ಕುಂಬ್ರ ವರ್ತಕರ ಸಂಘದ ಸ್ಥಾಪನಾ ದಿನಾಚರಣೆ, ಅದೃಷ್ಟ ಚೀಟಿ ಬಿಡುಗಡೆ

0

ಸಂಘದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಮೂಡಿಬರಲಿ: ರಕ್ಷಿತ್ ರೈ

ಪುತ್ತೂರು: ಕುಂಬ್ರ ವರ್ತಕರ ಸಂಘದ 20 ವರ್ಷಗಳ ಅವಲೋಕನವನ್ನು ಮಾಡಿದಾಗ ಬಹಳಷ್ಟು ಸಂತೋಷವಾಗುತ್ತದೆ. ಒಂದು ಸಂಘ ಸಮಾಜಕ್ಕೆ ಏನೇನು ಒಳ್ಳೆಯ ಕೆಲಸಗಳನ್ನು ಮಾಡಬಹುದೋ ಅದನ್ನೆಲ್ಲಾ ವರ್ತಕರ ಸಂಘ ಮಾಡಿ ತೋರಿಸಿದೆ. ಸಂಘದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಮೂಡಿಬರಲಿ, 20ನೇ ವರ್ಷಾಚರಣೆ ಯಶಸ್ವಿಯಾಗಲಿ ಎಂದು ಬಾಂತಲಪ್ಪ ಜನಸೇವಾ ಸಮಿತಿ ಕುಂಬ್ರ ಇದರ ಅಧ್ಯಕ್ಷ ಎ.ರಕ್ಷಿತ್ ರೈ ಮುಗೇರು ಹೇಳಿದರು.


ಅವರು ಅ.10 ರಂದು ಕುಂಬ್ರ ಜಂಕ್ಷನ್‌ನಲ್ಲಿ ನಡೆದ ಕುಂಬ್ರ ವರ್ತಕರ ಸಂಘದ ಸ್ಥಾಪನಾ ದಿನಾಚರಣೆ ಹಾಗೂ ಅದೃಷ್ಟ ಚೀಟಿ ಬಿಡುಗಡೆ ಸಮಾರಂಭದಲ್ಲಿ ಅದೃಷ್ಟ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯರವರು ಮಾತನಾಡಿ, ಸಂಘದ 20 ವರ್ಷಾಚರಣೆಗೆ ವರ್ತಕ ಬಂಧುಗಳು ಸರ್ವ ರೀತಿಯ ಸಹಕಾರ ನೀಡುವಂತೆ ಕೇಳಿಕೊಂಡು, ಸಂಘದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಕೋರಿದರು. ಸಂಘದ ಗೌರವ ಸಲಹೆಗಾರರುಗಳಾದ ಒಳಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಸಂಘ ನಡೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಸಂಘದ ಕೋಶಾಧಿಕಾರಿ ಎ.ಆರ್.ಸಂಶುದ್ದೀನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದ್ದರು.


10 ಗಂಟೆ 10 ನಿಮಿಷಕ್ಕೆ ದೀಪ ಪ್ರಜ್ವಲನೆ
ಕುಂಬ್ರ ವರ್ತಕರ ಸಂಘವು 2004 ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಉದ್ಘಾಟನೆಗೊಂಡಿದ್ದು ಅದರ ಸವಿನೆನಪಿಗಾಗಿ ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ದೀಪ ಪ್ರಜ್ವಲನೆಯ ಮೂಲಕ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ನ.16ರಂದು 20ನೇ ವರ್ಷಾಚರಣೆ ಕುಂಬ್ರ ಜಂಕ್ಷನ್‌ನಲ್ಲಿ ವಿಜೃಂಭಣೆಯಿಂದ ಜರಗಲಿದೆ.

ಅಂಗನವಾಡಿ,ಶಾಲೆಗಳಿಗೆ ಕೊಡುಗೆ
ಸಂಘದ ಸ್ಥಾಪನಾ ದಿನಾಚರಣೆಯ ಅಂಗವಾಗಿ ಪರ್ಪುಂಜ ಅಂಗನವಾಡಿಗೆ 1 ಸಾವಿರ ಸಹಾಯಧನ, ಪರ್ಪುಂಜ ಶಾಲೆಗೆ 2 ಸಾವಿರ ಸಹಾಯಧನ ಮತ್ತು ಕೊಲತ್ತಡ್ಕ ಅಂಗನವಾಡಿಗೆ ಆಟಿಕೆ ಸಾಮಾಗ್ರಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ನ.16ಕ್ಕೆ 20ನೇ ವರ್ಷಾಚರಣೆ
ಕುಂಬ್ರ ವರ್ತಕರ ಸಂಘಕ್ಕೆ 20 ವರ್ಷಗಳು ತುಂಬಿದ್ದು ಇದರ ಅಂಗವಾಗಿ ನ.16ರಂದು ಕುಂಬ್ರ ಜಂಕ್ಷನ್‌ನಲ್ಲಿ 20ನೇ ವರ್ಷಾಚರಣೆ ಬೃಹತ್ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here