರಿಸಿಕೊಂಡು ನಮ್ಮ ಬರಹಗಳ, ಭಾಷಣಗಳ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದೇವೆಯೆಂಬ ಭ್ರಮೆಯಲ್ಲಿರುತ್ತೇವೆ. ಆದರೆ ಈ ಕೃತಿಯಲ್ಲಿ ಲೇಖಕರು ತುಳು, ಅರೆಭಾಷೆಗಳ ಶಬ್ದಗಳನ್ನೂ ಕೂಡಾ ಭಾಷಣ, ಲೇಖನಗಳಲ್ಲಿ ಸೇರಿಸಬಹುದು ಮತ್ತು ತನ್ಮೂಲಕ ಅದರ ಮೌಲ್ಯವನ್ನು ವೃದ್ಧಿಸಿಕೊಳ್ಳಬಹುದೆಂಬ ದಾರ್ಷ್ಟ್ಯವನ್ನು ಮೆರೆದಿದ್ದಾರೆ. ಮಾತ್ರವಲ್ಲ, ಈ ಪ್ರಯೋಗವನ್ನು ಉದ್ದೇಶಪೂರ್ವಕವಾಗಿ ಮಾಡಿ, ಇದರಲ್ಲಿ ಮುಜುಗರಪಡುವ ಸಂಗತಿಯೇ ಇಲ್ಲ ಅನ್ನುವುದನ್ನು ಸತ್ಯಗೊಳಿಸಿದ್ದಾರೆ. ಈ ರೀತಿಯಾಗಿ ಭಾಸ್ಕರ ಕೋಡಿಂಬಾಳರು ವೃತ್ತಿಯಲ್ಲಿ ವಕೀಲರಾಗಿದ್ದರೂ ಕೂಡಾ ಓರ್ವ ಯಶಸ್ವಿ ಬರಹಗಾರ ಅನ್ನುವುದು ಈ ಪುಸ್ತಕದ ಮೂಲಕ ವೇದ್ಯವಾಗುತ್ತದೆ.
ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು ಪುಸ್ತಕ ಒಂದು ಸಂಗ್ರಹಯೋಗ್ಯ ಪುಸ್ತಕ. ಇದು ವಿದ್ವಾಂಸರನ್ನು ಹಾಗೂ ಸಾಮಾನ್ಯ ಓದುಗರನ್ನೂ ಸುಲಭವಾಗಿ ಮುಟ್ಟುತ್ತದೆ. ಹೀಗೆ ಮನಸ್ಸಿಗೆ ಕಾಡುವ ಲೇಖನಗಳಿಂದ ಸಾರಸ್ವತ ಲೋಕಕ್ಕೆ ಯಶಸ್ವಿಯಾಗಿ ಕಾಲಿರಿಸಿದ ಭಾಸ್ಕರ ಕೋಡಿಂಬಾಳರಿಗೆ ಓರ್ವ ಸಾಮಾನ್ಯ ಓದುಗನಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಪುಸ್ತಕವನ್ನು ಉಡುಗೊರೆಯಾಗಿ ನೀಡುವಲ್ಲಿಯೂ ಅಡ್ಡಿಯಾಗುವುದಿಲ್ಲ. ಅಬಾಲವೃದ್ಧರಿಗಾಗಿ, ವಿದ್ವಾಂಸ ಸಾಮಾನ್ಯರಿಗಾಗಿ, ಪೋಣಿಸಿದ ಬರಹಗಳ ಗುಡಾಣವಿದು. ನಾನು ಈ ಪುಸ್ತಕವನ್ನು ಎರಡು ಸಲ ಓದಿ ಮುಗಿಸಿದ್ದೇನೆ. ಇನ್ನೊಮ್ಮೆ ಸಾವಕಾಶವಾಗಿ ಓದಬೇಕೆಂಬ ಹಂಬಲ ನನ್ನದು.
ಲೇಖಕ ಭಾಸ್ಕರ ಕೋಡಿಂಬಾಳ ಬಾಳಬೆಳಕು ಪ್ರಕಾಶನದ ಮೂಲಕ ಹೊರತಂದಿರುವ ಈ ಪುಸ್ತಕದ ಮುಖಬೆಲೆ 150/- ರೂಪಾಯಿ ಕಡಿಮೆಯಾಯಿತೇನೋ ಅನ್ನುವ ಶಂಕೆ ನನ್ನದು. ಪುಸ್ತಕಕ್ಕೆ ಬೆಲೆ ಕಟ್ಟುವಷ್ಟು ನಾನು ಬೆಳೆದಿಲ್ಲ. ಆದರೂ ಜೀವನದ ಮೌಲ್ಯಗಳನ್ನು ಸರಳ ಶಬ್ಧಗಳ ಮೂಲಕ ನಿರೂಪಿಸಿದ ಲೇಖಕ ಭಾಸ್ಕರ, ವಾಸ್ತವ ದೃಷ್ಟಿಯಲ್ಲಿ ಅರ್ಥಪೂರ್ಣ ಬೆನ್ನುಡಿ ಬರೆದು ಹರಸಿದ ಡಾ. ಎ.ಪಿ. ಭಟ್, ಅಂದವಾಗಿ ಮುದ್ರಿಸಿದ ಮಂಗಳೂರಿನ ಆಕೃತಿ ಪ್ರಿಂಟರ್ಸ್, ಅನುಭವೀ ಪುಟ ವಿನ್ಯಾಸಕಾರಿಣಿ ಶ್ರೀಮತಿ ಜಯಲಕ್ಷ್ಮಿ ಎಸ್. ಜೊಯಿಸ್, ಮುಖಪುಟ ಶಿಲ್ಪಿ ಜಗನ್ನಾಥ ಅರಿಯಡ್ಕ ಎಲ್ಲರೂ ಅಭಿನಂದನಾರ್ಹರೇ ಹೌದು! ಹೌದಹುದು!!!