ಅಬ್ದುಲ್ ರಹಿಮಾನ್ ಹಾಜಿಯವರಿಂದ ಸಚಿವ ದಿನೇಶ್ ಗುಂಡೂರಾವ್ಗೆ ಮನವಿ
ಪುತ್ತೂರು: ನೆ.ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆ ವೈದ್ಯಕೀಯ ಸೇವೆಯೊಂದಿಗೆ ಇಬ್ಬರು ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರ ಪರವಾಗಿ ಮೇನಾಲ ಮಧುರಾ ಇಂಟರ್ನ್ಯಾಶನಲ್ ಸ್ಕೂಲ್ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.
ಈಶ್ವರಮಂಗಲದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 12 ಸಾವಿರ ಜನಸಂಖ್ಯೆ ಇದ್ದು ಪಕ್ಕದ ಪಡುವನ್ನೂರು, ಬಡಗನ್ನೂರು, ಮಾಡ್ನೂರು, ಕೊಳ್ತಿಗೆ ಗ್ರಾಮದವರು ಇಲ್ಲಿಗೆ ಬರುತ್ತಾರೆ. ಅದೇ ರೀತಿ ಕರ್ನಾಟಕ-ಕೇರಳ ಗಡಿ ಪ್ರದೇಶದ ದೇಲಂಪಾಡಿ, ಅಡೂರು, ಆದೂರು ಗ್ರಾಮಗಳಿಂದಲೂ ಇಲ್ಲಿಗೆ ಔಷಧಿಗೆಂದು ಜನರು ಆಗಮಿಸುತ್ತಿರುತ್ತಾರೆ. ಆದರೆ ಇಲ್ಲಿ ಸಂಜೆ 4.30 ಗಂಟೆಯ ನಂತರ ಹಾಗೂ ಬೆಳಿಗ್ಗೆ 9 ಗಂಟೆಯ ತನಕ ರೋಗಿಗಳು ಬರುವ ಹಾಗಿಲ್ಲ, ಏಕೆಂದರೆ 4.30 ಗಂಟೆಗೆ ಆಸ್ಪತ್ರೆ ಬಾಗಿಲು ಮುಚ್ಚುತ್ತದೆ. ಮಾತ್ರವಲ್ಲದೇ ಈಗ ಇರುವ ವೈದ್ಯರು ವಾರಕ್ಕೆ 2 ದಿನ ಮಾತ್ರ ಬರುತ್ತಿದ್ದು, ಇಲ್ಲಿ ಖಾಯಂ ವೈದ್ಯಾಧಿಕಾರಿ ಇಲ್ಲ. ಈ ಎಲ್ಲಾ ಕಾರಣಗಳಿಂದ ಯಾವುದೇ ವೈದ್ಯಕೀಯ ತಪಾಸಣೆಗೂ ಕೂಡಾ ದುಬಾರಿ ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯನ್ನು ಅವಲಂಭಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಆಸ್ಪತ್ರೆ ಕಟ್ಟಡವು ವರ್ಷಗಳ ಹಿಂದೆ 1 ಕೋಟಿ 78 ಲಕ್ಷ ವೆಚ್ಚದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಕಟ್ಟಡದ ವಿಚಾರವಾಗಿ ಯಾವುದೇ ಸಮಸ್ಯೆ ಇಲ್ಲಿಲ್ಲ. ಹಾಗಾಗಿ ಇಲ್ಲಿನ ಮುಖ್ಯವಾದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿಗೆ ದಿನದ 24 ಗಂಟೆ ವೈದ್ಯಕೀಯ ಸೇವೆಯೊಂದಿಗೆ ಇಬ್ಬರು ಖಾಯಂ ವೈದ್ಯಾಧಿಕಾರಿಗಳ ನೇಮಕಾತಿ ಮಾಡಿ ಗ್ರಾಮಸ್ಥರಾದ ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಅಬ್ದುಲ್ ರಹಿಮಾನ್ ಹಾಜಿ ಮೇನಾಲ ತಿಳಿಸಿದ್ದಾರೆ.