ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಾನಿಗಳ ಸಹಕಾರದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪ್ರತಿಷ್ಠಿತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೀಡಲಾಗುವುದು.
ಕಳೆದ 11 ವರ್ಷಗಳಿಂದ ಕನ್ನಡ ಎಂ.ಎ ಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ಪಡೆದಿರುವುದು ಮಾತ್ರವಲ್ಲದೇ 2019-20ನೇ ಸಾಲಿನಲ್ಲಿ ಹಾಗೂ 2022-23ನೇ ಸಾಲಿನಲ್ಲಿ ಕನ್ನಡ ಎಂ ಎ ಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ರ‍್ಯಾಂಕ್ ಅನ್ನು ಪಡೆದ ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ.
ಕನ್ನಡ ಭಾಷಾ ಕಲಿಕೆಗಾಗಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಈ ಮಹೋನ್ನತ ಯೋಜನೆಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಾ ಇದ್ದು, ಇದೀಗ ಮೂರನೇ ವರ್ಷದ ಯೋಜನೆ ಇದಾಗಿದೆ. ಆಸಕ್ತ ವಿದ್ಯಾರ್ಥಿಗಳು ಪದವಿಯಲ್ಲಿ ಐಚ್ಛಿಕ ಕನ್ನಡ ಆಗಿರಬೇಕು. ಅಥವಾ ಯಾವುದೇ ಪದವಿ ಅಂದರೆ ಬಿ.ಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಎಸ್‌ಡಬ್ಲ್ಯೂ, ಬಿಸಿಎ ಕನ್ನಡ ಭಾಷಾ ವಿಷಯ ತೆಗೆದುಕೊಂಡಿರಬೇಕು. ಕನ್ನಡ ಭಾಷಾ ವಿಷಯದಲ್ಲಿ 60% ಅಂಕ ಇರಬೇಕು. ಐಚ್ಛಿಕ ಕನ್ನಡ ತೆಗೆದುಕೊಂಡವರು ಉತ್ತೀರ್ಣರಾಗಿದ್ದರೆ ಸಾಕು. ಇಂತಹ ವಿದ್ಯಾರ್ಥಿಗಳಿಗೆ ಕನ್ನಡ ಎಂ.ಎ ಮಾಡಲು ಅವಕಾಶವಿದೆ. ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ನೋಂದಣಿ ಮಾಡಿದವರಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಈ ಯೋಜನೆಯ ಸಂಯೋಜಕರ 9480923112 ಅಥವಾ 9481918448 ಈ ದೂರವಾಣಿ ಸಂಖ್ಯೆಯನ್ನು ಅ.7ರ ಮೊದಲಾಗಿ ಸಂಪರ್ಕಿಸಬಹುದಾಗಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.