ನ.2ಕ್ಕೆ ಪುತ್ತೂರಿನಲ್ಲಿ ‘ಅಶೋಕ ಜನ-ಮನ’

0

ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಿಂದ‌ 75 ಸಾವಿರ ಮಂದಿಗೆ ದೀಪಾವಳಿ ವಸ್ತ್ರ ವಿತರಣಾ ಸಮಾರಂಭ

ಪುತ್ತೂರು:ಈ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ವಸದಾನ ಕಾರ್ಯಕ್ರಮ ನ.2ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.ಈ ಬಾರಿ 75 ಸಾವಿರ ಮಂದಿಗೆ ವಸ್ತ್ರದಾನ ನಡೆಯಲಿದೆ ಎಂದು ಟ್ರಸ್ಟ್‌ನ ಮುಖ್ಯ ಪ್ರವರ್ತಕರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ದರ್ಬೆ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ಅ.4ರಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇದೊಂದು ಪಕ್ಷಾತೀತ ನೆಲೆಯಲ್ಲಿ, ಬಡವರ ಸೇವೆಗಾಗಿಯೇ ಹಾಕಿಕೊಂಡ ಕಾರ್ಯಕ್ರಮವಾಗಿದೆ.ಇದು ಕಾಂಗ್ರೆಸ್ ಪಕ್ಷದ ಸಮಾವೇಶವಲ್ಲ.ಬಿಜೆಪಿ ಕಾಂಗ್ರೆಸ್ ವಿಚಾರ ಇಲ್ಲಿ ಇಲ್ಲ.ಇದರಲ್ಲಿ ಜಾತಿ ಧರ್ಮ ಭೇದಗಳಿಲ್ಲದೆ ಜನತೆ ಭಾಗವಹಿಸುತ್ತಾರೆ.ಕಳೆದ ಬಾರಿ 63,500 ಮಂದಿಗೆ ವಸ್ತ್ರದಾನ ಮಾಡಲಾಗಿತ್ತು.ಸುಮಾರು 38 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಕಳೆದ ಬಾರಿ ರಾತ್ರಿ 8 ಗಂಟೆಯ ಬಳಿಕವೂ ಬಂದು ವಸ್ತ್ರ ಪಡೆದುಕೊಂಡಿದ್ದಾರೆ.

ಈ ಬಾರಿ ಅದಕ್ಕೊಂದು ಕಟ್‌ಅಪ್ ಟೈಮ್ ಇಡಲಾಗಿದೆ.ಬೆಳಗ್ಗೆ 9.30ಕ್ಕೆ ನೋಂದಾವಣೆಯೊಂದಿಗೆ ಸಂಜೆ ಗಂಟೆ 7.30ಕ್ಕೆ ಕಟ್‌ಆಪ್ ಟೈಮ್ ಮಾಡಿದ್ದೇವೆ.ಈ ಬಾರಿಯೂ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ, ಮಕ್ಕಳಿಗೆ ಬೆಡ್‌ಶೀಟ್ ನೀಡಲಾಗುವುದು.ಸುಮಾರು 75 ಸಾವಿರ ಮಂದಿಗೆ ಈ ಬಾರಿ ವಸ್ತ್ರದಾನ ಮಾಡಲಿದ್ದೇವೆ.ಇದರ ಜೊತೆಗೆ ಸುಮಾರು 10 ಸಾವಿರ ವಸ್ತ್ರವನ್ನು ಹೆಚ್ಚುವರಿಯಾಗಿ ಸ್ಟೋರ್ ಮಾಡಿಡಲು ಮಾರಾಟ ಸಂಸ್ಥೆಗೆ ತಿಳಿಸಿದ್ದೇವೆ.ಈ ಬಾರಿ ಸುಮಾರು 45 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಹೇಳಿದರು.


ಹಿರಿಯರಿಗೆ ಉಚಿತ ವಾಹನದ ವ್ಯವಸ್ಥೆ:
ಹಿರಿಯರಿಗೆ ವಸ್ತ್ರದಾನ ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗುವಂತೆ ಅವರು ಪುತ್ತೂರು ಮಹಾಲಿಂಗೇಶ್ವರ ದೇವಳದ ಬಳಿಗೆ ಬಂದರೆ ಅಲ್ಲಿಂದ ‘ಬಗ್ಗಿ’ ಎಂಬ ವಾಹನದ ಉಚಿತ ವ್ಯವಸ್ಥೆ ಮಾಡಲಾಗುವುದು.ಅದರಲ್ಲಿ ಬಂದವರನ್ನು ಮತ್ತೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಗೆ ಮತ್ತೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.


ನೂತನ ನಾಮಕರಣ ‘ಅಶೋಕ-ಜನಮನ:
ಕಳೆದ 11 ವರ್ಷಗಳಿಂದ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರಂತರವಾಗಿ ವಸ್ತ್ರದಾನ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಈ ಬಾರಿ ಮೊದಲ ಬಾರಿಗೆ ‘ಅಶೋಕ-ಜನಮನ’ ಎಂದು ನಾಮಕರಣ ಮಾಡಲಾಗಿದೆ.ನಾಮಕರಣಕ್ಕೆ ಸುಮಾರು 400 ಮಂದಿಯಿಂದ ಸಲಹಾ ಪತ್ರಗಳು ಬಂದಿವೆ.ಅದರಲ್ಲಿ ಒಂದನ್ನು ಆಯ್ಕೆ ಮಾಡಿ ‘ಅಶೋಕ ಜನಮನ’ ಎಂಬ ಹೆಸರಿನೊಂದಿಗೆ ಇನ್ನು ವಸ್ತ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಗೂಡುದೀಪ ಸ್ಪರ್ಧೆ:
ಕಳೆದ ವರ್ಷದಂತೆ ಗೂಡುದೀಪ ಸ್ಪರ್ಧೆಯು ಈ ಬಾರಿಯೂ ನಡೆಯಲಿದೆ.ಅದರ ನೇತೃತ್ವವನ್ನು ಜಯಪ್ರಕಾಶ್ ಬದಿನಾರು ಅವರು ವಹಿಸಲಿದ್ದಾರೆ.ವಿಜೇತರಿಗೆ ರೂ.10 ಸಾವಿರ (ಪ್ರ), ರೂ.7 ಸಾವಿರ(ದ್ವಿ), ರೂ.5 ಸಾವಿರ(ತೃ) ನಗದು ಬಹುಮಾನ ವಿತರಿಸಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಬೆಳಗ್ಗಿನಿಂದ ಸಂಜೆ ತನಕ ನಿರಂತರ ಕಾರ್ಯಕ್ರಮ:
ಸಮಾಜದ ಎಲ್ಲಾ ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಆಗಮಿಸಬೇಕು ಮತ್ತು ಅವರನ್ನು ಗುರುತಿಸುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಕಾರ್ಯಕ್ರಮ ನಿರೂಪಕರು ಬೆಳಗ್ಗಿನಿಂದ ಸಂಜೆಯ ತನಕ ಕೆಲಸ ನಿರ್ವಹಿಸಲಿದ್ದಾರೆ.ಒಮ್ಮೆ ಸಭಾ ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿಗೆ ವಿಶೇಷ ಗಣ್ಯರು ಬರುವುದು ಕಡಿಮೆ ಆಗುತ್ತದೆ.ಹಾಗಾಗಬಾರದು ಎಂದು ದಿನಪೂರ್ತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರಿಗೆ ಸನ್ಮಾನ:
ಸಮಾಜದಲ್ಲಿ ಅನೇಕ ಮಂದಿ ಸನ್ಮಾನಕ್ಕೆ ಯೋಗ್ಯತೆ ಇದ್ದರೂ ಅವರನ್ನು ಗುರುತಿಸಿ ಸನ್ಮಾನಿಸುವುದಿಲ್ಲ.ಅಂತಹ ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಟ್ರಸ್ಟಿನ ಪ್ರಮುಖರಾದ ಅಮಳ ರಾಮಚಂದ್ರ, ನಿರಂಜನ ರೈ ಮಠಂತಬೆಟ್ಟು, ಹೇಮನಾಥ ಶೆಟ್ಟಿ ಕಾವು, ಕೃಷ್ಣಪ್ರಸಾದ್ ಬೊಳ್ಳಾವು, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ನಿಹಾಲ್ ಪಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. , ಬಾಲಕೃಷ್ಣ ಪೂಜಾರಿ ಕಬಕ ಕಾರ್ಯಕ್ರಮ ನಿರೂಪಿಸಿದರು.ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಟ್ರಸ್ಟಿನ ವಿವಿಧ ಜವಾಬ್ದಾರಿ ಸ್ಥಾನದಲ್ಲಿರುವ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಶಿವರಾಮ ಆಳ್ವ, ಮಹಮ್ಮದ್ ಬಡಗನ್ನೂರು, ಪಂಜಿಗುಡ್ಡೆ ಈಶ್ವರ ಭಟ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಜೋಕಿಂ ಡಿಸೋಜ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ರಿತೇಶ್ ಶೆಟ್ಟಿ ಮಂಗಳೂರು, ಸತೀಶ್ ರೈ ನಿಡ್ಪಳ್ಳಿ, ಖಾದರ್ ನೆಕ್ಕಿಲಾಡಿ, ಯೋಗೀಶ್ ಸಾಮಾನಿ, ವಿಜಯ್ ಕೋಡಿಂಬಾಡಿ, ಶಿವಪ್ರಸಾದ್ ರೈ ಕೋಡಿಂಬಾಡಿ, ಮನ್ಮಥ ಶೆಟ್ಟಿ, ಧರಣಿ, ಅಸ್ಮಾ ಗಟ್ಟಮನೆ, ವಿಶಾಲಕ್ಷ್ಮಿ ಬನ್ನೂರು, ಅರುಣಾ ದಿನಕರ್ ರೈ, ಹರಿಣಾಕ್ಷಿ ಜೆ ಶೆಟ್ಟಿ, ಸಾಯಿರಾಬಾನು ಬನ್ನೂರು, ನೆಬಿಸ ಬಪ್ಪಳಿಗೆ, ರಾಕೇಶ್ ರೈ ಕುದ್ಕಾಡಿ, ಪ್ರಜ್ವಲ್ ರೈ ಪಾತಾಜೆ, ಆಸ್ಕರ್ ಆನಂದ್, ಸಿದ್ದಿಕ್ ಸುಲ್ತಾನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳಿಗೆ ಆಹ್ವಾನ
ಈ ಬಾರಿ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿದ್ದೇವೆ.ಅವರು ಡೈರಿಯಲ್ಲಿ ಕಾರ್ಯಕ್ರಮದ ದಿನಾಂಕವನ್ನು ದಾಖಲಿಸಿಕೊಂಡಿದ್ದಾರೆ.ಶೇ.100ರಷ್ಟು ಅವರು ಬರುವ ಸಾಧ್ಯತೆ ಇದೆ.ಯಾಕೆಂದರೆ ಕಳೆದ ವರ್ಷದ ಯಶಸ್ವಿ ಕಾರ್ಯಕ್ರಮದ ಕುರಿತು ಅವರು ಈಗಾಗಲೇ ಮಾಹಿತಿ ಪಡೆದುಕೊಂಡಿದ್ದಾರೆ.ಉಪಮುಖ್ಯಮಂತ್ರಿಗಳು ಕೂಡ ಇದನ್ನು ಉಲ್ಲೇಖ ಮಾಡಿದ್ದರು.ಅವರಿಗೂ ಆಹ್ವಾನ ನೀಡಲಾಗಿದೆ-
ಅಶೋಕ್ ಕುಮಾರ್ ರೈ

ದೇವರು ಶಕ್ತಿ ಕೊಡುವಷ್ಟು ಸಮಯ ವಸ್ತ್ರದಾನ ಮುಂದುವರಿಯಲಿದೆ
ಪ್ರತಿ ವರ್ಷ ವಸದಾನ ಮಾಡುವ ಸಂಕಲ್ಪ ಮಾಡಿಕೊಂಡಾಗ ಆರಂಭದಲ್ಲಿ ಮನೆಯಲ್ಲೇ 30 ಮಂದಿಗೆ ಕೊಡುತ್ತಿದ್ದೆ.ಆಗಲೇ ನನ್ನ ತಾಯಿ ಇದು ಮುಂದೆ ಕಷ್ಟ ಆಗುತ್ತದೆ ಎಂದು ಹೇಳುತ್ತಿದ್ದರು.ಆದರೆ ನಾನು ಅದನ್ನು ದೇವರ ಆಶೀರ್ವಾದದಿಂದ ಮುಂದುವರಿಸಿದ್ದೇನೆ.ದೇವರು ಎಲ್ಲಿಯ ತನಕ ಶಕ್ತಿ ಕೊಡುತ್ತಾನೋ ಅಲ್ಲಿಯ ತನಕ ಕಾರ್ಯಕ್ರಮ ನಡೆಯಲಿದೆ.ಕೆಲವರು ಅಶೋಕ್ ಕುಮಾರ್ ರೈ ಶಾಸಕ ಸ್ಥಾನಕ್ಕಾಗಿ ವಸ್ತ್ರದಾನ ನೀಡುತ್ತಾರೆಂದು ಹೇಳಿದ್ದೂ ಇದೆ.ಆದರೆ ಅಶೋಕ್ ಕುಮಾರ್ ರೈ ಶಾಸಕನಾದ ಮೇಲೂ ವಸ್ತ್ರದಾನ ಕೊಡುವುದು ನಿಲ್ಲಿಸಲಿಲ್ಲ. ಕಾರ್ಯಕ್ರಮಕ್ಕಾಗಿ ಯಾರಿಂದಲೂ ಡೊನೇಶನ್ ಪಡೆಯಲಿಲ್ಲ.ನನ್ನದೇ ನಾಲ್ಕೈದು ಸಂಸ್ಥೆಗಳ ಹಣ ವರ್ಗಾವಣೆ ಮಾಡಿ ಕಾರ್ಯಕ್ರಮ ಮಾಡುತ್ತಿದ್ದೇನೆ
– ಅಶೋಕ್ ಕುಮಾರ್ ರೈ


ಪ್ರಧಾನಿ ಬರುವಾಗ ಸೇರಿದ್ದೂ 20ರಿಂದ 30 ಸಾವಿರ ಮಂದಿ
ಕಳೆದ ಬಾರಿ ಟ್ರಸ್ಟ್ ಮೂಲಕ ದೊಡ್ಡ ಕಾರ್ಯಕ್ರಮ ಮಾಡಿದ್ದೇವೆ.ಕಳೆದ ಬಾರಿ 63,500 ಮಂದಿಗೆ ವಸ್ತ್ರ ವಿತರಣೆ ಮಾಡಿದ್ದೇವೆ.38,೦೦೦ ಮಂದಿ ಊಟ ಮಾಡಿದ್ದಾರೆ.ದ.ಕ.ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ದೊಡ್ಡ ಕಾರ್ಯಕ್ರಮಗಳಲ್ಲಿ ಸೇರಿರುವ ಜನಸಂಖ್ಯೆ 25ರಿಂದ 30 ಸಾವಿರ ಮಾತ್ರ.ವಿಐಪಿಗಳು, ವಿವಿಐಪಿಗಳು, ಭಾರತದ ಪ್ರಧಾನ ಮಂತ್ರಿಗಳು ಬರುವಾಗ ಕೂಡ ಸೇರಿರುವುದು 20 ರಿಂದ 25 ಸಾವಿರ ಜನ.ಹೇಳುವಾಗ 30-40 ಸಾವಿರ ಮಂದಿ ಎಂದು ಹೇಳಿರಬಹುದು.ಆದರೆ ಪೊಲೀಸ್ ರಿಪೋರ್ಟ್ ಪ್ರಕಾರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದಿರುವ ದೊಡ್ಡ ಕಾರ್ಯಕ್ರಮಗಳಲ್ಲಿ ಜನರು ಸೇರಿರುವುದು 25ರಿಂದ 30 ಸಾವಿರ ಮಾತ್ರ.ಪುತ್ತೂರಿನಂತಹ ತಾಲೂಕಿನಲ್ಲಿ 63,500 ಮಂದಿಗೆ ವಸ್ತ್ರ ವಿತರಣೆ, ಅನ್ನಸಂತರ್ಪಣೆ ಮಾಡಿದ್ದೇವೆ ಎಂದರೆ ಅದು ಒಬ್ಬರಿಗೆ ಸಲ್ಲುವ ಗೌರವ ಅಲ್ಲ.ಪುತ್ತೂರಿನ ಎಲ್ಲಾ ಜನತೆಗೆ ಮತ್ತು ಜೊತೆಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಸಲ್ಲುವ ಗೌರವ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಗ್ರಾಮ ಭೇಟಿ- ಪಕ್ಷಾತೀತ ಕಾರ್ಯಕ್ರಮ
ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಕರ್ತರು ಪ್ರತೀ ಗ್ರಾಮಕ್ಕೂ ಹೋಗಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಬೇಕು.ಇದು ಕಾಂಗ್ರೆಸ್ ಪಕ್ಷದ ಸಮಾವೇಶ ಖಂಡಿತ ಅಲ್ಲ ಎಂಬುವುದನ್ನು ನಾವು ತಿಳಿದುಕೊಳ್ಳಬೇಕು.ಈ ಕಾರ್ಯಕ್ರಮ ಪಕ್ಷಾತೀತವಾಗಿ ನಡೆಯುವ ಸೇವಾ ಕಾರ್ಯಕ್ರಮ.ಬಡವರಿಗಾಗಿಯೇ ಮಾಡುತ್ತಿರುವ ಸೇವಾ ಕಾರ್ಯ.ಇದನ್ನು ಗ್ರಾಮದ ಜನತೆಗೆ ಮಾಹಿತಿ ನೀಡಬೇಕು.ಈಗಾಗಲೇ ಸುಮಾರು 25 ಸಾವಿರ ಮಂದಿ ಸದಸ್ಯರಿಗೆ ಟ್ರಸ್ಟ್ ಮೂಲಕವೇ ಆಮಂತ್ರಣ ಹೋಗಿದೆ.ಉಳಿದಂತೆ ಗ್ರಾಮಕ್ಕೆ ಹೋಗಿ ಮಾಹಿತಿ ನೀಡಬೇಕಾಗುತ್ತದೆ.ಚುನಾವಣಾ ನೀತಿ ಸಂಹಿತೆ ಇರುವುದರಿಂದ ಫ್ಲೆಕ್ಸ್ ಹಾಕಲು ಸಮಸ್ಯೆಯಾಗುತ್ತದೆ.ಹಾಗಾಗಿ ವಾಟ್ಸಾಪ್ ಮೂಲಕ ಹೆಚ್ಚು ಜನರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು.ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಗ್ರಾಮಗಳಿಗೆ ಭೇಟಿಯನ್ನು ಮಾಡಬೇಕು ಮತ್ತು ಗ್ರಾಮದಲ್ಲಿ ಕನಿಷ್ಠ ಒಂದು ಫ್ಲೆಕ್ಸ್ ಅಳವಡಿಸುವಂತೆ ಕಾರ್ಯಕರ್ತರಿಗೆ ಅಶೋಕ್ ಕುಮಾರ್ ರೈ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here