ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ವಂಚನೆ ಪ್ರಕರಣ- ತಲೆಮರೆಸಿಕೊಂಡಿದ್ದ ಆರೋಪಿಗೆ ಜಾಮೀನು

0

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಹದಿನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಬಳಿಕ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ಮೋಸ,ವಂಚನೆ ಪ್ರಕರಣದ ಆರೋಪಿಯಾಗಿದ್ದು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗದೆ, ತನ್ನ ವಿಳಾಸವನ್ನು ಬದಲಾಯಿಸಿ ತಲೆಮರೆಸಿಕೊಂಡಿದ್ದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಮಹಮ್ಮದ್ ಇಕ್ಬಾಲ್ ಯಾನೆ ಪ್ರವೀಣ್ ಕುಮಾರ್ ತೋಮರ್(53ವ.)ಬಂಧಿತ ಆರೋಪಿ. ಮುಹ್ಮದ್ ಇಕ್ಬಾಲ್ ಯಾನೆ ಪ್ರವೀಣ್ ಕುಮಾರ್ ತೋಮರ್ ಕಾರ್ಕಳದ ಜಗದೀಶ್ ಎಂಬವರ ಜೊತೆ 2008ರಲ್ಲಿ ಕಾರಿನಲ್ಲಿ ಪುತ್ತೂರು ಮಾರ್ಗವಾಗಿ ಮಡಿಕೇರಿಗೆ ಹೋಗುತ್ತಿದ್ದಾಗ ಕಾವು ಸಮೀಪ ಅವರ ಕಾರು ಅಪಘಾತವಾಗಿತ್ತು. ಆ ಸಂದರ್ಭ ಕಾರಲ್ಲಿದ್ದ ಗಾಯಾಳುಗಳನ್ನು ಸಂಪ್ಯ ಠಾಣೆಯ ಆಗಿನ ಎಸ್.ಐ. ಟಿಡಿ ನಾಗರಾಜ್ ಅವರು ವಿಚಾರಿಸಿದಾಗ ಗಾಯಾಳುಗಳಲ್ಲಿ ಹಲವು ಕ್ರೆಡಿಟ್ ಕಾರ್ಡ್‌ಗಳಿರುವುದು ಪತ್ತೆಯಾಗಿತ್ತು. ವಿಚಾರಣೆ ತೀವ್ರಗೊಳಿಸಿದಾಗ ಆರೋಪಿಗಳು, ನಕಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹಲವು ಕಡೆ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.ಈ ಸಂಬಂಧ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ಸೆಕ್ಷನ್ 416,420,511 ಜೊತೆಗೆ 34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಜಗದೀಶ್ ಅವರ ಮೇಲಿನ ಪ್ರಕರಣವನ್ನು ಇತ್ಯರ್ಥಪಡಿಸಿತ್ತು. ಆದರೆ ಆರೋಪಿ ಮುಹಮ್ಮದ್ ಇಕ್ಬಾಲ್ ಯಾನೆ ಪ್ರವೀಣ್ ಕುಮಾರ್ ತೋಮರ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.ನ್ಯಾಯಾಲಯ ಆತನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಗ್ರಾಮಾಂತರ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿ ಪರ ವಕೀಲರಾದ ಅರಿಯಡ್ಕ ಉದಯಶಂಕರ ಶೆಟ್ಟಿ, ಕೃಷ್ಣವೇಣಿ, ಮಾಧವ ಪೂಜಾರಿ, ಜಾನ್ ಪೀಟರ್ ಡಿಸೋಜ, ಸಂಧ್ಯಾಲತಾ ವಾದಿಸಿದ್ದರು.

LEAVE A REPLY

Please enter your comment!
Please enter your name here