@ಯೂಸುಫ್ ರೆಂಜಲಾಡಿ
ಪುತ್ತೂರು: ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಅದರೆಡೆಯಲ್ಲಿ ನಾವು ಮಾಡುವ ಸತ್ಕಾರ್ಯಗಳು, ಸಾಧನೆಗಳು ಮಾತ್ರ ಶಾಶ್ವತ ಎನ್ನುವ ಮಾತೊಂದಿದೆ. ಎಲ್ಲರೊಂದಿಗೆ ಆತ್ಮೀಯವಾಗಿದ್ದುಕೊಂಡು ಎಲ್ಲರ ಪ್ರೀತಿ ಸಂಪಾದಿಸುವುದು ಕೂಡಾ ದೊಡ್ಡ ಸಾಧನೆಯೇ, ಅಂತವರು ಸಾವಿನ ನಂತರವೂ ನೆನಪಲ್ಲಿ ಉಳಿಯುತ್ತಾರೆ ಎನ್ನುವುದಕ್ಕೆ ಸೆ.21ರಂದು ಪುರುಷರಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಹೋಳಿಗೆ ವ್ಯಾಪಾರಿ ಗಣೇಶ್ ಪ್ರಭು ಸಾಕ್ಷಿ.
ಗಣೇಶ್ ಪ್ರಭು ದೊಡ್ಡ ಸಾಧಕರೇನಲ್ಲ, ಎಲ್ಲರಂತೆ ಓರ್ವ ಸಾಮಾನ್ಯ ವ್ಯಕ್ತಿ, ಶ್ರಮಜೀವಿ, ಆದರೆ ಅವರ ವ್ಯಕ್ತಿತ್ವ, ಅವರು ಜನರೆಡೆಯಲ್ಲಿ ಬೆರೆಯುತ್ತಿದ್ದ ರೀತಿ ಅವರನ್ನು ಸಾವಿನ ನಂತರವೂ ನೆನಪಲ್ಲಿಡುವಂತೆ ಮಾಡಿದೆ. ಗಣೇಶ್ ಪ್ರಭು ಮೃತಪಟ್ಟಾಗ ಜಾತಿ, ಮತ, ಧರ್ಮ ಎನ್ನುವ ಬೇಧ ಭಾವವಿಲ್ಲದೇ ಎಲ್ಲರೂ ಕಂಬನಿ ಮಿಡಿದಿದ್ದಾರೆ. ದುಃಖತಪ್ತರಾಗಿದ್ದಾರೆ, ಒಳ್ಳೆಯ ವ್ಯಕ್ತಿಯೊಬ್ಬರು ನಮ್ಮಿಂದ ಮರೆಯಾದರಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅಸಂಖ್ಯಾತ ಜನರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅವರ ಬಗ್ಗೆ ಗುಣಗಾನ ಮಾಡಿದ್ದಾರೆ. ಅವರ ಬಗ್ಗೆ ಲೇಖನಗಳನ್ನು ಬರೆದು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಒಬ್ಬ ಹೋಳಿಗೆ ಲೈನ್ಸೇಲ್ ಮಾಡುವ ಗಣೇಶ್ ಪ್ರಭು ತನ್ನ ಪ್ರಾಮಾಣಿಕ ವ್ಯಾಪಾರ, ಗುಣನಡತೆ ಮತ್ತು ಸ್ವಭಾವದ ಮೂಲಕ ಜನರ ಮನಸ್ಸು ಗೆದ್ದಿದ್ದರು. ‘ಹೋಳಿಗೆ ಗಣೇಶ್’ ಎಂದರೆ ಪುತ್ತೂರಿನಲ್ಲಿ ಎಲ್ಲರಿಗೂ ಪರಿಚಿತ ಮುಖ, ಕಚೇರಿ, ಅಂಗಡಿ, ಮಳಿಗೆಗಳು, ಶಾಲೆ… ಹೀಗೇ ಎಲ್ಲ ಕಡೆಗಳಿಗೂ ಹೋಳಿಗೆ ಮಾರಾಟ ಮಾಡಿಕೊಂಡು ಹೋಗುತ್ತಿದ್ದ ಗಣೇಶ್ ಪ್ರಭು ಶುಕ್ರವಾರದ ದಿನ ಮದ್ಯಾಹ್ನ ಯಾವುದಾದರೊಂದು ಜುಮಾ ಮಸೀದಿ ಎದುರು ಹೊಳಿಗೆ ವ್ಯಾಪಾರ ಮಾಡುತ್ತಿದ್ದರು. ಇವರಿಂದ ಹಲವರು ಹೋಳಿಗೆ ಖರೀದಿಸುತ್ತಿದ್ದರು, ವ್ಯಾಪಾರ ಮಾಡುವ ಉತ್ತಮ ವಾಕ್ಚಾತುರ್ಯವನ್ನು ಕೂಡಾ ಅವರು ಹೊಂದಿದ್ದರು.
ಪುರುಷರಕಟ್ಟೆಯ ಉದಯಭಾಗ್ಯ ಹೋಳಿಗೆ ಮನೆಯಿಂದ ಕಳೆದ 25 ವರ್ಷಗಳಿಂದ ಮೇಲ್ಪಟ್ಟು ಹೋಳಿಗೆ ಖರೀದಿಸಿ ತಾಲೂಕಿನಾದ್ಯಂತ ತಮ್ಮ ದ್ವಿಚಕ್ರ ವಾಹನದ ಮೂಲಕ ಹೋಗಿ ಹೋಳಿಗೆ ಮಾರಾಟ ಮಾಡುತ್ತಿದ್ದ ಗಣೇಶ್ ಪ್ರಭು ಅವರು ದಿನದಲ್ಲಿ ಕನಿಷ್ಠ 1೦೦೦ದಿಂದ 13೦೦ ಹೋಳಿಗೆ ಮಾರಾಟ ಮಾಡುತ್ತಿದ್ದರು. ತಮ್ಮ ಮನೆಯಾದ ಬಂಟ್ವಾಳ ತಾಲೂಕಿನ ಪಂಜಳದಿಂದ ಪ್ರತಿನಿತ್ಯ ಪುತ್ತೂರಿಗೆ ಬಂದು ವ್ಯಾಪಾರದಲ್ಲಿ ತೊಡಗಿದ್ದ ಇವರು ಶ್ರಮ ಜೀವಿಯಾಗಿದ್ದರು. ಇವರ ಅಗಲುವಿಕೆಗೆ ಸಾವಿರಾರು ಮಂದಿ ಸಂತಾಪ ಸೂಚಿಸಿದ್ದಾರೆ, ಒಳ್ಳೆಯವರಿಗೆ ಆಯಸ್ಸು ಕಡಿಮೆ ಎಂದು ಹಲವರು ಬರೆದುಕೊಂಡಿದ್ದಾರೆ. ಒಬ್ಬ ಸಜ್ಜನ, ಎಲ್ಲರ ಪ್ರೀತಿ ಸಂಪಾದಿಸಿದ ಪ್ರಾಮಾಣಿಕ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪುರುಷರಕಟ್ಟೆ ಹೋಳಿಗೆ ಮನೆಯ ಮಾಲಕ ನವೀನ್ ಪ್ರಭು ಬೇಸರ ವ್ಯಕ್ತಪಡಿಸಿದ್ದಾರೆ. ಹೋಳಿಗೆ ಮಾರಾಟದ ಮೂಲಕ ಎಲ್ಲರ ಬಾಯಿ ಸಿಹಿ ಮಾಡುತ್ತಿದ್ದ ಗಣೇಶ್ ಪ್ರಭು ಅವರ ಜೀವನ ಕೂಡಾ ಸಿಹಿಯಾಗಿತ್ತು, ಆದರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು.