ಐತ್ತೂರು: ‘ಆಶ್ರಯ’ ಹಕ್ಕು ಪತ್ರ ಪಡೆದವರಿಂದ 30ವರ್ಷಗಳ ಬಳಿಕ ನಿವೇಶನಕ್ಕಾಗಿ ಹೋರಾಟ- ಕೂಲಿ ಕಾರ್ಮಿಕರಿಗೆ ಮಂಜೂರಾಗಿದ್ದ ಜಾಗ ಇತರರಿಂದ ಒತ್ತುವರಿ ಆರೋಪ

0

ಕಡಬ: ಐತ್ತೂರು ಗ್ರಾ.ಪಂ. ವ್ಯಾಪ್ತಿಯ ಅಂತಿಬೆಟ್ಟು ಎಂಬಲ್ಲಿ 1993 ರಲ್ಲಿ ಕೂಲಿ ಕಾರ್ಮಿಕರಿಗೆ ’ಆಶ್ರಯ’ ನಿವೇಶನ ಮಂಜೂರಾಗಿತ್ತು. ಅಂದಿನ ಸರ್ಕಾರ ಹಕ್ಕುಪತ್ರ ನೀಡಿದ್ದು ಅಲ್ಲದೆ, ಕಂದಾಯ ಇಲಾಖೆ ಐತ್ತೂರು ಗ್ರಾಮ ಪಂಚಾಯತ್‌ಗೆ ನಿವೇಶನ ಹಸ್ತಾಂತರ ಕೂಡ ಮಾಡಿತ್ತು. ವಿಶೇಷವೆಂದರೆ ನಿವೇಶನ ಮಂಜೂರಾಗಿದ್ದವರು 30 ವರ್ಷಗಳ ಕಾಲ ನಿವೇಶನ ಪಡೆದುಕೊಳ್ಳದೇ ಇದೀಗ ನಿವೇಶನ ಪಡೆದುಕೊಳ್ಳಲು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಸುಮಾರು 30 ವರ್ಷಗಳ ಹಳೆಯ ಹಕ್ಕು ಪತ್ರಕ್ಕೆ ಇದೀಗ ನಿವೇಶನ ನೀಡುವ ಆಗ್ರಹ ಕೇಳಿ ಬಂದಿದೆ.


ಅಂತಿಬೆಟ್ಟು ಪ್ರದೇಶದಲ್ಲಿ ನಿವೇಶನ ಹಂಚಿಕೆಗಾಗಿ ಸುಮಾರು 2 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಐತ್ತೂರು ಗ್ರಾಮ ಪಂಚಾಯತ್ ಮೂಲಭೂತ ಸೌಕರ್ಯಗಳಾದ ಬೋರ್‌ವೆಲ್, ನೀರಿನ ಟ್ಯಾಂಕ್ ಸಹಿತ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಕಂದಾಯ ಇಲಾಖೆ ಕೆಲ ವರ್ಷಗಳ ಹಿಂದೆಯೇ ಗಡಿ ಗುರುತು ಮತ್ತು ಪ್ಲಾಟಿಂಗ್ ಮಾಡಿ ಗ್ರಾಮ ಪಂಚಾಯತ್‌ಗೆ ನಿವೇಶನವನ್ನು ಹಸ್ತಾಂತರ ಮಾಡಿದೆ. ಹಕ್ಕುಪತ್ರ ಇದ್ದರೂ ನಿವೇಶನ ಇನ್ನೂ ದೊರಕದೆ ಈಗಲೂ ಬಾಡಿಗೆ ಮನೆಯಲ್ಲಿ ನೆಲೆಸಿರುವ ಫಲಾನುಭವಗಳಿಗೂ ಇದೇ ಪ್ರದೇಶದಲ್ಲಿ ನಿವೇಶನ ನೀಡಬಹುದು ಎಂಬ ಪ್ರಸ್ತಾವನೆಯೂ ಪಂಚಾಯತ್ ನವರಲ್ಲಿ ಇದೆ. ಇತ್ತೀಚೆಗೆ ಕಡಬದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ಈ ಕುರಿತು ಓರ್ವ ಫಲಾನುಭವಿ ಹನುಮಂತನ್ ಎಂಬವರು ದೂರು ನೀಡಿದ್ದಾರೆ. ಬಳಿಕ ತಹಶೀಲ್ದಾರರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಐತ್ತೂರು ಪಂಚಾಯತ್‌ಗೆ ಪತ್ರ ಬರೆದಿದ್ದರು.


ಆದರೆ ಹಿಂದೆ ಹಕ್ಕುಪತ್ರ ಪಡೆದ ಫಲಾನುಭವಿಗಳು ಐತ್ತೂರು ಪಂಚಾಯತ್‌ಗೆ ಹೋಗಿ ನಿವೇಶನದ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ನೀಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಹಕ್ಕು ಪತ್ರ ನಮ್ಮಲ್ಲೇ ಇದೆ. ಪಂಚಾಯತ್‌ನವರು ಆ ನಿವೇಶನದ ಕೆಲಸವನ್ನು ನಮ್ಮಲ್ಲೇ ಮಾಡಿಸಿದ್ದಾರೆ. ಅಲ್ಲದೆ, ನಮಗೆ ಸಂಬಳವೂ ನೀಡಿಲ್ಲ. ನಮಗೆ ಸಿಗಬೇಕಾದ ನಿವೇಶನವನ್ನು ತೋರಿಸದೇ ನಮ್ಮ ಮೇಲೆ ದಬ್ಬಾಳಿಕೆ ತೋರಿಸುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸುತ್ತಿದ್ಧಾರೆ. .


ಗ್ರಾಮ ಸಭೆಯಲ್ಲಿ ಪ್ರಸ್ತಾಪ
ಹಕ್ಕು ಪತ್ರ ದೊರಕಿದೆ ಎಂದು ಹೇಳುತ್ತಿರುವ ಫಲಾನುಭವಿಗಳಲ್ಲಿ ಕೆಲವರು ಸುಮಾರು 6 ತಿಂಗಳ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಲಾಗಿ ನಿಮಗೆ ನೀಡಲಾಗಿರುವ ಹಕ್ಕುಪತ್ರ ಇನ್ನಿತರ ದಾಖಲೆಪತ್ರಗಳನ್ನು ಪಂಚಾಯತ್‌ಗೆ ನೀಡಿ ನಿಮಗೆ ನಿವೇಶನ ಮಾಡಿ ಕೊಡುವ ಜವಾಬ್ದಾರಿ ನಮ್ಮದು ಎಂದು ಪಿಡಿಒ ಅವರು ಉತ್ತರಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲೇ ಅಂತಿಬೆಟ್ಟು ಪ್ರದೇಶದಲ್ಲಿ ಜಾಗದ ಸರ್ವೇ ಮಾಡಿಸಿ ನಿವೇಶನ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸುಮಾರು 30 ವರ್ಷಗಳ ಕಾಲ ಈ ಕುರಿತು ಮೌನಕ್ಕೆ ಜಾರಿದವರು ಇದೀಗ ಒಂದೇ ಬಾರಿಗೆ ತಕ್ಷಣ ನಿವೇಶನ ಒದಗಿಸಿಕೊಡಿ ಎಂದು ಯಾಕಾಗಿ ಆಗ್ರಹಿಸುತ್ತಿದ್ದಾರೆ? ಅಂದಿನ ನಿವೇಶನದ ಹಕ್ಕುಪತ್ರ ಇಂದಿಗೆ ಊರ್ಜಿತವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ದೊರೆಯಬೇಕಿದೆ.

ನಿವೇಶನ ಹಂಚುವುದು ಪಂಚಾಯತ್‌ನವರ ಕೆಲಸ- ಕಡಬ ತಹಸೀಲ್ದಾರ್
ಈ ಬಗ್ಗೆ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಅವರನ್ನು ಸಂಪರ್ಕಿಸಿದಾಗ ‘ಪಂಚಾಯತ್ ಕಾದಿರಿಸಿದವರಿಗೆ ಕಂದಾಯ ಇಲಾಖೆಯಿಂದ ಅಂದು ಹಕ್ಕುಪತ್ರ ನೀಡಲಾಗಿದೆ. ಮುಂದೆ ಅದನ್ನು ಹಂಚುವುದು, ಸ್ಥಳ ಗುರುತು ಮಾಡುವುದು ಪಂಚಾಯತ್ ನವರ ಕೆಲಸ ಅವರು ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಕಚೇರಿಗಳಿಗೆ ಅಲೆದಾಡಿ ಬಳಲಿದ್ದೇವೆ-ಹನುಮಂತನ್
ನಮಗೆ ಸ್ವಂತ ಮನೆ ಇಲ್ಲ ನಮಗೆ ಹಕ್ಕುಪತ್ರ ದೊರಕಿದ್ದರೂ ಇದುವರೆಗೂ ನಿವೇಶನ ನೀಡಿಲ್ಲ, ಅನೇಕ ಬಾರಿ ಕಛೇರಿಗಳಿಗೆ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ, ಪಿಡಿಒ ಅವರು ಒಮ್ಮೆ ಜಾಗಕ್ಕೆ ಕರೆದುಕೊಂಡು ಬಂದು ಸ್ಥಳ ಸ್ವಚ್ಛಗೊಳಿಸಿದ್ದೇವೆ. ಆದರೆ, ಇದುವರೆಗೂ ನಮಗೆ ನಿವೇಶನ ಮಾತ್ರ ಕೊಟ್ಟಿಲ್ಲ ಇದರಿಂದ ನಾವು ಜೀವನದಲ್ಲಿ ಸಾಕಷ್ಟು ಕುಗ್ಗಿ ಹೋಗುವಂತಾಗಿದೆ. 30 ವರ್ಷಗಳ ಹಿಂದೆ ಹಕ್ಕುಪತ್ರ ಸಿಕ್ಕಿದಾಗ ಆ ನಿವೇಶನದಲ್ಲಿ ಮರಗಳು ಇದ್ದವು, ಆ ಮರಗಳನ್ನು ತೆರವು ಮಾಡಲು ಸುಮಾರು 10 ವರ್ಷ ತೆಗೆದುಕೊಂಡರು, ಬಳಿಕ ಇತರ ಒತ್ತುವರಿದಾರರಿಗೆ ಅನುಕೂಲವಾಗುವಂತೆ ನಿವೇಶನದ ಹಕ್ಕುಪತ್ರದ ಬಗ್ಗೆ ನಾನಾ ಕಾರಣಗಳನ್ನು ನೀಡಿರುವುದರಿಂದ ಗೊಂದಲವಾಗಿ ಆ ಜಾಗದಲ್ಲಿ ವಾಸ್ತವ್ಯ ಹೂಡಲು ಸಾಧ್ಯವಾಗಿಲ್ಲ ಎಂದು ಫಲಾನುಭವಿ ಹನುಮಂತನ್ ಅವರು ಹೇಳಿದ್ದಾರೆ.

ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಗೂ ಸಿದ್ದ-ಶೇಖರ್
ನಾವು ರಬ್ಬರ್ ಪ್ಲಾಂಟೇಶನ್‌ಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ನಮಗೆ ಸ್ವಂತ ಸೂರಿಲ್ಲ. ಅದಕ್ಕಾಗಿ ನಿವೇಶನಕ್ಕಾಗಿ ಸರಕಾರದ ಮೊರೆ ಹೋಗಿದ್ದು, ಅದಕ್ಕಾಗಿ ಕಂದಾಯ ಇಲಾಖೆ ನಿವೇಶನವನ್ನೂ ಒದಗಿಸಿದೆ. ಈ ಹಿನ್ನಲೆಯಲ್ಲಿ ನಮಗೆ ಹಕ್ಕುಪತ್ರವೂ ದೊರಕಿದೆ. ಆದರೆ, ಇದುವರೆಗೂ ನಮಗೆ ನಿವೇಶನ ಮಾತ್ರ ದೊರಕಿಲ್ಲ. ಈ ಕುರಿತು ಸಂಬಂಧಪಟ್ಟ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲೂ ಮುಂದಾಗುತ್ತೇವೆ ಎಂದು ಇನ್ನೋರ್ವ ಫಲಾನುಭವಿ ಶೇಖರ್ ಹೇಳಿದ್ದಾರೆ.

ನಿಯಮಾನುಸಾರ ಮಾತ್ರ ಜಾಗ ಹಂಚಿಕೆ ಮಾಡಲು ಸಾಧ್ಯ-ಸುಜಾತ ಕೆ., ಪಿ.ಡಿ.ಒ
ಈ ಬಗ್ಗೆ ಐತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಜಾತರವರು ಪ್ರತಿಕ್ರಿಯೆ ನೀಡಿ, 6 ತಿಂಗಳ ಹಿಂದೆ ಹನುಮಂತ ಮತ್ತು ಇತರರು 1993ರಲ್ಲಿ ಸರ್ವೆ ನಂ 90/ ರಲ್ಲಿ ನೀಡಿದ ಹಕ್ಕುಪತ್ರವನ್ನು ತಂದು, ನಮಗೆ ಇಲ್ಲಿಯವರೆಗೆ ನಿವೇಶನ ಸಿಕ್ಕಿಲ್ಲ ಎಂದು ಅವಲತ್ತುಕೊಂಡಿದ್ದರು. ಅವರ ನಿವೇಶನದ ಬಗ್ಗೆ ಪರಿಶೀಲಿಸಿದಾಗ ಆ ಜಾಗ ಹಲವು ವರ್ಷಗಳ ಹಿಂದೆಯೇ ಒತ್ತುವರಿಯಾಗಿದ್ದು ತಿಳಿದು ಬಂತು. ಅದು ಅವರಿಗೂ ಗೊತ್ತಿರುವ ವಿಷಯ. ರಬ್ಬರ್ ಬೋರ್ಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸ ಮಾಡುತ್ತಿದ್ದ ಇವರಿಗೆ ನಿರಾಶೆ ಮಾಡುವ ಮನಸಿಲ್ಲದೆ ನಮ್ಮ ನಿವೇಶನ ರಹಿತರಿಗೆ ಕಾದಿರಿಸಿದ ಜಾಗ ಸರ್ವೇ ನಂಬರ್ 90/8 ವನ್ನು ಹಂಚಿಕೆ ಮಾಡುವಾಗ ಅವರಿಗೂ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆವು. ಅಂತೆಯೇ ಸರ್ವೆ ಕಾರ್ಯ ಕೈಗೊಂಡಿದ್ದೆವು. ಅವರ ಬಳಿಯಲ್ಲಿ ಬೇರೆ ಯಾವುದೋ ಸರ್ವೆ ನಂಬರ್ ನ ಹಕ್ಕುಪತ್ರ ಇದ್ದ ಮಾತ್ರಕ್ಕೆ ಸರ್ವೆ ಕಾರ್ಯ ಮುಗಿದ ಕೂಡಲೇ ಅವರಿಗೆ ನಿವೇಶನ ಹಂಚಿಕೆ ಮಾಡಲು ಆಗುವುದಿಲ್ಲ, ಪ್ರೊಸೀಜರ್ ಮುಗಿದ ಮೇಲೆ ಹಂಚಿಕೆ ಮಾಡಲು ಸಾಧ್ಯ. ನಾವು ಅವರಿಗೆ ನಿವೇಶನ ನೀಡಲು ಪ್ರಯತ್ನ ಪಟ್ಟಿದ್ದರೂ ಈ ತರ ಯಾಕೆ ಅವಸರ ಮಾಡುತ್ತಾರೆ ಅಂತ ಗೊತ್ತಿಲ್ಲ. ಕಳೆದ 30 ವರ್ಷಗಳಿಂದ ಸುಮ್ಮನಿದ್ದ ಅವರಿಗೆ, 6 ತಿಂಗಳು ಸಮಾಧಾನವಾಗಿರಿ ನಿಮಗೆ ನೀವೇಶನ ಕೊಡಿಸುವಲ್ಲಿ ಪ್ರಯತ್ನ ಪಡುತ್ತಾ ಇದ್ದೇವೆ ಎಂದು ತಿಳಿ ಹೇಳಿದರೂ ಚುನಾವಣೆ ನೀತಿ ಸಂಹಿತೆ ಇರುವಾಗ ಕಚೇರಿಗೆ ಮಾಧ್ಯಮದವರ ಜೊತೆ ಬಂದು ಪ್ರತಿಭಟನೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದಾರೆ. ಇದೆಲ್ಲ ಸರಿಯಲ್ಲ. ನಮ್ಮ ಭಾಗದಿಂದ ಯಾವುದೇ ತಪ್ಪಾಗಿಲ್ಲ ಎಂದು ಪಿಡಿಒ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here