ಮಕ್ಕಳನ್ನು ಸಮಾಜದ ಪ್ರಜ್ಞಾವಂತ ನಾಗರಿಕರನ್ನಾಗಿ ನಿರ್ಮಿಸಿ-ಬಿ.ಎಂ ಭಾರತಿ
ಪುತ್ತೂರು: ಕೆಲವು ಮಕ್ಕಳಿಗೆ ಮನೆಯಲ್ಲಿನ ಭಿನ್ನ ಪರಿಸ್ಥಿತಿ ಪರಿಣಾಮ ಬೀರಿ ಶಾಲೆಯಲ್ಲಿ ಸಂತೋಷದಲ್ಲಿರದೆ ಗೊಂದಲದಲ್ಲಿ ಇರುವಂತೆ ಕಾಣುತ್ತಾರೆ. ಹಲವು ಮಕ್ಕಳು ಹಲವು ಸಮಸ್ಯೆಗಳನ್ನು ಹೊಂದಿದ್ದು ಶಿಕ್ಷಕರು ಅಂತಹ ಮಕ್ಕಳ ಪರಿಸ್ಥಿತಿಯನ್ನು ಗುರುತಿಸಿ ಅವರ ಮನಸ್ಸಿಗೆ ತೃಪ್ತಿಯಾಗುವ ರೀತಿಯಲ್ಲಿ ಪರಿಹಾರ ಕಂಡು ಹುಡುಕಬೇಕಾಗುತ್ತದೆ. ಮಕ್ಕಳನ್ನು ಮುಂದಿನ ಸಮಾಜದ ಪ್ರಜ್ಞಾವಂತ ನಾಗರಿಕರನ್ನಾಗಿ ನಿರ್ಮಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಲಯನ್ಸ್ ಇಂದು ನೀಡಿದ ಕಾರ್ಯಾಗಾರ ವಿದ್ಯಾರ್ಥಿಗಳ ಮನಸ್ಸು ಅರಿಯುವಲ್ಲಿ ಪ್ರೇರಣೆದಾಯಕವಾಗಬಹುದು ಎಂದು ಲಯನ್ಸ್ ಜಿಲ್ಲೆ 317ಡಿ ಇದರ ಜಿಲ್ಲಾ ಗವರ್ನರ್ ಬಿ.ಎಂ ಭಾರತಿರವರು ಹೇಳಿದರು.
ಅಂತರ್ರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ ಇದರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಆಶ್ರಯದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.2-3 ರಂದು ತಾಲೂಕಿನ ವಿವಿಧ ಶಾಲೆಯ ಶಿಕ್ಷಕರಿಗೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ತರಬೇತುಗೊಳಿಸುವ ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸ್ವ-ಭರವಸೆಯನ್ನು ಹೆಚ್ಚಿಸಬೇಕು-ಕವಿತಾ ಎಸ್.ಶಾಸ್ತ್ರಿ:
ಲಯನ್ಸ್ ಕ್ವೆಸ್ಟ್ ಇದರ ಸೀನಿಯರ್ ತರಬೇತುದಾರೆ ಕವಿತಾ ಎಸ್.ಶಾಸ್ತ್ರಿ ಮಾತನಾಡಿ, ಮಕ್ಕಳಲ್ಲಿ ಸ್ವ-ಭರವಸೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆಯು ಹಮ್ಮಿಕೊಂಡ ಈ ಕಾರ್ಯಾಗಾರವು ಶಿಕ್ಷಕರಿಗೆ ಆಶಾದಾಯಕವಾಗಿದೆ. ಪುತ್ತೂರು ಲಯನ್ಸ್ ಕ್ಲಬ್ಗಳು ಉತ್ತಮ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ. ಲಯನ್ಸ್ ಕ್ಲಬ್ಗಳು ಒಂದು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ಸ್ಫೂರ್ತಿ ತುಂಬಿಸುವ ಕಾರ್ಯ ಮಾಡಬೇಕು ಎಂದರು.
ಕಾರ್ಯಾಗಾರವು ಶಿಕ್ಷಕರಿಗೆ ಫುಲ್ ಎನರ್ಜಿಯನ್ನು ತಂದು ಕೊಟ್ಟಿದೆ-ಕೆ.ರತ್ನ ಚೇರ್ಮನ್ನ;
ಲಯನ್ಸ್ ಕ್ವೆಸ್ಟ್ ಇದರ ಪ್ರಾಯೋಜಕತ್ವ ವಹಿಸಿದ ಲಯನ್ಸ್ ಜಿಲ್ಲಾ ಕೋ-ಆರ್ಡಿನೇಟರ್ ಕೆ.ರತ್ನ ಚೇರ್ಮನ್ನ ಮಾತನಾಡಿ, ನಮ್ಮಲ್ಲಿ ಸಕಾರಾತ್ಮಕ ಗುಣಗಳು ಹಾಗೂ ಸಾಮಾಜಿಕ ಬದ್ಧತೆ ಇದ್ದಲ್ಲಿ ಆಗ ಜೀವನವು ಯಶಸ್ವಿ ಪಥದಲ್ಲಿ ಸಾಗುತ್ತದೆ. ಈ ನಿಟ್ಟಿನಲ್ಲಿ ಇಂದು ನಡೆದ ಕಾರ್ಯಾಗಾರವು ಶಿಕ್ಷಕರಿಗೆ ಫುಲ್ ಎನರ್ಜಿಯನ್ನು ತಂದು ಕೊಟ್ಟಿದೆ. ಈ ಕಾರ್ಯಾಗಾರದಲ್ಲಿ ಸಿಕ್ಕಿದ ಯಶಸ್ಸನ್ನು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಿದಾಗ ಅದುವೇ ನೀವು ನೀಡುವ ಗುರುದಕ್ಷಿಣೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಜಂಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಾವು ಹೇಮನಾಥ ಶೆಟ್ಟಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ರಮೇಶ್ಚಂದ್ರ ನಾಯಕ್ರವರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಪುತ್ತೂರು ಕಾವು ನಿಕಟಪೂರ್ವ ಕಾರ್ಯದರ್ಶಿ ದೇರಣ್ಣ ರೈ ಪ್ರಾರ್ಥಿಸಿದರು. ಕ್ಲಬ್ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಧ್ವಜ ವಂದನೆ ನೆರವೇರಿಸಿದರು. ಕ್ಲಬ್ ಅಧ್ಯಕ್ಷ ಜಗನ್ನಾಥ್ ರೈ ಗುತ್ತು ಸ್ವಾಗತಿಸಿದರು. ಶಿಕ್ಷಕಿಯರಾದ ವಿವೇಕಾನಂದ ಆಂಗ್ಲ ಮಾಧ್ಯಮದ ಪದ್ಮಲಕ್ಷ್ಮೀ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ರೀನಾ ರೆಬೆಲ್ಲೋ, ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಪೂಜಾರವರು ಕಾರ್ಯಾಗಾರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಲಯನ್ಸ್ ವಲಯ ನಾಲ್ಕರ ಪ್ರಾಂತ್ಯ ಅಧ್ಯಕ್ಷ ಪಾವನರಾಮ್ರವರು ಜಿಲ್ಲಾ ಗವರ್ನರ್ರವರನ್ನು ಪರಿಚಯಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಕಾವು, ಲಯನ್ಸ್ ಆಲಂಕಾರು, ದುರ್ಗಾಂಬಾ, ಲಯನ್ಸ್ ಪಾಣಾಜೆ, ಲಯನ್ಸ್ ಕ್ರೌನ್, ಲಯನ್ಸ್ ಪುತ್ತೂರ್ದ ಮುತ್ತು ಇದರ ಸದಸ್ಯರು ಭಾಗವಹಿಸಿದ್ದರು.
34 ಶಿಕ್ಷಕರು ಭಾಗಿ..
ಲಯನ್ಸ್ ಕ್ಲಬ್ ಪುತ್ತೂರು ಕಾವು ಹಮ್ಮಿಕೊಂಡ ಈ ಎರಡು ದಿನದ ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ 34 ಮಂದಿ ಶಿಕ್ಷಕರು ಭಾಗವಹಿಸಿದ್ದು ಈ ಶಿಕ್ಷಕರಿಗೆ ಜಿಲ್ಲಾ ಗವರ್ನರ್ ಬಿ.ಎಂ ಭಾರತಿರವರು ಪ್ರಮಾಣಪತ್ರ ವಿತರಿಸಿದರು.
ಸನ್ಮಾನ..
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾವು ವತಿಯಿಂದ ಜಿಲ್ಲಾ ಗವರ್ನರ್ ಬಿ.ಎಂ ಭಾರತಿ, ಲಯನ್ಸ್ ಕ್ವೆಸ್ಟ್ ಇದರ ಸೀನಿಯರ್ ತರಬೇತುದಾರೆ ಪಿಡಿಜಿ ಕವಿತಾ ಎಸ್.ಶಾಸ್ತ್ರಿ, ಸಹ ಸಂಪನ್ಮೂಲ ವ್ಯಕ್ತಿಗಳಾದ ಲಲನಾ ಶೆಣೈ, ಪೂಜಾ ಉಪಾಧ್ಯಾಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಸತೀಶ್ ಕುಮಾರ್ ರೈಯವರನ್ನು ಗುರುತಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಉದ್ಘಾಟನೆ..
ಅ.2ರಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಲಯನ್ಸ್ ಕ್ವೆಸ್ಟ್ ಇದರ ಸೀನಿಯರ್ ತರಬೇತುದಾರೆ ಪಿಡಿಜಿ ಕವಿತಾ ಎಸ್.ಶಾಸ್ತ್ರಿ, ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಡಾ.ಎಂ ಶಿವಪ್ರಕಾಶ್, ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ವೆಸ್ಟ್ ಇದರ ಜಿಲ್ಲಾ ಕೋ-ಆರ್ಡಿನೇಟರ್ ಕೆ.ರತ್ನ ಚೇರ್ಮನ್ನರವರು ವಹಿಸಿದ್ದರು. ಲಯನ್ಸ್ ವಲಯ ನಾಲ್ಕರ ಪ್ರಾಂತ್ಯ ಅಧ್ಯಕ್ಷ ಪಾವನರಾಮ್, ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ ರೈ ಗುತ್ತು, ಕಾರ್ಯದರ್ಶಿ ದೇವಿಶ್ ರೈ, ಕೋಶಾಧಿಕಾರಿ ಇಬ್ರಾಹಿಂ ಹಾಜಿ, ಸಹ ಸಂಪನ್ಮೂಲ ವ್ಯಕ್ತಿಗಳಾದ ಲಲನಾ ಶೆಣೈ, ಪೂಜಾ ಉಪಾಧ್ಯಾಯ ಮತ್ತೀತರರು ಉಪಸ್ಥಿತರಿದ್ದರು.