ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ರಸ್ತೆ ಮಧ್ಯೆಯೇ ಅಪಾಯಕಾರಿ ಗುಂಡಿಗಳು – ಗುಂಡಿ ತಪ್ಪಿಸುವ ಭರದಲ್ಲಿ ನಡೆದಿದೆ ಹಲವು ಅಪಘಾತ – ಅಗತ್ಯ ಕ್ರಮಕೈಗೊಳ್ಳಲು ಸಾರ್ವಜನಿಕರ ಆಗ್ರಹ

0

@ಸುಧಾಕರ್‌ ಕಾಣಿಯೂರು

ಕಾಣಿಯೂರು: ಹೇಳೋಕೆ ಹೋದರೆ ಇದು ರಾಜ್ಯದ ಹೆಸರಾಂತ ಪುಣ್ಯ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ. ಈ ರಸ್ತೆಯಲ್ಲಿ ಬಹುತೇಕ ಕಡೆ ಹೊಂಡ ಗುಂಡಿಗಳದ್ದೆ ಕಾರುಬಾರು. ಸುಬ್ರಹ್ಮಣ್ಯ- ಕಾಣಿಯೂರು-ಪುತ್ತೂರು- ಮಂಜೇಶ್ವರ ರಾಜ್ಯ ಹೆದ್ದಾರಿಯ ರಸ್ತೆ ತುಂಬಾ ಹೊಂಡ ಗುಂಡಿಗಳಿಂದ ಕೂಡಿದ್ದು, ರಸ್ತೆಯ ಮಧ್ಯೆಯೇ ಇರುವ ಒಂದೊಂದು ಗುಂಡಿಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ಹೊಂಡಮಯವಾಗಿರುವ ಈ ರಸ್ತೆಯಲ್ಲಿ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯ ಪರಿಸ್ಥಿತಿ. ಇಲ್ಲಿರುವ ಗುಂಡಿಗಳು ಸವಾರರ ಮತ್ತು ಪ್ರಯಾಣಿಕರ ಹೃದಯ ಬಡಿತ ಹೆಚ್ಚಿಸುವಂತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ವಾಹನ ಹೊಂಡಕ್ಕೆ ಬೀಳುವುದು ಖಚಿತ. ಗುಂಡಿಯನ್ನು ತಪ್ಪಿಸುವ ಭರದಲ್ಲಿ ಅದೆಷ್ಟೋ ಅಪಘಾತಗಳು ನಡೆದುಹೋದ ಉದಾಹರಣೆಗಳು ಇವೆ. ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಚರಿಸುವ ಯಾತ್ರಾರ್ಥಿಗಳು ಪುತ್ತೂರು ಕಾಣಿಯೂರು – ಸುಬ್ರಹ್ಮಣ್ಯ ರಸ್ತೆಯನ್ನೇ ಅವಲಂಭಿಸಿರುವುದರಿಂದ ದಿನ ನಿತ್ಯ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಚಲಿಸುತ್ತಿರುತ್ತವೆ. ಇಲ್ಲಿ ಹಲವಾರು ವಾಹನ ಅಪಘಾತಗಳು ನಡೆದರೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಿಲ್ಲ. ರಸ್ತೆಯ ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದು, ಸುಲಲಿತವಾಗಿ ವಾಹನ ಸಂಚರಿಸುವಂತೆ ಮಾಡಲು ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


ಈ ರಸ್ತೆಯಲ್ಲಿ ಸಂಚಾರ ಅಂದರೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ರಸ್ತೆಯಲ್ಲಿ ಹಲವಾರು ಹೊಂಡ ಗುಂಡಿಗಳು ಇರುವುದರಿಂದ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಗುಂಡಿ ತಪ್ಪಿಸುವ ಸಂದರ್ಭದಲ್ಲಿ ಹಲವಾರು ಅಪಘಾತಗಳು ನಡೆದ ಉದಾಹರಣೆಗಳೂ ಇದೆ. ತಕ್ಷಣ ಈ ರಸ್ತೆಯನ್ನು ಮರು ಡಾಮರೀಕರಣ ಮಾಡಿ ಅಭಿವೃದ್ಧಿಪಡಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾ.ಪಂ. ಬೆಳಂದೂರು ಮಾಜಿ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here