ಪುತ್ತೂರು:ಬೆಂಕಿ ನಂದಿಸಲು ಸಹಾಯ ಮಾಡಲೆಂದು ಬಂದು ಚಿನ್ನಾಭರಣ ದೋಚಿದ್ದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ನಡೆಸಿದ ಬೆಳ್ತಂಗಡಿ ಜೆಎಂಎಫ್ ಸಿ ಕೋರ್ಟ್ ಆರೋಪಿಗೆ 1 ವರ್ಷ 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದೆ.
ಕಣಿಯೂರು ಗ್ರಾಮದ ಆನಂದ ಎಂಬವರ ಮನೆಗೆ 2022ರ ಮೇ 16ರಂದು ಬೆಂಕಿ ಬಿದ್ದಿತ್ತು.ಬೆಂಕಿ ನಂದಿಸಲು ಸಹಾಯ ಮಾಡಲೆಂದು ಬಂದಿದ್ದ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಶಾಂತಿಮೂಲೆ ನಿವಾಸಿ ಶಿವಪ್ರಸಾದ್(40ವ)ಎಂಬಾತ ಮನೆಯಲ್ಲಿದ್ದ ಚಿನ್ನಾಭರಣ ಕಳವುಗೈದಿದ್ದ ಎಂದು ಆರೋಪಿಸಲಾಗಿದೆ.ಮೇ 30ರಂದು ಮನೆ ಶುಚಿಗೊಳಿಸುವಾಗ, ಚಿನ್ನಾಭರಣ ಕಳವು ಬಗ್ಗೆ ತಿಳಿದು ಬಂದ ಬಳಿಕ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ, ಸುರತ್ಕಲ್‌ನ ಕೆನರಾ ಫೈನಾನ್ಸ್‌ನಲ್ಲಿ ಆತ ಅಡವಿಟ್ಟಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾಲಯ ಆರೋಪಿ ದೋಷಿ ಎಂದು ತೀರ್ಮಾನಿಸಿ ಐಪಿಸಿ 380 ಅಡಿಯಲ್ಲಿನ ಅಪರಾಧಕ್ಕಾಗಿ 1 ವರ್ಷ 3 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 2000 ರೂ. ದಂಡ ವಿಧಿಸಿದೆ.ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ 2 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯ, ದಂಡದ ಮೊತ್ತವನ್ನು ದೂರುದಾರರಿಗೆ ಪರಿಹಾರವಾಗಿ ನೀಡಲು ಸೂಚಿಸಿದೆ.ಬೆಳ್ತಂಗಡಿ ಜೆಎಂಎಫ್ ಸಿ ಹಿರಿಯ ಸಿವಿಲ್ ಜಡ್ಜ್ ಮನು ಬಿ.ಕೆ.ಅವರು ಈ ತೀರ್ಪು ನೀಡಿದ್ದು,ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದಿಸಿದ್ದರು.