ಕೌಡಿಚ್ಚಾರು: ಅಂಗಡಿಗೆ ಮಳೆ ನೀರು ನುಗ್ಗಿ ಅಪಾರ ನಷ್ಟ – ಚರಂಡಿ ಅವ್ಯವಸ್ಥೆಯಿಂದ ಕೃತಕ ನೆರೆ ಸೃಷ್ಟಿ

0

ಪುತ್ತೂರು: ತಾಲೂಕಿನಾದ್ಯಂತ ಇಂದು (ಅ.06) ಮಧ್ಹಾಹ್ನದಿಂದ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಕಡೆಗಳಲ್ಲಿ ರಸ್ತೆ ಮತ್ತು ಚರಂಡಿ ಅವ್ಯವಸ್ಥೆಯಿಂದಾಗಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿ ವಾಹನ ಸವಾರರು ಮತ್ತು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡಿಚ್ಚಾರಿನಲ್ಲಿ ಎಸ್. ಇಸ್ಮಾಯಿಲ್ ಹಾಜಿ ಅವರ ಜಿನಸು ಅಂಗಡಿಗೆ ಮಳೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಸಾಮಾಗ್ರಿಗಳು, ಕಾಳು ಮೆಣಸು, ಅಡಿಕೆ ಮೊದಲಾದ ವಸ್ತುಗಳು ನೀರುಪಾಲಾಗಿ ಅಂದಾಜು 50 ಸಾವಿರಕ್ಕೂ ಅಧಿಕ ಮೌಲ್ಯದ ನಷ್ಟ ಉಂಟಾಗಿದೆ.

ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮಾಯಿಲಕೊಟ್ಟಿಗೆ ಸಂಪರ್ಕ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಭಾರೀ ಮಳೆಗೆ ನೀರೆಲ್ಲಾ ರಸ್ತೆಯಲ್ಲಿ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಸ್ಮಾಯಿಲ್ ಹಾಜಿ ಅವರ ಅಂಗಡಿ ಸೇರಿದಂತೆ ಈ ಭಾಗದಲ್ಲಿರುವ ಇನ್ನೂ ಕೆಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ದು, ಆದರೆ ಇಸ್ಮಾಯಿಲ್ ಹಾಜಿ ಅವರ ಅಂಗಡಿಯೊಳಗೆ ಪೂರ್ತಿಯಾಗಿ ಮಳೆ ನೀರು ತುಂಬಿ ಸಾಮಾಗ್ರಿಗಳೆಲ್ಲಾ ನೀರಿನಲ್ಲಿ ತೇಲುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯರಾದ ಇಕ್ಬಾಲ್ ಹಸೈನ್ ಮತ್ತು ಅಲ್ಫಾಝ್ ಕೌಡಿಚ್ಚಾರು ಅವರು ಅಂಗಡಿಯೊಳಗಿದ್ದ ಸಾಮಾಗ್ರಿಗಳನ್ನು ತೆರವುಗೊಳಿಸುವಲ್ಲಿ ಸಹಕರಿಸಿದರು.

ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಭಾಗದಲ್ಲಿನ ಚರಂಡಿ ಅವ್ಯವಸ್ಥೆಯನ್ನು ಶೀಘ್ರವಾಗಿ ಸರಿಪಡಿಸುವಂತೆ ಎಸ್. ಇಸ್ಮಾಯಿಲ್ ಹಾಜಿ ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here