ಪುತ್ತೂರು: ತಾಲೂಕಿಗೊಂದು ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿ ಜೊತೆ ಮಾತುಕತೆ ನಡೆಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಇಲಾಖೆ ಆಯುಕ್ತರಾದ ಚೇತನ್ ಅವರ ಜೊತೆ ಸುದೀರ್ಘ ಮತುಕತೆ ನಡೆಸಿದ ಶಾಸಕರು, ಪುತ್ತೂರು ಬೆಳೆಯುತ್ತಿರುವ ಪಟ್ಟಣವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೆಂದ್ರವಾಗಿ ರೂಪುಗೊಳ್ಳುವ ಸಾಧ್ಯತೆ ಇರುವ ಕಾರಣ ಪುತ್ತೂರಿನ ಕ್ರೀಡಾ ಚಟುವಟಿಕೆಗೆ ಸೂಕ್ತ ಕ್ರೀಡಾಂಗಣದ ಅಗತ್ಯತೆ ಇದೆ. ಈಗ ಇರುವ ತಾಲೂಕು ಕ್ರೀಡಾಂಗಣದಲ್ಲಿ ಸ್ಥಳವಕಾಶದ ಕೊರತೆ ಇದ್ದು ಇಲ್ಲಿ ಮೈದಾನ ಮಾತ್ರ ಇರುತ್ತದೆ. ಮುಂದೆ ನಿರ್ಮಾಣವಾಗಲಿರುವ ಕ್ರೀಡಾಂಗಣದಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೂ ಅವಕಾಶ ನೀಡುವುದರ ಜೊತೆ ಸರ್ವ ರೀತಿಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ. ಕ್ರೀಡಾಂಗಣಕ್ಕೆ ಜಾಗ ಮಂಜೂರು ಮಾಡುವುದರ ಜೊತೆಗೆ ಶೀಘ್ರವೇ ಅನುದಾನವನ್ನು ಮಂಜೂರು ಮಾಡುವಂತೆ ಆಯುಕ್ತರ ಜೊತೆ ಶಾಸಕರು ಮಾತುಕತೆ ನಡೆಸಿದರು.
ಪುತ್ತೂರು ತಾಲೂಕು ಮಟ್ಟದ ಸುಸಜ್ಜಿತ ಕ್ರೀಡಾಂಗಣದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಬುಧವಾರ ಆಯುಕ್ತರನ್ನು ಭೇಟಿಯಾಗಿ ಈ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣದ ನಿರ್ಮಾಣವಾಗಲಿದೆ ಎಂಬ ಪೂರ್ಣ ನಂಬಿಕೆ ಇದೆ.
– ಅಶೋಕ್ ರೈ, ಶಾಸಕರು ಪುತ್ತೂರು