ಮಂಗಳೂರು: ಕಂಕನಾಡಿ ಟ್ರಾಫಿಕ್ ಸಿಗ್ನಲ್ ಬಳಿ ಎರಡು ಖಾಸಗಿ ಬಸ್ಗಳ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡು ಒಂದು ಬಸ್ಸಿನ ಚಾಲಕ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಅ.10ರಂದು ಬೆಳಗ್ಗೆ 6.50ಕ್ಕೆ ವಿಟ್ಲದಿಂದ ಹೊರಟು ಮಂಗಳೂರಿನ ಸ್ಟೇಟ್ ಬ್ಯಾಂಕ್ಗೆ ಬಂದು ವಿಟ್ಲಕ್ಕೆ ಮರಳುತ್ತಿದ್ದ ಸೆಲಿನಾ ಬಸ್ ಕಂಕನಾಡಿ ಸಿಗ್ನಲ್ ಬಳಿ ತಲುಪುತ್ತಿದ್ದಂತೆ ಧರಿತ್ರಿ ಹೆಸರಿನ ಇನ್ನೊಂದು ಬಸ್ಸಿನ ಚಾಲಕ ಸುರೇಶ್ ಮತ್ತು ನಿರ್ವಾಹಕ ರಾಕೇಶ್ ಏಕಾಏಕಿ ಸೆಲಿನಾ ಬಸ್ಗೆ ತಮ್ಮ ಬಸ್ಸನ್ನು ಅಡ್ಡ ಇಟ್ಟಿದ್ದಾರೆ. ಸೆಲಿನಾ ಬಸ್ನ ನಿರ್ವಾಹಕ ಭುವನೇಶ್ವರ್ ಮತ್ತು ಚಾಲಕ ಸಂದೀಪ್ ಅವರಿಗೆ ಪ್ರಯಾಣಿಕರ ಎದುರಲ್ಲೇ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಸಂದೀಪ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿಟ್ಲದಿಂದ ಮಂಗಳೂರಿಗೆ ಬರುತ್ತಿದ್ದಾಗ ಬಿ.ಸಿ.ರೋಡ್ನಲ್ಲಿ ಓವರ್ಟೇಕ್ ಮಾಡಿರುವ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿ ದೂರು ದಾಖಲು:
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಧರಿತ್ರಿ ಬಸ್ಸಿನ ಚಾಲಕ ಧರ್ಮಸ್ಥಳ ನಿವಾಸಿ ಸುರೇಶ್ ಕೂಡ ಪ್ರತಿದೂರು ನೀಡಿದ್ದಾರೆ. ಸೆಲಿನಾ ಬಸ್ ನಿರ್ವಾಹಕ ಭುವನೇಶ್ವರ್ ಜ್ಯೋತಿ ವೃತ್ತದ ಬಳಿ ಅವಾಚ್ಯ ಶಬ್ದಗಳಿಂದ ಬೈದು ಎಂಜಲು ಉಗಿದಿದ್ದಾನೆ. ನಮ್ಮ ಬಸ್ಸಿನ ಕಂಡೆಕ್ಟರ್ಗೆ ಕೈ ಸನ್ನೆ ಮಾಡಿ ಅವಾಚ್ಯವಾಗಿ ಮಾತನಾಡಿದ್ದಾನೆ. ಕಂಕನಾಡಿ ಸಿಗ್ನಲ್ ಬಳಿ ಬಸ್ಸನ್ನು ಅಡ್ಡಲಾಗಿ ಇಟ್ಟು ತನಗೆ ಮತ್ತು ನಿರ್ವಾಹಕ ರಾಕೇಶ್ಗೆ ಗಾಡಿ ತೊಳೆಯುವ ಬ್ರಶ್ನಿಂದ ಹಲ್ಲೆ ಮಾಡಿ, ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.