68,869 ರೂ.ನಿವ್ವಳ ಲಾಭ; ಶೇ.8 ಡಿವಿಡೆಂಡ್, ಪ್ರತೀ ಲೀ.ಹಾಲಿಗೆ 14 ಪೈಸೆ ಬೋನಸ್ ಘೋಷಣೆ
ರಾಮಕುಂಜ: ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘ, ರಾಮಕುಂಜ ಇದರ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.24ರಂದು ಸಂಘದ ಆವರಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಪೂವಪ್ಪ ಗೌಡ ಯಸ್.,ಮಾತನಾಡಿ, ವರದಿ ಸಾಲಿನಲ್ಲಿ 2,22,793.04 ಲೀ.ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ 2,10,733.5 ಲೀ.ಹಾಲು ಮಾರಾಟ ಮಾಡಲಾಗಿದೆ. 12,059.5 ಲೀ.ಹಾಲು ಸ್ಥಳೀಯವಾಗಿ ಮಾರಾಟವಾಗಿದೆ. ಮಾದರಿ ಹಾಲು, ಪಶು ಆಹಾರ, ಲವಣಮಿಶ್ರಣ, ವರ್ಯ ನಳಿಕೆ, ಕರುಗಳ ಪಶು ಆಹಾರ ಮಾರಾಟದಿಂದ ಸಂಘಕ್ಕೆ 68,869.28 ರೂ. ನಿವ್ವಳ ಲಾಭಬಂದಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.8 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ 14 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಸಂಘದ ಸದಸ್ಯರು ಸದುಪಯೋಗ ಪಡೆದುಕೊಂಡು ಹಾಲು ಉತ್ಪಾದನೆ ಹೆಚ್ಚಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸದಸ್ಯರಿಗೆ ಇನ್ನಷ್ಟೂ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಸೋಮಶೇಖರ ಶೆಟ್ಟಿ, ನಿರ್ದೇಶಕರಾದ ಪೂವಪ್ಪ ಗೌಡ ಕೊಂಡ್ಯಾಡಿ, ಪದ್ಮಯ ಪೂಜಾರಿ, ಬೆಳಿಯಪ್ಪ ಗೌಡ ಬಿ.,ಬಿ.ಕೆ. ಶ್ಯಾಮ ಭಟ್, ಕೆ.ಬಿ.ಕೊರಗಪ್ಪ ಗೌಡ, ಕಮಲ ಬಿ., ಎ.ಅಬೂಬಕ್ಕರ್, ಎಸ್. ಲೋಕಯ್ಯ ಗೌಡ, ಪ್ರಭಾವತಿ, ಶೀಲಾವತಿ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೇಶವ ಬಿ., ವರದಿ ವಾಚಿಸಿದರು. ಸೋಮಶೇಖರ ಶೆಟ್ಟಿ ಸ್ವಾಗತಿಸಿದರು. ಹಾಲು ಪರೀಕ್ಷಕ ಉಮೇಶ್ ಬಿ., ಸಹಕರಿಸಿದರು. ಶೀಲಾವತಿ ಕೆ. ಪ್ರಾರ್ಥಿಸಿದರು.
ದರ ಹೆಚ್ಚಳಕ್ಕೆ ಮನವಿ:
ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರದಲ್ಲಿ ಹೆಚ್ಚಳ ಮಾಡುವಂತೆ ಒಕ್ಕೂಟಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಒಕ್ಕೂಟದಿಂದ ಉತ್ತಮ ಗುಣಮಟ್ಟದ ಪಶುಆಹಾರ ನೀಡುವಂತೆಯೂ ಸದಸ್ಯರು ಒತ್ತಾಯ ಮಾಡಿದರು. 2023-24ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ನಿರ್ದೇಶಕ ಬೆಳಿಯಪ್ಪ ಗೌಡ ಬುಡಲೂರು (ಪ್ರಥಮ), ಸದಸ್ಯರಾದ ಸಂಜೀವ ಗೌಡ (ದ್ವಿತೀಯ) ಹಾಗೂ ಬಾಲಕೃಷ್ಣ ಗೌಡ ಪಟ್ಟೆ (ತೃತೀಯ)ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಉಳಿದಂತೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.