ಪುತ್ತೂರುದ ಪಿಲಿಗೊಬ್ಬು ಸೀಸನ್-2:ಹುಲಿವೇಷ ಕುಣಿತ ಸ್ಪರ್ಧೆ

0

ಪುತ್ತೂರು: ಸಹಜ್ ರೈ ಬಳೆಜ್ಜ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ ಪುತ್ತೂರುದ ಪಿಲಿಗೊಬ್ಬು ಸೀಸನ್-2 ಕಾರ್ಯಕ್ರಮದ ಹುಲಿಕುಣಿತ ವೇಷ ಸ್ಪರ್ಧೆಗೆ ಅ.6ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಪಿಲಿಗೊಬ್ಬು ಸ್ಪರ್ಧಾ ಕಾರ್ಯಕ್ರಮದ ವೇದಿಕೆಯನ್ನು ಹಿಂಗಾರ ಅರಳಿಸಿ ಹುಲಿವೇಷ ಕುಣಿತ ಸ್ಪರ್ಧೆಗೆ ಚಾಲನೆ ನೀಡಿದರು.

ಹುಲಿಕುಣಿತಕ್ಕೆ ಧಾರ್ಮಿಕ ನಂಬಿಕೆ ಇದೆ-ನಳಿನ್ ಕುಮಾರ್ ಕಟೀಲ್:
ದೀಪ ಪ್ರಜ್ವಲಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್‌ರವರು ಅದ್ಭುತವಾದ ಸಂಘಟನೆ ಮಾಡಿದ ವಿಜಯ ಸಾಮ್ರಾಟ್ ಪುತ್ತೂರಿನ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ವಿಶಿಷ್ಟವಾದ ಪರಂಪರೆಯನ್ನು ಹೊಂದಿರುವ ಜಿಲ್ಲೆ ದ.ಕ. ಇಲ್ಲಿ ಸಾಂಸ್ಕೃತಿಕ ಪರಂಪರೆ ಇದೆ. ಕೃಷಿ, ಕ್ರೀಡೆ, ಯಕ್ಷಗಾನ, ಕೋಳಿಅಂಕ, ಕಂಬಳದಲ್ಲಿ ದೇವರನ್ನು ಕಂಡವರು ತುಳುನಾಡಿನ ಜನರು. ಹುಲಿಕುಣಿತಕ್ಕೆ ಧಾರ್ಮಿಕ ನಂಬಿಕೆ ಇದೆ. ನವರಾತ್ರಿ ಸಮಯದಲ್ಲಿ ದೇವಿಗೆ ಪ್ರಿಯವಾದ ಹುಲಿವೇಷ ಹಾಕುತ್ತಾರೆ. ಇದರಲ್ಲಿ ವಿಶೇಷವಾದ ನಂಬಿಕೆ ಇದೆ. ಸಾಂಸ್ಕೃತಿಕ ಲೋಕಕ್ಕೆ ದೇವರ ನಂಬಿಕೆಯನ್ನು ಕೊಟ್ಟದ್ದು ತುಳುನಾಡು ಎಂದರು. ಪಿಲಿಗೊಬ್ಬು ಎಂದರೆ ಕೇವಲ ಹಾಸ್ಯ, ಕುಣಿತ ಅಲ್ಲ. ಇದಕ್ಕೊಂದು ಪರಿಕಲ್ಪನೆ ಕೊಟ್ಟವರು ವಿಜಯಸಾಮ್ರಾಟ್. ಪುತ್ತೂರು ಜಾತ್ರೆಯಂತೆ ಪಿಲಿಗೊಬ್ಬು ಖ್ಯಾತಿ ಹೊಂದಲಿ. ಪರಂಪರೆ, ನಂಬಿಕೆ, ಆರಾಧನೆ, ಭಾವನೆ ಉಳಿಯುವ ಮೂಲಕ ಕಾರ್ಯಕ್ರಮ ಅನುಷ್ಠಾನ ಆಗಲಿ ಎಂದ ಅವರು ಇಂತಹ ಯೋಜನಬದ್ಧವಾದ ಸಂಘಟನಾ ಕಾರ್ಯ ಮಾಡಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ತುಳುನಾಡಿನಲ್ಲಿ ಹುಟ್ಟಿದ ನಾವು ಭಾಗ್ಯವಂತರು-ರವಿ ಶೆಟ್ಟಿ ಮೂಡಂಬೈಲು:
ಸ್ಪರ್ಧಾ ಕಾರ್ಯಕ್ರಮದ ವೇದಿಕೆಯನ್ನು ಹಿಂಗಾರ ಅರಳಿಸಿ ಉದ್ಘಾಟಿಸಿದ ಉದ್ಯಮಿ, ಕರ್ನಾಟಕ ಸಂಘ ಕತ್ತಾರ್ ಇದರ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಮಾತನಾಡಿ ದೈವಿಕ, ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಹಿನ್ನಲೆ ಇರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸೌಭಾಗ್ಯ. ತುಳುನಾಡಿನಲ್ಲಿ ಹುಟ್ಟಿದ ನಾವು ಭಾಗ್ಯವಂತರು. ನಮ್ಮ ಜೀವನ ಸಾರ್ಥಕವಾಗಲು ನಮ್ಮನ್ನು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಸಾಧನೆ ಮಾಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಸಾರ್ಥಕ್ಯ ಜೀವನ ಪಡೆಯಬೇಕು ಎಂದರು. ವಿಜಯ ಸಾಮ್ರಾಟ್ ಸಂಸ್ಥೆಯ ಮೂಲಕ ಯುವಕರನ್ನು ಸಏರಿಸಿಕೊಂಡು ನಡೆಸುತ್ತಿರುವ ಕಾರ್ಯಕ್ರಮ ಉತ್ತಮವಾದುದು. ದೇಶದಲ್ಲಿ ಯುವಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಉತ್ತಮ ಸಮಾಜ ಕಟ್ಟುವಲ್ಲಿ ದೇವರ ಹಾಗೂ ಹಿರಿಯರ ಆಶೀರ್ವಾದ ಇರಲಿ ಎಂದು ಹಾರೈಸಿದರು.

ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಆಟ, ಊಟ ಎರಡೂ ಇದೆ-ಕೇಶವ ಪ್ರಸಾದ ಮುಳಿಯ:
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ ಮುಳಿಯ ಮಾತನಾಡಿ ಪಿಲಿಗೊಬ್ಬು ಕಾರ್ಯಕ್ರಮದಲ್ಲಿ ಜನರಿಗೆ ಖುಷಿಯಾಗುವುದು ಆಟ ಮತ್ತು ಊಟ. ಅವೆರಡೂ ಇಲ್ಲಿ ಇದೆ. 9 ತಿಂಗಳಿನಿಂದ 90 ವರ್ಷದ ಹಿರಿಯರವರೆಗೂ ಸಂಚಲನ ಉಂಟು ಮಾಡುವ ಕಾರ್ಯಕ್ರಮ ಪಿಲಿಗೊಬ್ಬು. ದೇವಸ್ಥಾನ ಅಂದರೆ ಹಲವು ಕಾರ್ಯಕ್ರಮಗಳು ನಡೆಯಬೇಕು. ಇಂತಹ ಕಾರ್ಯಕ್ರಮಗಳು ನಡೆಯಲು ಇರುವ ದೇವರಮಾರು ಗದ್ದೆಯಲ್ಲಿ ಮುಂದೆಯೂ ಇಂತಹ ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿದ ಅವರು ಪಿಲಿಗೊಬ್ಬು ಕಾರ್ಯಕ್ರಮ ಆಯೋಜನೆ ಮಾಡಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಧಾರ್ಮಿಕ, ಸಾಂಸ್ಕೃತಿಕವಾಗಿ ಕೊಡುಗೆ ನೀಡಿದ ಜಿಲ್ಲೆ ದ.ಕ.-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಮಾರ್ನೆಮಿ ಎಂಬ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಹಬ್ಬ. ಮಾರ್ನೆಮಿ ಪದ ತುಳುನಾಡಿನಲ್ಲಿ ಮನೆಮಾತಾಗಿ ಪಿಲಿಗೊಬ್ಬು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿಯಲ್ಲಿ ನಡೆಯುತ್ತದೆ. ಜಗತ್ತಿನಾದ್ಯಂತ ಹೊಟೇಲ್ ಉದ್ಯಮ, ಶೈಕ್ಷಣಿಕ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಜಿಲ್ಲೆ ದ,ಕ.ಜಿಲ್ಲೆಯಾಗಿದೆ. ಇದರ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಕೊಡುಗೆ ನೀಡಿದ ಜಿಲ್ಲೆಯೂ ಆಗಿದೆ. ಬೇರೆ ಬೇರೆ ಕಾರ್ಯಕ್ರಮಗಳನ್ನು ಆಚರಣೆ ಮಾಡುವುದರ ಮೂಲಕ ಜಗತ್ತಿನಲ್ಲಿ ಹಿರಿಮೆ, ಗರಿಮೆಯನ್ನು ಸಾರಿದೆ ಎಂದರು. ಹುಲಿ ವೇಷ ಎಂದರೆ ಬಣ್ಣಕ್ಕೆ, ವೇಷಕ್ಕೆ ಸೀಮಿತವಾಗದೆ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ. ತುಳುನಾಡಿನ ಪರಂಪರೆ ವೈಭವವನ್ನು ವಿಶ್ವವಿಖ್ಯಾತಗೊಳಿಸುವ ಕಾರ್ಯ ಆಗುತ್ತಿದೆ. ಈ ಕೆಲಸ ಮಾಡಿದ ವಿಜಯಸಾಮ್ರಾಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ಯಶಸ್ವಿಯಾಗಲಿ-ಬಲರಾಮ ಆಚಾರ್ಯ:
ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಮಾತನಾಡಿ ತುಳುನಾಡಿನ ಜಾನಪದ ಹಿನ್ನಲೆಯುಳ್ಳ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿ ಕಾರ್ಯಕ್ರಮ ಸಂಘಟಿಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಮಂಗಳೂರಿನಲ್ಲಿದ್ದ ಪಿಲಿಗೊಬ್ಬು ಪುತ್ತೂರಿಗೂ ಬಂದಿದೆ-ಸುನಿಲ್ ಆಚಾರ್:
ಅಧ್ಯಕ್ಷತೆ ವಹಿಸಿದ್ದ ಆರ್‌ಎಸ್‌ಎಸ್‌ನ ಹಿರಿಯರು, ಉದ್ಯಮಿ ಸುನಿಲ್ ಆಚಾರ್ ಮಾತನಾಡಿ ಪಿಲಿಗೊಬ್ಬು ಕಾರ್ಯಕ್ರಮ ಮಂಗಳೂರಿನಲ್ಲಿ ಮಾತ್ರ ಇದೆ ಎಂದು ಅಂದುಕೊಂಡಿದ್ದೆ. ಆದರೆ ಅದನ್ನು ವಿಜಯಸಾಮ್ರಾಟ್ ತಂಡ ಪುತ್ತೂರಿನಲ್ಲಿಯೂ ಸಂಘಟಿಸಿದೆ. ಇದು ಹೆಮ್ಮೆಯ ವಿಚಾರ ಎಂದ ಅವರು ವಿಜಯ ಸಾಮ್ರಾಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.

ಮಹಾಲಿಂಗೇಶ್ವರ ದೇವರ ಪ್ರೇರಣೆಯಿಂದಲೇ ಆಗಿದೆ-ಉಮೇಶ್ ನಾಯಕ್:
ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಪ್ರಾಸ್ತಾವಿಕ ಮಾತನಾಡಿ ವಿಜಯ ಸಾಮ್ರಾಟ್ ಸಂಸ್ಥೆ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿತ್ತು. ಹಿಂದಿನ ಕಾಲದಲ್ಲಿ ಶ್ರೀಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿ ಹುಲಿವೇಷ ಕುಣಿತ ನಡೆಯುತ್ತಿತ್ತು ಎಂಬ ನಂಬಿಕೆ ಇದೆ. ಇದೀಗ ಸಹಜ್ ರೈ ನೇತೃತ್ವದಲ್ಲಿ ಹುಲಿಕುಣಿತ ವೈಭವ ಕಾಣುತ್ತಿದೆ ಇದಕ್ಕೆ ಮಹಾಲಿಂಗೇಶ್ವರ ದೇವರ ಪ್ರೇರಣೆಯಾಗಿದೆ ಎಂದರು. ಮಂಗಳೂರು, ಉಡುಪಿಯಲ್ಲಿ ನಡೆಯುತ್ತಿದ್ದ ಪಿಲಿಗೊಬ್ಬು ಪುತ್ತೂರಿನಲ್ಲಿಯೂ ನಡೆಸಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮ ಹುಟ್ಟಿಕೊಂಡಿದೆ. 2020ರಲ್ಲಿಯೇ ಪಿಲಿಗೊಬ್ಬು ಆಯೋಜನೆ ಮಾಡಬೇಕೆಂದು ತೀರ್ಮಾನಿಸಿದ್ದೆವು. ಆದರೆ ಕೋವಿಡ್ ಕಾರಣದಿಂದ ಸಾಧ್ಯವಾಗಲಿಲ್ಲ. ಬಳಿಕ ಸಾಮಾಜಿಕ ಕಾರ್ಯಗಳನ್ನು ವಿಜಯಸಾಮ್ರಾಟ್ ಸಂಸ್ಥೆಯಿಂದ ಮಾಡಲಾಗಿತ್ತು ಎಂದರು. ಕಳೆದ ಬಾರಿ ಪಿಲಿಗೊಬ್ಬು ಸೀಸನ್-1 ಕಾರ್ಯಕ್ರಮ ಮಾಡಿದ್ದೆವು ಅದರೊಂದಿಗೆ ಆಹಾರ ಮೇಳ ಕೂಡ ಆಯೋಜಿಸಿದ್ದೆವು, ಆಹಾರ ಮೇಳ ಯಶಸ್ವಿಯಾಗಿತ್ತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ 200 ಸದಸ್ಯರ ಪಾತ್ರ ದೊಡ್ಡದಾಗಿದೆ ಎಂದು ಹೇಳಿದರು.

ಬ್ರೈಟ್‌ವೇ ಇಂಡಿಯಾ ಮಂಗಳೂರು ಇದರ ಆಡಳಿತ ನಿರ್ದೇಶಕ ಹರ್ಷಕುಮಾರ್ ರೈ ಮಾಡಾವು, ಪುತ್ತೂರು ಅರಣ್ಯ ಇಲಾಖೆಯ ಆರ್‌ಎಫ್‌ಒ ಕಿರಣ್ ಬಿ.ಎಂ., ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಜಯರಾಮ ರೈ ಬಳೆಜ್ಜ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ ಜೈನ್, ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ರಮೇಶ್ ರೈ ಮೊಟ್ಟೆತ್ತಡ್ಕ, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಕೃಷಿಕರಾದ ಎ.ಕೆ.ಜಯರಾಮ ರೈ, ಕುಂಬ್ರ ದಯಾಕರ ಆಳ್ವ, ಸುಧೀರ್ ರೈ ನೇಸರ, ಸುಜಿತ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಶಾಂತೇರಿ ಶೆಣೈ ಪ್ರಾರ್ಥಿಸಿದರು. ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ರೈ ಬಳೆಜ್ಜ ಸ್ವಾಗತಿಸಿ ಸದಸ್ಯ ಆದರ್ಶ ಶೆಟ್ಟಿ ಉಪ್ಪಿನಂಗಡಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

200 ಜನರ ತಂಡದ ವಿಜಯಸಾಮ್ರಾಟ್ ತಂಡ
2020ರಲ್ಲಿ 20 ಸದಸ್ಯರ ತಂಡದೊಂದಿಗೆ ವಿಜಯ ಸಾಮ್ರಾಟ್ ಸಂಸ್ಥೆ ಪ್ರಾರಂಭ ಮಾಡಿದ್ದೇವೆ. ಈಗ 200 ಜನರ ತಂಡದೊಂದಿಗೆ ಸಾಮಾಜಿಕ ಸೇವೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಪಿಲಿಗೊಬ್ಬು ಕಾರ್ಯಕ್ರಮ ಆಯೋಜಿಸಿದ್ದೇವೆ. 2020ರಲ್ಲಿ ಕೋವಿಡ್ ಎದುರಿಸುವ ಸನ್ನಿವೇಶ ಸೃಷ್ಟಿಯಾಯಿತು. ಸುಮಾರು 3000 ಕುಟುಂಬಗಳಿಗೆ ಕೋವಿಡ್ ಕಿಟ್ ನೀಡಿದ್ದೆವು. ಅಲ್ಲದೆ ಸಾಮಾಜಿಕ ಕಾರ್ಯಗಳನ್ನು ವಿಜಯಸಾಮ್ರಾಟ್‌ನಿಂದ ಮಾಡಿದ್ದೇವೆ. ಕಳೆದ ಬಾರಿ 1 ಲಕ್ಷಕ್ಕಿಂತಲೂ ಅಧಿಕ ಜನರೂ ಸೇರುವ ಮೂಲಕ ಪಿಲಿಗೊಬ್ಬು ಸೀಸನ್-1 ಯಶಸ್ವಿಯಾಗಿದೆ
ಸಹಜ್ ರೈ ಬಳೆಜ್ಜ
ಗೌರವಾಧ್ಯಕ್ಷರು, ಪಿಲಿಗೊಬ್ಬು ಸಮಿತಿ

ಸ್ವಚ್ಚತಾ ತಂಡಕ್ಕೆ ಗೌರವಾರ್ಪಣೆ
ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದ ಸ್ವಚ್ಚತಾ ತಂಡವನ್ನು ಗೌರವಿಸಲಾಯಿತು. ಕಳೆದ ಬಾರಿ ಸ್ಚಚ್ಚತೆ ನಿರ್ವಹಿಸಿ ಶ್ಲಾಘನೆ ವ್ಯಕ್ತವಾಗಿದ್ದ ಗದಗದ ರೇಣುಕಾ ನೇತೃತ್ವದ ತಂಡವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶಾಲು ಹಾಕಿ ಗೌರವಿಸಿದರು.

ಚಿತ್ರ: ಅರುಣ್ ಆರ್ಲಪದವು

LEAVE A REPLY

Please enter your comment!
Please enter your name here