ಉಪ್ಪಿನಂಗಡಿ: ನಮ್ಮಲ್ಲಿ ಉಳಿದ ಸೊಸೆಯಂದಿರು ವರದಕ್ಷಿಣೆಯಾಗಿ 70 ಪವನ್ ಚಿನ್ನಾಭರಣ ತಂದಿರುವಾಗ ನೀನೊಬ್ಬಳು 30 ಪವನ್ ಚಿನ್ನಾಭರಣವನ್ನು ಮಾತ್ರ ತಂದಿರುವುದು ಸರಿಯೇ ಎಂದು ಪ್ರಶ್ನಿಸಿ, ಉಳಿದ 40 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ತಂದೊಪ್ಪಿಸಬೇಕೆಂದು ಒತ್ತಾಯಿಸಿ ಪತಿ ಹಾಗೂ ಅತ್ತೆ, ಮಾವ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ 25 ರ ಹರೆಯದ ಯುವತಿಯೋರ್ವಳು ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬೆನಪು ಉರ್ಲಡ್ಕ ನಿವಾಸಿ ಅಲ್ತಾಫ್ ಎಂಬಾತನ ಪತ್ನಿ ಫಾತಿಮತ್ ಸೈನಾಜ್ ಎಂಬಾಕೆಯೇ ವರದಕ್ಷಿಣೆ ಹಿಂಸೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆ. ಈಕೆ ಕಳೆದ 2021 ರ ಫೆಬ್ರವರಿ 15 ರಂದು ಅಲ್ತಾಫ್ನೊಂದಿಗೆ ವಿವಾಹವಾಗಿದ್ದು, ಗಂಡನ ಮನೆಯಲ್ಲಿ ಸಾಂಸರಿಕ ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ಉಳಿದ ಸೊಸೆಯಂದಿರಂತೆ 70 ಪವನ್ ಚಿನ್ನಾಭರಣ ತಾರದೆ ಕೇವಲ 30 ಪವನ್ ಚಿನ್ನಾಭರಣ ತಂದಿರುವುದಕ್ಕೆ ಆಕ್ಷೇಪಿಸಿ ಗಂಡ ಅಲ್ತಾಫ್, ಮಾವ ಮಹಮ್ಮದ್, ಅತ್ತೆ ಜಮೀಳಾ ನಿತ್ಯ ಈಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರೆಂದೂ, ಯಾರಿಗಾದರೂ ದೂರು ನೀಡಿದರೆ ನಿನ್ನನ್ನು ಕಾರಿನಲ್ಲಿ ಅಪಘಾತ ಮಾಡಿಸಿ ಕೊಲ್ಲುವೆನೆಂದು ಗಂಡ ಬೆದರಿಕೆಯೊಡ್ಡುತ್ತಿದ್ದರೆಂದು ದೂರಿನಲ್ಲಿ ಈಕೆ ಆರೋಪಿಸಿದ್ದಾರೆ.
ಗಂಡ ಅಲ್ತಾಫ್ನ ತಂಗಿಯ ಮದುವೆ ನಿಗದಿಯಾಗಿದ್ದು, ತಂಗಿಗೆ ನೀಡುವ ಸಲುವಾಗಿ ಉಳಿದ ಚಿನ್ನಾಭರಣವನ್ನು ತರಬೇಕೆಂದು ತಾಕೀತು ಮಾಡಿ, ಅಕ್ಟೋಬರ್ 3 ರಂದು ಸಾಯಂಕಾಲ ಫಾತಿಮತ್ ಸೈನಾಜ್ ಳನ್ನು ಅತ್ತೆ ಜಮೀಳಾ ಕೂದಲು ಹಿಡಿದು ನೆಲಕ್ಕೆ ದೂಡಿ ಹಾಕಿದ್ದು, ಮಾವ ಮಹಮ್ಮದ್ ಕಾಲಿನಿಂದ ಹೊಟ್ಟೆಗೆ ತುಳಿದು ಹಲ್ಲೆ ನಡೆಸಿದರಲ್ಲದೆ, ಬೇಗ ಚಿನ್ನಾಭರಣವನ್ನು ತರಬೇಕೆಂದು ಮನೆಯಿಂದ ಹೊರಗಟ್ಟಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಆಕೆ ತನ್ನ ಅಣ್ಣನಿಗೆ ಪೋನಾಯಿಸಿ ಆತನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.