ಸೌತಡ್ಕದಲ್ಲಿ ವಿ.ಹಿಂ.ಪದಿಂದ ಉಪವಾಸ ಸತ್ಯಾಗ್ರಹ- ಸರಕಾರದ ಹಿಡಿತದಿಂದ ದೇವಾಲಯಗಳ ಮುಕ್ತಿಗೆ ಆಗ್ರಹ

0

ನೆಲ್ಯಾಡಿ: ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಿಗೊಳಿಸಿ ಹಿಂದೂ ಸ್ವಾಯತ್ತೆ ಮಂಡಳಿಯನ್ನು ರಚಿಸಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಇದರ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಅ.6ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ನಡೆಯಿತು.

ಬೆಳಿಗ್ಗೆ ಸೌತಡ್ಕ ಕ್ಷೇತ್ರದಲ್ಲಿ ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಕೊಕ್ಕಡದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧೀನದ ವಠಾರದಲ್ಲಿ ಹಾಕಲಾಗಿದ್ದ ಸಭಾಮಂಟಪದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು. ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಕೊಕ್ಕಡ ಹಾಗೂ ಕೊಕ್ಕಡ ವೈದ್ಯ ಡಾ. ಮೋಹನ್ ದಾಸ್ ಗೌಡ ಅವರು ದೀಪ ಪ್ರಜ್ವಲಿಸಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಬಳಿಕ ಸಂಜೆಯ ತನಕವೂ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.


ಸುಬ್ರಹ್ಮಣ್ಯ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಶ್ವಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಅಧ್ಯಕ್ಷ ಕೃಷ್ಣ ಪ್ರಸನ್ನ, ಉಪಾಧ್ಯಕ್ಷ ಸತೀಶ್ ಬಿ.ಎಸ್., ಕಾರ್ಯದರ್ಶಿ ನವೀನ್ ನೆರಿಯ, ಸಹ ಕಾರ್ಯದರ್ಶಿ ಶ್ರೀಧರ್, ಪ್ರಮುಖರಾದ ಮೂಲಚಂದ್ರ ಕಾಂಚನ, ಪ್ರಮೋದ್ ಕಡಬ, ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ಸಂತೋಷ ಅತ್ತಾಜೆ, ಮೋಹನ್ ಬೆಳ್ತಂಗಡಿ, ಆರ್ ಎಸ್ ಎಸ್ ತಾ. ಸಂಘ ಚಾಲಕ್ ಗಣೇಶ್ ಕಾಂತಾಜೆ, ವಿಭಾಗ ಸಾಮರಸ್ಯ ಸಂಯೋಜಕ್ ಶಿಪಪ್ರಸಾದ್ ಮಲೆಬೆಟ್ಟು, ಧರ್ಮಾಚಾರ್ಯ ಪ್ರಮುಖ್ ಶಶಾಂಕ್ ಭಟ್, ಕಳೆಂಜ ಗೋ ಶಾಲೆ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ ದಯಾಕರ್, ಬಿ.ಎಂ.ಎಸ್ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ಧಾರ್ಮಿಕ ಕೇಂದ್ರಗಳ ಪ್ರಮುಖರಾದ ಕುಶಾಲಪ್ಪ ಗೌಡ ಪೂವಾಜೆ, ಹರೀಶ್ ರಾವ್ ಮುಂಡ್ರುಪ್ಪಾಡಿ, ಪುರುಷೋತ್ತಮ ಭಟ್ ವೇಣೂರು, ಪ್ರಸನ್ನ ದರ್ಬೆ, ಕಿಶೋರ್ ಶಿರಾಡಿ, ರವೀಶ್ ಪಡುಮಲೆ, ಬಾಲಕೃಷ್ಣ ನೈಮಿಷ. ಪ್ರಕಾಶ್ ಚಾರ್ಮಾಡಿ, ಭಾಸ್ಕರ ಪೈ, ಪ್ರಕಾಶ ನಾರಾಯಣ, ಪುರಂದರ ಗೌಡ, ಪ್ರಭಾಕರ ಗೌಡ, ಪುರುಷೋತ್ತಮ ಕೊಕ್ಕಡ, ರವಿಚಂದ್ರ ಪಿ., ಶಶಿಧರ ಕೊಕ್ಕಡ, ಗಣೇಶ್ ಕೊಕ್ಕಡ ಮೊದಲಾದವರು ಭಾಗವಹಿಸಿದ್ದರು.

ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ವಿಶ್ವಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಅವರು, ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಹಿಂದೂ ಸಮಾಜಕ್ಕೆ ಕೊಡಬೇಕೆಂಬ ಆಗ್ರಹವನ್ನು ವಿಶ್ವ ಹಿಂದೂ ಪರಿಷತ್ ಹಲವು ವರ್ಷಗಳಿಂದ ಮಾಡುತ್ತಿದೆ. ರಾಜ್ಯದಲ್ಲಿ 1.80 ಲಕ್ಷ ದೇವಾಲಯ, ಭಜನಾಮಂದಿರ, ದೈವಸ್ಥಾನವಿದೆ. ಇದರಲ್ಲಿ 35 ಸಾವಿರ ದೇವಾಲಯ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ವಾರ್ಷಿಕವಾಗಿ ಸಾವಿರಾರು ಕೋಟಿ ರೂ.ಆದಾಯ ಗಳಿಸುತ್ತಿವೆ. ಆದರ ಸರಕಾರ ಇದರ ಲೆಕ್ಕ ಬಹಿರಂಗಪಡಿಸುತ್ತಿಲ್ಲ. ಈ ಹಣವನ್ನು ಬೇರೆ ಕಾರ್ಯಗಳಿಗೆ, ನೂರಾರು ಮಸೀದಿ, ಚರ್ಚ್‌ಗಳ ಅಭಿವೃದ್ಧಿಗೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.

ದೇವಸ್ಥಾನದ ಪಾವಿತ್ರ್ಯತೆ ಉಳಿಯಬೇಕು. ದೇವಸ್ಥಾನಗಳಲ್ಲಿ ನಿತ್ಯ ಭಜನೆ, ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕು. ಗೋ ಶಾಲೆ, ಗ್ರಂಥಾಲಯ ನಿರ್ಮಾಣ ಆಗಬೇಕು. ಆದ್ದರಿಂದ ಮುಜರಾಯಿ ಇಲಾಖೆಯ ಆಡಳಿತದಲ್ಲಿರುವ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ನೀಡಬೇಕು. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ವತಿಯಿಂದ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಉಪವಾಸ ಸತ್ಯಾಗ್ರಹ ನಡೆದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಉಪವಾಸ ಸತ್ಯಾಗ್ರಹ ಅಭಿಯಾನ ನಡೆಯಲಿದೆ ಎಂದರು.

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಕೊಕ್ಕಡ, ಕಳೆಂಜ ಗೋ ಶಾಲೆ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ ದಯಾಕರ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಂತಿಮಂತ್ರದ ಬಳಿಕ ಪಾನೀಯ ಸ್ವೀಕರಿಸಿ ಉಪವಾಸ ಸತ್ಯಾಗ್ರಹ ಮುಕ್ತಾಯಗೊಳಿಸಲಾಯಿತು. ನಂತರ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here