ರೂ. 2.27ಲಕ್ಷ ಲಾಭ, ಶೇ.6 ಡಿವಿಡೆಂಡ್, ಲೀ.ಗೆ 31ಪೈಸೆ ಬೋನಸ್
ಪುಣಚ: ಪುಣಚ ಹಾಲು ಉತ್ಪಾದಕರ ಸಹಕಾರಿ ಸಂಘದ 2023-2024ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಪುಣಚ ಪ್ರಾ.ವ್ಯ.ಸೇ.ಸ.ಸಂಘದ ಸಭಾಭವನದಲ್ಲಿ ಸೆ.23ರಂದು ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಶ್ವನಾಥ ರೈ ಮಾತನಾಡಿ ಸಂಘವು ವರ್ಷಾಂತ್ಯಕ್ಕೆ 337 ಸದಸ್ಯರನ್ನು ಹೊಂದಿದ್ದು ರೂ. 1,02,300 ಪಾಲು ಬಂಡವಾಳ ಇರುತ್ತದೆ. ರೈತರಿಂದ 3,52,098.07 ಲೀ.ಹಾಲು ಖರೀದಿಸಿ 3,38,322.0ಲೀ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 15416.1 ಲೀ.ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ ಸಂಘವು ರೂ.9,92,829.51 ವ್ಯವಹಾರ ಲಾಭ ಬಂದಿದೆ ಎಂದರು. ಪಶು ಅಹಾರ, ಲವಣ ಮಿಶ್ರಣ ಮಾರಾಟ ಹಾಗೂ ಇತರ ಮೂಲದಿಂದ ರೂ. 97350 ವ್ಯವಹಾರ ಲಾಭ ಬಂದಿದೆ. 2023-24ನೇ ಸಾಲಿನಲ್ಲಿ ಸಂಘ ರೂ. 2,27,795.69 ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.6 ಡಿವಿಡೆಂಟ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀ.ಗೆ 31ಪೈಸೆ ಬೋನಸ್ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು. ಸಂಘ ಕಳೆದ ಸಾಲಿನಲ್ಲಿ ತಾಲೂಕುವಾರು ಉತ್ತಮ ಸಂಘ ಪ್ರಶಸ್ತಿ ಪಡೆದಿದೆ. ಲೆಕ್ಕ ಪರಿಶೋಧನಾ ವರ್ಗೀಕರಣದಲ್ಲಿ “ಎ” ಶ್ರೇಣಿ ಪಡೆದುಕೊಂಡಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಗೋಪಾಲ 2023-24ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ವಾಚಿಸಿದರು. 2023-24ನೇ ಸಾಲಿನ ಲಾಭ ವಿಲೇವಾರಿ ತಿಳಿಸಿ ಅಂದಾಜು ಆಯವ್ಯಕ್ಕಿಂತ ಮೀರಿದ ಖರ್ಚುಗಳ ಬಗ್ಗೆ ತಿಳಿಸಿದರು. 2024-25ನೇ ಸಾಲಿನ ಯೋಜನೆಗಳನ್ನು ತಿಳಿಸಿದರು. ಮುಂದಿನ ಅಂದಾಜು ಆಯವ್ಯಯ ತಿಳಿಸಿದರು. ದ.ಕ.ಹಾಲು ಒಕ್ಕೂಟದ ಇಲಾಖಾ ವಿಸ್ತರಣಾಧಿಕಾರಿ ವಿದ್ಯಾ ಲೆಕ್ಕ ಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿ ಮಂಡಿಸಿದರು.
ದ.ಕ. ಹಾಲು ಒಕ್ಕೂಟದ ತಾಲೂಕು ಉಪ ವ್ಯವಸ್ಥಾಪಕ ಕೇಶವರವರು ಮಾತನಾಡಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಾದ ವಿಶ್ವನಾಥ ರೈ, ಸುರೇಶ ಗೌಡ, ಜಯಂತ ನಾಯಕ್, ಉದಯಕುಮಾರ್ ರೈ, ಜಗನ್ನಾಥ ರೈ, ಪ್ರವೀಣ ಪ್ರಭು, ಕೃಷ್ಣ ಭಟ್ ಸಲಹೆ ಸೂಚನೆಗಳನ್ನು ನೀಡಿದರು.
ಸನ್ಮಾನ:
ಸಂಘದಲ್ಲಿ ಸುಮಾರು 37 ವರ್ಷಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಗೋಪಾಲರವರನ್ನು ಶಲ್ಯ, ಹಾರ, ಪೇಟ, ದೀಪ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಸುರೇಶ ಗೌಡ ಓಟೆತ್ತಟ್ಟ (ಪ್ರಥಮ), ಸನತ್ ಕುಮಾರ್ ಗೌರಿಮೂಲೆ (ದ್ವಿತೀಯ) ಹಾಗೂ ಅತೀ ಹೆಚ್ಚು ಗುಣಮಟ್ಟದ ಫ್ಯಾಟ್ ಇರುವ ಹಾಲನ್ನು ಪೂರೈಸಿದ ಜಗನ್ನಾಥ ರೈ ಪರಿಯಾಲುರವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ನಿರ್ದೇಶಕರುಗಳಾದ ಸುರೇಶ್ ಕುಮಾರ್, ಪುಂಡರೀಕ ಎ, ಮದನಪ್ಪ ರೈ ಬಿ, ದಿವಾಕರ ಗೌಡ, ರವೀಂದ್ರ ಪೂಜಾರಿ ದಲ್ಲಾಜೆ, ದಿನೇಶ್ ಶೆಟ್ಟಿ ನಡುಮನೆ, ಸೀತಾ, ಸೇಸ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಭುವನೇಶ್ವರಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ವಿಶ್ವನಾಥ ರೈ ಪಿ.ಸ್ವಾಗತಿಸಿ ಉಪಾಧ್ಯಕ್ಷ ವಾಸುದೇವ ಕಾರಂತ ವಂದಿಸಿದರು. ಸಿಬ್ಬಂದಿಗಳಾದ ಹಾಲು ಪರೀಕ್ಷಕ ದೇವಪ್ಪ ನಾಯ್ಕ, ಸಹಾಯಕಿರಾದ ಶಾರದ, ಭುವನೇಶ್ವರಿ ಸಹಕರಿಸಿದರು.
ಸಂಘವು ಕಳೆದ ಬಾರಿಯ ವಾರ್ಷಿಕ ಸಭೆಯ ನಿರ್ಣಯದಂತೆ ಸಂಘದ ಕಟ್ಟಡ ದುರಸ್ತಿ, ಸಿಸಿ ಕ್ಯಾಮೆರಾ, ಗೋಪೂಜೆ, ಹೊಸ ನಾಮ ಫಲಕ, ಜಾನುವಾರಿಗಳಿಗೆ ವಿಮೆ, ಕಾಲು ಬಾಯಿ ಲಸಿಕೆ, ವಿಮೆ ಮೊತ್ತ ಹೀಗೆ ಹಲವು ಅಭಿವೃದ್ಧಿ ಹಾಗೂ ಸೌಲಭ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದು ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ದೊಂದಿಗೆ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಿದ್ದೇವೆ.
-ಪಿ. ವಿಶ್ವನಾಥ ರೈ ಅಧ್ಯಕ್ಷರು